ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ -2025ಕ್ಕೆ ಅಂಕಿತ ಹಾಕದೆ ರಾಷ್ಟ್ರಪತಿಗೆ ವರ್ಗಾಯಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು, ಮಸೂದೆ ವರ್ಗಾಯಿಸಿರುವುದಕ್ಕೆ 29 ಕಾರಣಗಳ ಹಿನ್ನೆಲೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು : ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ -2025ಕ್ಕೆ ಅಂಕಿತ ಹಾಕದೆ ರಾಷ್ಟ್ರಪತಿಗೆ ವರ್ಗಾಯಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು, ಮಸೂದೆ ವರ್ಗಾಯಿಸಿರುವುದಕ್ಕೆ 29 ಕಾರಣಗಳ ಹಿನ್ನೆಲೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಮಸೂದೆ ತರುವ ಮುನ್ನ ಸಮಾಜದ, ಸಾರ್ವಜನಿಕರ ಜೊತೆ ಚರ್ಚೆ ನಡೆಸಿ ಅಭಿಪ್ರಾಯ ಪಡೆದಿಲ್ಲ. ಯಾವ ಇಲಾಖೆಗಳೊಂದಿಗೂ ಚರ್ಚೆ ನಡೆಸಿರುವುದು ಕಂಡು ಬಂದಿಲ್ಲ. ವಿಧಾನಸಭೆಯಲ್ಲೂ ಮಸೂದೆ ಬಗ್ಗೆ ಚರ್ಚೆಗಳು ನಡೆದಿಲ್ಲ. ಈ ಮಸೂದೆಗೆ ಒಪ್ಪಿಗೆ ನೀಡದಂತೆ 40 ಮನವಿಗಳು ಬಂದಿವೆ. ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವಿದೆ.
ದ್ವೇಷ ಭಾಷಣ ಎಂದು ಗುರುತಿಸಲು ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ ಹಲವು ಸೆಕ್ಷನ್‌ಗಳಿವೆ. ಆದರೆ, ಅವುಗಳಲ್ಲಿನ ಶಿಕ್ಷೆ ಮತ್ತು ದಂಡವನ್ನು ಸರ್ಕಾರ ವಿಸ್ತರಿಸಿದೆ. ದ್ವೇಷ ಭಾಷಣ ನಿಯಂತ್ರಿಸಲು ಇಂಟರ್ನೆಟ್ ಮೇಲೆ ನಿಯಂತ್ರಣ ಹೊಂದುವ ಅಧಿಕಾರ ಪಡೆಯಲು ಸರ್ಕಾರಕ್ಕೆ ಈ ಮಸೂದೆಯಲ್ಲಿ ಅವಕಾಶವಿದೆ ಎಂಬುದೂ ಸೇರಿದಂತೆ ಮಸೂದೆಯನ್ನು ವರ್ಗಾಹಿಸಿರುವುದಕ್ಕೆ 29 ಕಾರಣಗಳನ್ನು ನೀಡಿದ್ದಾರೆ. ಎಲ್ಲಾ 29 ಅಂಶಗಳನ್ನು ವಿವರಿಸುವುದರೊಂದಿಗೆ ಮಸೂದೆಯನ್ನು ಪರಿಗಣಿಸುವ ನಿರ್ಧಾರವನ್ನು ರಾಷ್ಟ್ರಪತಿ ಅವರ ವಿವೇಚನೆಗೆ ನೀಡಲಾಗಿದೆ.
ಅಂಶಗಳು ಯಾವ್ಯಾವು?
