ವಿಮಾ ಕಂಪನಿಗಳು ವಿಮೆ ಮಾಡಿಸಿ ಸುಮ್ಮನಾದರಷ್ಟೇ ಸಾಲದು, ರೈತನಿಗೆ ನಿಯಮಬದ್ಧವಾಗಿ ಪರಿಹಾರ ಒದಗಿಸುವಲ್ಲಿ ನ್ಯಾಯವಾಗಿ ಕೆಲಸ ಮಾಡಬೇಕು: ಬಿ.ಸಿ.ಪಾಟೀಲ್‌  

ಬೆಂಗಳೂರು(ನ.11):  2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರವನ್ನು ಡಿಸೆಂಬರ್‌ ಅಂತ್ಯದೊಳಗೆ ಇತ್ಯರ್ಥಪಡಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಗುರುವಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು ಯಾವುದೇ ಕಾರಣಕ್ಕೂ ಬೆಳೆ ವಿಮೆ ಪರಿಹಾರ ತಡವಾಗಬಾರದು. ರೈತರು ವಿಮೆಗಾಗಿ ಕಾದು ಕುಳಿತಿರುತ್ತಾರೆ. ಸಂಬಂಧಿಸಿದ ವಿಮಾ ಕಂಪನಿಗಳ ಜತೆ ನಿರಂತರ ಸಂಪರ್ಕವನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು. ಆಧಾರ್‌ ಕಾರ್ಡ್‌ ಲಿಂಕ್‌ ಆಗದ ಬಹಳಷ್ಟು ರೈತರು ಇದ್ದು, ಆದಷ್ಟು ಬೇಗ ರೈತರು ಆಧಾರ್‌ ಕಾರ್ಡ್‌ ಬೆಳೆವಿಮೆಗೆ ಸರಿಯಾಗಿ ಲಿಂಕ್‌ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೇ, ವಿಮಾ ಕಂಪನಿಗಳು ವಿಮೆ ಮಾಡಿಸಿ ಸುಮ್ಮನಾದರಷ್ಟೇ ಸಾಲದು, ರೈತನಿಗೆ ನಿಯಮಬದ್ಧವಾಗಿ ಪರಿಹಾರ ಒದಗಿಸುವಲ್ಲಿ ನ್ಯಾಯವಾಗಿ ಕೆಲಸ ಮಾಡಬೇಕು. ಒಂದು ವೇಳೆ ಆಧಾರ್‌ ಅಥವಾ ಇನ್ನಾವುದೇ ಮಾಹಿತಿ ರೈತರಿಂದಾಗಲಿ ಅಥವಾ ಅಧಿಕಾರಿಗಳಿಂದಾಗಲಿ ಕಣ್ತಪಿನಿಂದಲೋ ಅಥವಾ ಇನ್ನಾವುದಾದರೂ ಕಾರಣಕ್ಕೆ ತಪ್ಪಿದ್ದಲ್ಲಿ ಅದನ್ನು ಪಡೆಯುವ ಕೆಲಸ ಮಾಡಬೇಕು ಎಂದರು.

ಸಚಿವ ಬಿ.ಸಿ‌. ಪಾಟೀಲ್‌ ಕಿರುಕುಳಕ್ಕೆ ಬಿಜೆಪಿ ಬಿಡುವ ನಿರ್ಧಾರ; ರಾಜೀನಾಮೆಗೆ ಮಾಜಿ ಶಾಸಕ ಯು.ಬಿ. ಬಣಕಾರ ಸ್ಪಷ್ಟನೆ

ವಿಮೆ ಮಾಡಿಸಿಕೊಂಡರಾಯಿತಷ್ಟೇ ಎನ್ನುವ ಅಸಡ್ಡೆಯನ್ನು ಯಾವ ವಿಮಾ ಕಂಪನಿಗಳು ಮಾಡಬಾರದು. ಸರಿಯಾಗಿ ಬೆಳೆ ವಿಮೆ ಪರಿಹಾರ ಇತ್ಯರ್ಥವಾಗುವಂತೆ ಕೃಷಿ ಅಧಿಕಾರಿಗಳ ಜತೆ ಕೈ ಜೋಡಿಸಬೇಕು ಎಂದು ತಾಕೀತು ಮಾಡಿದರು.

ಇದೇ ವೇಳೆ ಮುಂಗಾರು ಹಂಗಾಮಿನ ಬೆಳೆಗಳಿಗೆ ಜನವರಿಯಲ್ಲಿ ವಿಮೆ ಪರಿಹಾರ ಇತ್ಯರ್ಥಪಡಿಸಲು ಪ್ರಕ್ರಿಯೆ ಆರಂಭಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ, ಆಯುಕ್ತ ಶರತ್‌, ಬೆಳೆ ವಿಮೆ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.