ಬಜೆಟ್‌ನಲ್ಲಿ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ. ನೀವೆಲ್ಲರೂ ನನ್ನ ಕಣ್ಗಾವಲಿನಲ್ಲಿದ್ದೀರಿ. ನಾಲ್ಕು ತಿಂಗಳ ಕೆಲಸವನ್ನು 12 ತಿಂಗಳು ಮಾಡಲಾಗುತ್ತಿದೆ.

ಬೆಂಗಳೂರು (ಮೇ.10): ಬಜೆಟ್‌ನಲ್ಲಿ (Budget) ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ. ನೀವೆಲ್ಲರೂ ನನ್ನ ಕಣ್ಗಾವಲಿನಲ್ಲಿದ್ದೀರಿ. ನಾಲ್ಕು ತಿಂಗಳ ಕೆಲಸವನ್ನು 12 ತಿಂಗಳು ಮಾಡಲಾಗುತ್ತಿದೆ. ಈಗಿನಿಂದ ಬದಲಾವಣೆ ಆರಂಭವಾಗಿದ್ದು, ಜನರಿಗೆ ವಿಶ್ವಾಸ ಬರುವಂತೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಅಧಿಕಾರ ವಿಕೇಂದ್ರೀಕರಣವಾಗಿ ಮೂರು ದಶಕಗಳ ಮೇಲಾಗಿದ್ದು, ಅದರ ಲಾಭವನ್ನು ಹಿಂದಿರುಗಿ ನೋಡಬೇಕಾಗಿದೆ. ಕೇಂದ್ರೀಕೃತ ಆಡಳಿತ ಮಾಡಿದರೆ ಜನರಿಗೆ ಆಡಳಿತದ ಲಾಭ, ಸರ್ಕಾರದ ಕಾರ್ಯಕ್ರಮಗಳು ಮುಟ್ಟುವುದಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಜನರಿಂದ ಜನರಿಗೋಸ್ಕರ ಆಡಳಿತವಾಗಬೇಕು. ಬಡವರ ಪರವಾಗಿ ಕೆಲಸ ಮಾಡಲು, ಧೈರ್ಯವಾಗಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯಬಾರದು. ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಇರಬೇಕು. ತಪ್ಪಾದರೆ ಕೇಳುವ ನೈತಿಕತೆ ಇರಬೇಕು. 

ನಾನೇ ಬೇರೆ ನನ್ ಸ್ಟೈಲೇ ಬೇರೆ ಅಂದ ಬೊಮ್ಮಾಯಿ: ಸಿಎಂ ವಾರ್ನಿಂಗ್‌ಗೆ ಅಧಿಕಾರಿಗಳು ಥಂಡಾ

ಪಿಡಿಒಗಳನ್ನು ಶಿಸ್ತಿನಲ್ಲಿಡಬೇಕು. ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು. ಬಜೆಟ್‌ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರೋಡ್‌ಮ್ಯಾಪ್‌ ಮಾಡಿಕೊಳ್ಳಬೇಕು. ಸಿಇಒಗಳು ಜಿಲ್ಲೆಯ ಮುಖ್ಯ ಕಾರ್ಯದರ್ಶಿಗಳಂತೆ ಕಾರ್ಯನಿರ್ವಹಿಸಬೇಕು. ತಮ್ಮ ಹಂತದಲ್ಲಿಯೇ ತೀರ್ಮಾನ ಕೈಗೊಳ್ಳಬೇಕು. ಅಧಿಕಾರದ ಮಹತ್ವವನ್ನು ಅರಿತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಗಳಲ್ಲಿ ಮನೆ ನಿರ್ಮಾಣ, ಫಲಾನುಭವಿಗಳ ಆಯ್ಕೆಯನ್ನು ಶೀಘ್ರವಾಗಿ ಮುಗಿಸಬೇಕು. ಪಡಿತರ ಚೀಟಿ ವಿತರಣೆ, ಶಾಲಾ ಕೊಠಡಿಗಳು, ಆಸ್ಪತ್ರೆಗಳ ವಸ್ತುಸ್ಥಿತಿ ಬಗ್ಗೆ ವರದಿ ನೀಡಬೇಕು. 

ಆಯಾ ವರ್ಷದ ಕ್ರಿಯಾ ಯೋಜನೆಗಳು ಅದೇ ವರ್ಷದಲ್ಲಿ ಅನುಷ್ಠಾನವಾಗುವುದಿಲ್ಲ. ಅನುಷ್ಠಾನ ಅವಧಿ 10 ತಿಂಗಳೊಳಗೆ ಆಗಬೇಕು. ಕಾಲಮಿತಿಯೊಳಗೆ ಕಾರ್ಯಕ್ರಮಗಳ ಅನುಷ್ಠಾನವಾಗಬೇಕು ಎಂಬ ಧ್ಯೇಯ ಇರಬೇಕು ಎಂದು ಹೇಳಿದರು. ಸಾರ್ವಜನಿಕರಿಗೆ ಒಳಿತು ಮಾಡುವ ತೀರ್ಮಾನಗಳನ್ನು ಧೈರ್ಯವಾಗಿ ತೆಗೆದುಕೊಳ್ಳಬಹುದು. ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರ್‌ ಸ್ಥಾಪಿಸೋಣ. ಸಾರ್ವಜನಿಕರು ತರುವ ಅರ್ಜಿಗಳಿಗೆ ಪರಿಹಾರ ನೀಡುವ ಕೆಲಸವಾಗಬೇಕು ಎಂದರು.