ಮೊದಲನೆಯದಾಗಿ ಪ್ರಸ್ತಾವಿತ ಮಸೂದೆಯಲ್ಲಿ ದ್ವೇಷ ಭಾಷಣದ ವ್ಯಾಖ್ಯಾನದಲ್ಲಿ ಪೂರ್ವಾಗ್ರಹದಿಂದ ಧರ್ಮ, ಜಾತಿ, ಜನಾಂಗ, ಲಿಂಗ, ಜನ್ಮ ಸ್ಥಳ ಅಥವಾ ಅಂಗವೈಕಲ್ಯತೆಗೆ ಸಂಬಂಧಿಸಿದಂತೆ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ಹಾನಿ ಅಥವಾ ಸಾಮರಸ್ಯಕ್ಕೆ ಹಾನಿ ತರುವ ಅಭಿವ್ಯಕ್ತಿಯನ್ನು ದ್ವೇಷ ಭಾಷಣ ಎಂದು ವ್ಯಾಖ್ಯಾನಿಸಲಾಗಿದೆ. ಮಸೂದೆಯು ದ್ವೇಷ ಭಾಷಣ ಮಾಡಿದ ವ್ಯಕ್ತಿಯು ಯಾವುದೇ ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ಅವನ ಹೇಳಿಕೆಯನ್ನು ಇಡೀ ಸಂಸ್ಥೆಗೆ ಹೊಣೆಗಾರಿಕೆ ಬೆಸೆಯಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ದ್ವೇಷ ಭಾಷಣದ ಡಿಜಿಟಲ್ ಪ್ರಸರಣವನ್ನು ತಡೆಯಲು ಆನ್‌ಲೈನ್‌ನಲ್ಲಿ ದ್ವೇಷಪೂರಿತ ವಿಷಯವನ್ನು ನಿರ್ಬಂಧಿಸಲು ಅಥವಾ ತೆಗೆದು ಹಾಕಲು ಇಂಟರ್ನೆಟ್ ವ್ಯವಸ್ಥೆ ನಿಯಂತ್ರಿಸಿ ಅಧಿಕಾರ ನೀಡುತ್ತದೆ ಎಂದು ವಿವರಿಸಿದ್ದಾರೆ.
ಮಸೂದೆ ವಿರುದ್ಧ 40 ಅರ್ಜಿ ಸ್ವೀಕಾರ:
ಮಸೂದೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಚರ್ಚೆಗಳಾಗಿವೆ. ಮಸೂದೆಯ ವಿರುದ್ಧ ಹಾಗೂ ಅದರ ಪರಿಣಾಮಗಳ ವಿವರಣೆಯೊಂದಿಗೆ ಈ ಮಸೂದೆಗೆ ಒಪ್ಪಿಗೆ ನೀಡದಂತೆ 40 ಕ್ಕೂ ಹೆಚ್ಚು ಮನವಿಗಳು ಬಂದಿವೆ ಎಂದು ತಿಳಿಸಿದ್ದಾರೆ.
ಈ ಮಸೂದೆಯಡಿ ಅಪರಾಧಗಳೆಂದು ಪರಿಗಣಿಸಲಾದ ದ್ವೇಷ ಭಾಷಣ ಮತ್ತು ದ್ವೇಷಕ್ಕೆ ಸಂಬಂಧಿಸಿದ ಅಂಶಗಳು ಹೊಸದಲ್ಲ. ಅಂತಹ ಅಂಶಗಳು ಭಾರತೀಯ ದಂಡ ಸಂಹಿತೆಯ 196/1, 196/2,299, 302 (ಐಪಿಸಿ 153/ಎ, 153/ಬಿ, 295ಎ, 298) ನಂತಹ ಸೆಕ್ಷನ್‌ಗಳಲ್ಲಿ ಅಳವಡಿಕೆಯಾಗಿವೆ. ಆದರೆ, ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ದಂಡ ಮತ್ತು ಶಿಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ದ್ವೇಷ ಭಾಷಣವನ್ನು ‘ಜಾಮೀನು ನೀಡಬಹುದಾದ ಮತ್ತು ಗಂಭೀರಸ್ವರೂಪವಲ್ಲದ ಕೃತ್ಯ’ ಎನ್ನುವುದನ್ನು ‘ಜಾಮೀನು ರಹಿತ’ ‘ಅಪರಾಧ’ ಕೃತ್ಯ ಎಂದು ಬದಲಾಯಿಸಲಾಗಿದೆ.
