ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ತನಿಖೆ ವಿಳಂಬಿಸಿದ್ದಕ್ಕೆ ಲೋಕಾಯುಕ್ತ ಪೊಲೀಸರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಡಿ.18ರೊಳಗೆ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಾಲಯವು ಕಟ್ಟುನಿಟ್ಟಿನ ಗಡುವು ನೀಡಿದೆ.

ಬೆಂಗಳೂರು (ಡಿ.5): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಕೋಟ್ಯಂತರ ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ದಾಖಲಾಗಿರುವ ದೂರಿನ ತನಿಖೆಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವ ಲೋಕಾಯುಕ್ತ ಪೊಲೀಸರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಡಿ.18ರೊಳಗೆ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ. 

ಎರಡು ತಿಂಗಳಲ್ಲಿ ಸಮಗ್ರ ತನಿಖೆ ನಡೆಸಿ:

ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಮತ್ತು ಇನ್ನಿಬ್ಬರ ಬಗ್ಗೆ ಬಿ ರಿಪೋರ್ಟ್‌ ಸಲ್ಲಿಸಿರುವ ಲೋಕಾಯುಕ್ತರ ಕ್ರಮ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಈ ಸೂಚನೆ ನೀಡಿದೆ. ಎರಡು ತಿಂಗಳಲ್ಲಿ ಸಮಗ್ರ ತನಿಖೆ ಪೂರ್ಣಗೊಳಿಸುವಂತೆ 2025ರ ಅ.9ರಂದು ನ್ಯಾಯಾಲಯ ಆದೇಶಿಸಿತ್ತು. ಆದರೆ, ನ್ಯಾಯಾಲಯ ನಿಗದಿಪಡಿಸಿದ ಕಾಲಮಿತಿ ಪೂರ್ಣಗೊಳ್ಳುತ್ತಾ ಬಂದಿದ್ದರೂ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿಲ್ಲ ಎಂದು ಗರಂ ಆಯಿತು.

ಬಿ ರಿಪೋರ್ಟ್‌ ಮೇಲೆಯೇ ಆದೇಶ: ಕೋರ್ಟ್ ಎಚ್ಚರಿಕೆ

ಬದಲಿಗೆ ಮತ್ತಷ್ಟು ಸಮಯ ಕೇಳುತ್ತಿದ್ದಾರೆ. ಅಂದರೆ ನ್ಯಾಯಾಲಯ ನಿಗದಿಪಡಿಸಿರುವ ಅವಧಿಯ ಕೊನೆಯ ದಿನ ತನಿಖೆ ಪೂರ್ಣಗೊಳಿಸಬೇಕು ಎಂದರ್ಥವಲ್ಲ. ಆದ್ದರಿಂದ ಡಿ.18ರೊಳಗೆ ಪ್ರಕರಣದ ತನಿಖೆ ಪೂರ್ಣಗೊಳಿಸಬೇಕು. ಒಂದೊಮ್ಮೆ ಮುಂದಿನ ವಿಚಾರಣೆ ಒಳಗೆ ತನಿಖೆ ಪೂರ್ಣಗೊಳಿಸದಿದ್ದರೆ ಬಿ ರಿಪೋರ್ಟ್‌ ಮೇಲೆಯೇ ಆದೇಶವನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ದೂರುದಾರರು ಮತ್ತು ಜಾರಿ ನಿರ್ದೇಶನಾಲಯದ ಪರ ವಕೀಲರು ಡಿ.16 ಒಳಗೆ ತಮ್ಮ ಲಿಖಿತ ಸಾರಾಂಶ ಸಲ್ಲಿಸಬಹುದು ಎಂದು ತಿಳಿಸಿದ ನ್ಯಾಯಾಲಯ, ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ವಿಚಾರಣೆ ವೇಳೆ ಲೋಕಾಯುಕ್ತ ಪೊಲೀಸರ ಪರ ವಕೀಲರು, ತನಿಖೆಯ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.