ವಾರದಲ್ಲಿ ವಿಲೇವಾರಿಯಾಗಬೇಕು: ಜಲಜೀವನ್‌ ಮಿಷನ್‌ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸುವ ಗುರಿ ಇದ್ದು, ಮುಖ್ಯ ಎಂಜಿನಿಯರ್‌ಗಳ ಬಳಿ ಬಾಕಿ ಇರುವ ಎಲ್ಲಾ ಕಡತಗಳು ಒಂದು ವಾರದೊಳಗೆ ವಿಲೇವಾರಿಯಾಗಬೇಕು. ಯೋಜನೆಯ ಬ್ಯಾಚ್‌-1 ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಮುಗಿಸಬೇಕು. ಜೂ.15ರಂದು ಬ್ಯಾಚ್‌-1 ಕಾಮಗಾರಿಗಳ ಬಗ್ಗೆ ಪರಿಶೀಲನೆ, ಜೂ.30ರಂದು ಬ್ಯಾಚ್‌-2 ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ಪ್ರತಿ ತಿಂಗಳ ಪ್ರಗತಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಉಡುಪಿ, ದಾವಣಗೆರೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯೋಜನೆಯ ಅನುಷ್ಠಾನ ಚುರುಕುಗೊಳಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌, ಸಚಿವ ಮುನಿರತ್ನ, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಭ್ರಷ್ಟಾಚಾರ ಸಹಿಸುವುದಿಲ್ಲ. ವಿಳಂಬ ಧೋರಣೆಯನ್ನೂ ಒಪ್ಪುವುದಿಲ್ಲ: ಜಿಲ್ಲಾಧಿಕಾರಿಗಳಿಗೆ ಚಾಟಿ ಬೀಸಿದ ಸಿಎಂ

ಸಭೆಯಲ್ಲಿ ಸಿಎಂ ಸೂಚನೆಗಳು
* ಅಮೃತ ಗ್ರಾಮ ಪಂಚಾಯಿತಿ ಯೋಜನೆ ಹಂತ-2ರಲ್ಲಿ ಗ್ರಾಮ ಪಂಚಾಯಿತಿಗಳ ಆಯ್ಕೆ ಪ್ರಕ್ರಿಯೆಯನ್ನು ಮೇ 31ರೊಳಗೆ ಪೂರ್ಣಗೊಳಿಸಬೇಕು

* ಗ್ರಾಮೀಣ ಪ್ರದೇಶದಲ್ಲಿ ಮನೆಗಳ ನಿರ್ಮಾಣದ ಗುರಿ, ಫಲಾನುಭವಿಗಳ ಆಯ್ಕೆಗೆ ಗಡುವು ನೀಡಿ, ಈ ವರ್ಷದಲ್ಲಿಯೇ ಅನುಷ್ಠಾನವಾಗಬೇಕು

* ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿಗೆ ಆಯ್ಕೆಪಟ್ಟಿಬಂದ ನಂತರ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ನೇರವಾಗಿ ಹೋಗಬೇಕು

* ಆಸ್ಪತ್ರೆಗಳಲ್ಲಿ ವೈದ್ಯರ ಹಾಜರಾತಿ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು

* ಗರ್ಭಿಣಿಯರಿಗೆ ಎಎನ್‌ಸಿ ತಪಾಸಣೆ ಕಾರ್ಯಕ್ರಮ ಶೇ.100ರಷ್ಟುಪ್ರಗತಿಯಾಗಬೇಕು. ಈ ಬಗ್ಗೆ ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು

* ಪ್ರಧಾನಮಂತ್ರಿಗಳ ಅಮೃತ ಸರೋವರ್‌ ಯೋಜನೆಯಡಿ ಪ್ರತಿ ಜಿಲ್ಲೆಯ 75 ಕೆರೆಗಳನ್ನು ಪುನಶ್ಚೇತನಗೊಳಿಸಲು ಅವಕಾಶ ಇದೆ. ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು

* ಇ-ಬೆಳಕು ಪ್ರಮುಖ ಕಾರ್ಯಕ್ರಮವಾಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು

* 15ನೇ ಹಣಕಾಸು ಆಯೋಗ (ಜಿಲ್ಲಾ ಪಂಚಾಯಿತಿ) ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು