ಬೆಂಗಳೂರು(ಆ.03): ಕೊರೋನಾ ಸೋಂಕು ತಗುಲಿರುವ ಸುಮಾರು 160 ಗರ್ಭಿಣಿಯರಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.

ಆಸ್ಪತ್ರೆಗೆ ದಾಖಲಾಗುವ ಎಲ್ಲ ಗರ್ಭಿಣಿಯರಿಗೆ ಪ್ರಾಥಮಿಕ ಹಂತದಲ್ಲಿ ಕೊರೋನಾ ಪರೀಕ್ಷೆ ಮಾಡಲಾಗುವುದು. ಸೋಂಕು ದೃಢಪಟ್ಟ ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆ ಆವರಣದ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಆರೈಕೆ ಮಾಡಲಾಗುವುದು.

100 ಸೋಂಕಿತರಿಗೆ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ಸಾಧನೆ!

ಹೆರಿಗೆಯ ನಂತರ ತಾಯಿ ಮತ್ತು ಶಿಶುಗಳನ್ನು ಪ್ರತ್ಯೇಕವಾಗಿರಿಸಲಾಗುತ್ತಿದೆ. ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರದಿಂದ ಆ್ಯಂಬುಲೆನ್ಸ್‌ ಮೂಲಕ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಈವರೆಗೂ ಹೆರಿಗೆಯಾಗಿರುವ ತಾಯಿ ಮತ್ತು ಶಿಶುಗಳು ಆರೋಗ್ಯವಾಗಿದ್ದು, ಹಲವರನ್ನು ಮನೆಗೆ ಕಳುಹಿಸಲಾಗಿದೆ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಗೀತಾ ಶಿವಮೂರ್ತಿ ಮಾಹಿತಿ ನೀಡಿದರು. ಬಾಯಿಯಿಂದ ವೈರಸ್‌ ಇತರರಿಗೆ ಹರಡುತ್ತಿದ್ದು, ಮಗುವನ್ನು ತಾಯಿಯ ಮುಖದ ಬಳಿ, ತಾಯಿ ಬಳಸಿರುವ ಬಟ್ಟೆಗಳು ಮಗುವಿಗೆ ತಾಗದಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು.

ಸಂಬಂಧಿಕರು ಒಪ್ಪಿದ್ದಲ್ಲಿ ತಾಯಿ ಹಾಲು ವ್ಯವಸ್ಥೆ

ತಾಯಿಯ ಹಾಲು ಕುಡಿಯುವುದರಿಂದ ಮಗುವಿಗೆ ಕೊರೋನಾ ಸೇರಿದಂತೆ ಯಾವುದೇ ರೀತಿಯ ವೈರಸ್‌ ಹರಡುವುದಿಲ್ಲ. ಬಾಣಂತಿಯ ಸಂಬಂಧಿಕರು ಒಪ್ಪಿಗೆ ನೀಡಿದ್ದಲ್ಲಿ ತಾಯಿಯ ಮುಖಕ್ಕೆ ಮಾಸ್ಕ್‌ ಹಾಗೂ ಬಟ್ಟೆಯನ್ನು ಕಟ್ಟಿ ಮಗುವಿಗೆ ಹಾಲು ಕುಡಿಸಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಗೀತಾ ಶಿವಮೂರ್ತಿ ವಿವರಿಸಿದರು.