ಉದಾಹರಣೆಗೆ, ಬಿಎನ್‌ಎಸ್ 196(1) ರಲ್ಲಿ ದ್ವೇಷ ಭಾಷಣಕ್ಕೆ ಇರುವ 3 ವರ್ಷಗಳ ಜೈಲು ಮತ್ತು 196(2) ರಲ್ಲಿ 1 ವರ್ಷದ ಜೈಲು ಶಿಕ್ಷೆಯ ಬದಲಿಗೆ, ಅದನ್ನು ಕ್ರಮವಾಗಿ ಮೊದಲ ಬಾರಿಗೆ 7 ವರ್ಷ ಜೈಲು 50 ಸಾವಿರ ರು.ದಂಡ, ಎರಡನೇ ಬಾರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರು.ವರೆಗೆ ದಂಡ ವಿಧಿಸಲು ಅಧಿಕಾರ ನೀಡುತ್ತದೆ. ಇದು ದಮನಕಾರಿ ಹಾಗೂ ಸಂವಿಧಾನದ ನೈತಿಕತೆಗೆ ವಿರುದ್ಧ. ಅಲ್ಲದೆ, ಈ ಎಲ್ಲಾ ಅಪರಾಧಗಳನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮಾತ್ರ ವಿಚಾರಣೆ ನಡೆಸಬೇಕೆಂದು ಷರತ್ತು ವಿಧಿಸಲಾಗಿದೆ.
ಇದಲ್ಲದೆ, ಈ ಮಸೂದೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಈ ಅಪರಾಧಗಳು ವ್ಯಕ್ತಿಗಳಿಗೆ ಮಾತ್ರವಲ್ಲದೆ ಸಂಸ್ಥೆಗಳಿಗೂ ಅನ್ವಯಿಸುತ್ತವೆ ಮತ್ತು ಯಾವುದೇ ನೋಂದಾಯಿತ, ನೋಂದಾಯಿತವಲ್ಲದ ಸಂಸ್ಥೆಯು ಆಯೋಜಿಸುವ ರ್‍ಯಾಲಿ ಅಥವಾ ಕಾರ್ಯಕ್ರಮದಲ್ಲಿ ಅಂತಹ ಅಪರಾಧ ನಡೆದರೆ, ಅಂತಹ ಸಂಸ್ಥೆಗಳ ನಾಯಕರಿಗೂ ಶಿಕ್ಷೆಯಾಗುತ್ತದೆ. ಆದ್ದರಿಂದ, ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ನಿರ್ಧರಿಸಿದರೆ ಯಾವುದೇ ಕಾರ್ಯಕ್ರಮ ನಿಷೇಧಿಸಬಹುದು:
ಯಾವುದೇ ವ್ಯಕ್ತಿ, ಗುಂಪು ಅಥವಾ ಸಂಸ್ಥೆಯಿಂದ ಯಾವುದೇ ದ್ವೇಷ ಭಾಷಣ ಅಥವಾ ದ್ವೇಷಪೂರಿತ ಕ್ರಮವನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಇದರರ್ಥ ಅಧಿಕಾರಿಗಳು ದ್ವೇಷಕ್ಕೆ ಕಾರಣವಾಗಬಹುದು ಎಂದು ಭಾವಿಸಿದರೆ ಯಾವುದೇ ಭಾಷಣ ಅಥವಾ ಕಾರ್ಯಕ್ರಮವನ್ನು ನಿಷೇಧಿಸಲು ಸರ್ಕಾರವು ಈ ಕಾಯ್ದೆಯಡಿಯಲ್ಲಿ ಅಧಿಕಾರವನ್ನು ಹೊಂದಿದೆ. ಇದು ಅಧಿಕಾರಿಗಳಿಗೆ ಅನಿಯಂತ್ರಿತ ಅಧಿಕಾರ ನೀಡುತ್ತದೆ ಎಂಬ ಭಾವನೆ ಇದೆ. ಯಾರಾದರೂ ಇಷ್ಟಪಡದ ವ್ಯಕ್ತಿ ಅಥವಾ ನಿರ್ದಿಷ್ಟ ಸಂಸ್ಥೆಯ ವಿರುದ್ಧ ಪೂರ್ವಾಗ್ರಹವನ್ನು ಹೊಂದಿದ್ದರೆ, ಈ ವಿಭಾಗದ ಅಡಿಯಲ್ಲಿ ಅಂತಹ ವ್ಯಕ್ತಿ ಅಥವಾ ಸಂಸ್ಥೆಯ ಯಾವುದೇ ಕಾರ್ಯಕ್ರಮ ನಿಷೇಧಿಸುವ ಸಾಧ್ಯತೆಯಿದೆ. ಈ ರೀತಿ ನಿಷೇಧದ ಪ್ರಯತ್ನಗಳು ನಡೆದಿರುವ ಉದಾಹರಣೆಗಳಿವೆ. ಆದರೆ, ನ್ಯಾಯಾಲಯಗಳು ಇದಕ್ಕೆ ತಡೆಯೊಡ್ಡಿವೆ. ಈ ಮಸೂದೆ ಕಾಯಿದೆಯಾದರೆ, ಇಂತಹ ಪ್ರಯತ್ನಗಳಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಕಷ್ಟವಾಗಬಹುದು.
