ದೆಹಲಿಯ ಕೆಂಪುಕೋಟೆ ಬಳಿಯ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಮುಜಾಯುದ್ದೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಿಂದೆ 'ಕಲಿಫತ್' ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಈತನಿಗೆ, ಪ್ರಸ್ತುತ ಸ್ಫೋಟ ಸಂಬಂಧ ವಿಚಾರಣೆ ನಡೆಸಿ ಬಿಟ್ಟುಕಳಿಸಲಾಗಿದೆ.
ತುಮಕೂರು(ನ.13): ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ PH ಕಾಲೋನಿ ನಿವಾಸಿ ಮುಜಾಯುದ್ದೀನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಸ್ಫೋಟ ನಡೆದ ಮರುದಿನವೇ ಈ ವಿಚಾರಣೆ ನಡೆದಿದ್ದು, ಘಟನೆಯಲ್ಲಿ ಭಾಗಿಯಾಗಿ ಎಂಬುದು ಖಾತರಿ ಹಿನ್ನೆಲೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಗಳು ವಿಚಾರಣೆ ಬಳಿಕ ಬಿಟ್ಟು ಕಳಿಸಿದ್ದಾರೆ.
ದೆಹಲಿ ಸ್ಫೋಟ ಬಳಿಕ ಅಲರ್ಟ್ ಆಗಿರುವ ರಾಜ್ಯ ಪೊಲೀಸರು, ಎಲ್ಲಾ ಸಂಶಯಾಸ್ಪದ ವ್ಯಕ್ತಿಗಳ ಮೇಲೆ 'ಖಾಕಿ ಡ್ರಿಲ್' ನಡೆಸುತ್ತಿದ್ದಾರೆ. ಈ ಸರಣಿಯ ಭಾಗವಾಗಿ, ಮುಜಾಯುದ್ದೀನ್ ಅವರನ್ನು ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆಯನ್ನು ನಡೆಸಿದ ಎಸ್‌ಪಿ ಪುರುಷೋತ್ತಮ್ ಅವರು, ಮುಜಾಯುದ್ದೀನ್ ಅವರಿಗೆ ದೆಹಲಿ ಸ್ಫೋಟದಲ್ಲಿ ಯಾವುದೇ ಕೈವಾಡ ಇಲ್ಲ. ತೀವ್ರ ವಿಚಾರಣೆ ನಂತರ ಬಿಟ್ಟುಕಳುಹಿಸಲಾಗಿದೆ.
ಯಾರು ಈ ಮುಜಾಯುದ್ದೀನ್‌ನ?
ಮುಜಾಯುದ್ದೀನ್ ತುಮಕೂರಿನ PH ಕಾಲೋನಿ ನಿವಾಸಿಯಾಗಿದ್ದಾರೆ. ಹಿಂದೆ 'ಕಲಿಫತ್' ಎಂಬ ಉಗ್ರವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಆರೋಪಿ, ಈ ಸಂಘಟನೆಯ ಮುಖ್ಯಸ್ಥರಿಗೆ ತುಮಕೂರಿನಲ್ಲಿ ಸಭೆಗಳನ್ನು ಆಯೋಜಿಸುವಲ್ಲಿ ಅವರು ಸಹಾಯ ಮಾಡಿದ್ದರು ಎಂದು ಆರೋಪವಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ತಪಾಸಣೆ ಏಜೆನ್ಸಿ (ಎನ್‌ಐಎ) ಅವರನ್ನು ಬಂಧಿಸಿ, ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಿತ್ತು. ಆರು ವರ್ಷಗಳ ಶಿಕ್ಷೆಯನ್ನು ಅನುಭವಿಸಿ, ತಿಹಾರ್ ಜೈಲಿನಿಂದ ಹೊರಬಂದಿದ್ದ. ಈ ಹಿನ್ನೆಲೆಯಲ್ಲಿ ದೆಹಲಿ ಸ್ಫೋಟದ ಮರುದಿನ ಪೊಲೀಸರು ಮತ್ತೆ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆಯಲ್ಲಿ ಯಾವುದೇ ಸಂಶಯಾಸ್ಪದ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಬಿಟ್ಟುಕಳಿಸಿದ್ದಾರೆ.
ದೆಹಲಿ ಸ್ಫೋಟದ ಸಂಕ್ಷಿಪ್ತ ಮಾಹಿತಿ:
ನವೆಂಬರ್ 12 ರಂದು ದೆಹಲಿಯ ಜನನಿಬಿಡ ಮಾರುಕಟ್ಟೆಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಹಲವು ಜನರು ಮೃತಪಟ್ಟಿದ್ದರು, ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಆಂತರಿಕ ಭಯೋತ್ಪಾದಕ ಗುಂಪುಗಳ ಕೈ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆ ರಾಷ್ಟ್ರೀಯ ಮಟ್ಟದಲ್ಲಿ ಈಗ ತೀವ್ರ ತಪಾಸಣೆ ನಡೆಯುತ್ತಿದ್ದು, ಕರ್ನಾಟಕ ಪೊಲೀಸ್ ಸಹ ಸ್ಥಳೀಯ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದಾರೆ.