ವ್ಯಾಖ್ಯಾನವೇ ಅಸ್ಪಷ್ಟ
ಈ ಮಸೂದೆಯಲ್ಲಿ ‘ದ್ವೇಷ ಭಾಷಣ’ದ ವ್ಯಾಖ್ಯಾನವು ತುಂಬಾ ಅಸ್ಪಷ್ಟವಾಗಿದೆ. ಈ ವ್ಯಾಖ್ಯಾನದ ವ್ಯಾಪ್ತಿ ಬಹಳ ವಿಸ್ತಾರವಾಗಿದ್ದು, ಅಧಿಕಾರಿಗಳು/ಪೊಲೀಸರು ಅಂತಹ ವಿವೇಚನೆಯನ್ನು ಚಲಾಯಿಸುವಾಗ ನಿಷ್ಪಕ್ಷಪಾತವಾಗಿ ಮತ್ತು ಎಚ್ಚರಿಕೆಯಿಂದ ವರ್ತಿಸುವುದು ಅವಶ್ಯಕ ಎಂದು ಹೇಳಲಾಗಿದೆ. ಇಲ್ಲದಿದ್ದರೆ, ರಾಜಕೀಯ ದುರುದ್ದೇಶಕ್ಕಾಗಿ ಅಥವಾ ಯಾವುದೇ ವ್ಯಕ್ತಿ, ಗುಂಪು ಅಥವಾ ಸಮುದಾಯದ ವಿರುದ್ಧ ದ್ವೇಷವನ್ನು ಸೇಡು ತೀರಿಸಿಕೊಳ್ಳಲು ಈ ಕಾಯ್ದೆಯ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಯಾವುದೇ ವಿಷಯದ ಬಗ್ಗೆ ಸ್ವಾಭಾವಿಕವಾಗಿ ಮಾತನಾಡುವ ಪದಗಳನ್ನು ಸಹ ದ್ವೇಷ ಭಾಷಣದ ವ್ಯಾಪ್ತಿಗೆ ತರಬಹುದಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ರಾಜ್ಯಪಾಲರು ಉಲ್ಲೇಖಿಸಿರುವ ಇತರ ಪ್ರಮುಖ ಕಾರಣಗಳಿವು:
- ಈ ಮಸೂದೆಯನ್ನು ಉಭಯ ಸದನಗಳು, ನಾಗರಿಕ ಸಮಾಜ, ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸಾಂವಿಧಾನಿಕ ತಜ್ಞರು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸದೆ ಅಂಗೀಕರಿಸಲಾಗಿದೆ.
- ಸಾಂವಿಧಾನಿಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.
- ಕಾನೂನುಬದ್ಧ ಶೈಕ್ಷಣಿಕ ವಿಮರ್ಶೆ ಅಥವಾ ಸಾರ್ವಜನಿಕ ವಕಾಲತ್ತುಗಾಗಿ ಆನ್‌ಲೈನ್ ವಿಷಯವನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ತಕ್ಷಣದ ಅಪಾಯವಿದೆ.
- ಮಸೂದೆ ಸಂಬಂಧ ಕೆಲವು ಕಾನೂನು ತೊಡಕುಗಳೂ ಇವೆ. ಮಿತಿಮೀರಿದ ಮತ್ತು ಭಯಾನಕ ಪರಿಣಾಮಗಳನ್ನು ಬೀರಲಿವೆ.
- ಈ ಮಸೂದೆಯು ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕನ್ನು ಕಸಿಯುವಂತಹ ಗಂಭೀರ ಸಂಕಷ್ಟದ ಮುನ್ಸೂಚನೆಯಾಗಿದೆ.
- ಈ ಮಸೂದೆಯಲ್ಲಿ ‘ದ್ವೇಷ ಭಾಷಣ’ ಅಥವಾ ‘ದ್ವೇಷ ಅಪರಾಧ’ದ ವ್ಯಾಖ್ಯಾನವು ತುಂಬಾ ವಿಶಾಲ ಮತ್ತು ಅಸ್ಪಷ್ಟವಾಗಿದೆ.
- ಈ ಮಸೂದೆಯು ಉದ್ದೇಶಕ್ಕಿಂತ ‘ಪರಿಣಾಮ’ಕ್ಕೆ ಆದ್ಯತೆ ನೀಡುತ್ತದೆ. ಅಂದರೆ, ಸತ್ಯವನ್ನು ಮಾತನಾಡಿದರೂ ಅಥವಾ ಬೌದ್ಧಿಕ ಟೀಕೆ ಮಾಡಿದರೂ ಸಹ ಯಾರೊಬ್ಬರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಿಮ್ಮನ್ನು ಬಂಧಿಸಬಹುದು.
- ಯಾವುದೇ ಅಸ್ಪಷ್ಟ ಕಾನೂನು ಅಂತಿಮವಾಗಿ ಪೊಲೀಸ್ ವ್ಯವಸ್ಥೆಯ ದುರುಪಯೋಗಕ್ಕೆ ಕಾರಣವಾಗುತ್ತದೆ. ಕಾರ್ಟೂನ್, ಟ್ವೀಟ್ ಅಥವಾ ವಿಡಂಬನಾತ್ಮಕ ಲೇಖನವು ‘ದ್ವೇಷಕ್ಕೆ ಪ್ರಚೋದನೆ’ಯೇ ಎಂದು ನಿರ್ಧರಿಸುವ ಅಧಿಕಾರವು ಕೆಳಮಟ್ಟದ ಪೊಲೀಸ್ ಅಧಿಕಾರಿಯ ಬಳಿ ಇರುತ್ತದೆ.
- ದ್ವೇಷ ಭಾಷಣವನ್ನು ನಿಯಂತ್ರಿಸಲು ಭಾರತದಲ್ಲಿ ಈಗಾಗಲೇ ಹಲವಾರು ಕಾನೂನುಗಳಿವೆ. ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಧರ್ಮ, ಜಾತಿ ಅಥವಾ ಸಮುದಾಯದ ನಡುವೆ ದ್ವೇಷವನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು.
- ಬೌದ್ಧಿಕ ಚಿಂತನೆಗಳ ತವರೂರಾದ ಕರ್ನಾಟಕದಲ್ಲಿ ಈ ಮಸೂದೆಯು ಅಂತಹ ಬೌದ್ಧಿಕ ಸಂಪ್ರದಾಯಕ್ಕೆ ಅಡ್ಡಿಯಾಗಬಹುದು.
- ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಕೇವಲ ಒಬ್ಬ ವ್ಯಕ್ತಿ ಅಥವಾ ಸಮುದಾಯಕ್ಕೆ ಸೀಮಿತವಾಗಿರಬಾರದು. ಇಡೀ ಸಮಾಜದ ಸಾಮೂಹಿಕ ಹಕ್ಕಾಗಿರಬೇಕು.
- ದ್ವೇಷ ಭಾಷಣವು ಸಮಾಜಕ್ಕೆ ಹಾನಿಕಾರಕ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ದ್ವೇಷವನ್ನು ತಡೆಯುವ ಹೆಸರಿನಲ್ಲಿ ಸ್ವಾತಂತ್ರ್ಯವನ್ನು ಕೊಲ್ಲುವುದು ಪರಿಹಾರವಲ್ಲ.


