Asianet Suvarna News Asianet Suvarna News

ಇದೇ ಕಾರಣಕ್ಕೆ 10 ವರ್ಷದಲ್ಲಿ 8ಕ್ಕೂ ಹೆಚ್ಚು ಕಾಡಾನೆಗಳ ಸಾವು!

ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ವಿದ್ಯುತ್ ಆಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ. 

Death of More Than 8 Wild Elephants in 10 Years at Ramanagara gvd
Author
First Published Dec 8, 2023, 8:16 PM IST

ಎಂ.ಅಫ್ರೋಜ್ ಖಾನ್

ರಾಮನಗರ (ಡಿ.08): ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ವಿದ್ಯುತ್ ಆಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ. ಆನೆ - ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾಡಾನೆಗಳ ಸಾವಿನ ಪ್ರಮಾಣವೂ ಕಳವಳಕಾರಿಯಾಗಿದೆ. ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಒಟ್ಟು 08 ಕಾಡಾನೆಗಳು ಮೃತಪಟ್ಟಿರುವುದು ಬೇಸರ ಮೂಡಿಸಿದೆ.

ಕಾಡಿನ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಗಳೂ ಆನೆಗಳ ಪಾಲಿಗೆ ಯಮಪಾಶವಾಗಿ ರೂಪಗೊಂಡಿದೆ. ಕೆಲವೆಡೆ ಸರಿಯಾದ ನಿರ್ವಹಣೆ ಇಲ್ಲದೆ ಜೋತಾಡುವ ತಂತಿಗಲು ತಗುಲಿ ಮೃತಪಟ್ಟಿದ್ದರೆ, ಕಾಡಂಚಿನ ಗ್ರಾಮಗಳಲ್ಲಿ ಅಕ್ರಮ ವಿದ್ಯುತ್ ತಂತಿಗಳು ಕಾಡಾನೆಗಳಿಗೆ ಉರುಳಾಗಿವೆ. ಇಷ್ಟೇ ಅಲ್ಲದೆ, ಗಾಳಿ, ಮಳೆಗೆ ತೋಟದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ, ಕಾಡುಗಳ್ಳರ ಗುಂಡೇಟು, ಅನುಮಾನಸ್ಪದ , ವಯೋಸಹಜ ಮತ್ತಿತರರು ಕಾರಣದಿಂದ ಆನೆಗಳು ಮೃತಪಟ್ಟಿವೆ.

ಬರ ಪರಿಹಾರಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಣಿ ಮಾಡಿಸಿ: ಯತೀಂದ್ರ ಸಿದ್ದರಾಮಯ್ಯ

ರಾಮನಗರ ಜಿಲ್ಲೆಯು ರಾಮನಗರ ಪ್ರಾದೇಶಿಕ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಕಾವೇರಿ ವನ್ಯಜೀವಿ ಧಾಮ ವಿಭಾಗದೊಂದಿಗೆ ಅರಣ್ಯ ಗಡಿ ಹಂಚಿಕೊಂಡಿದೆ. ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತೆ 299 ಕಿ.ಮೀ. ದೂರ ಅರಣ್ಯ ವಿಸ್ತರಿಸಿದೆ. ಈ ಭಾಗದಲ್ಲಿ ಆನೆ ದಾಳಿ ತಡೆಯಲು ಈಗಾಗಲೇ ಅಗತ್ಯವಿದ್ದ ಸೂಕ್ಷ್ಮ ಸ್ಥಳಗಳಲ್ಲಿ ಕಂದಕ, ಸಿಮೆಂಟ್ ತಡೆಗೋಡೆ ಹಾಗೂ ರೇಲ್ವೆ ಕಂಬಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರು ಪ್ರಯೋಜನವಾಗುತ್ತಿಲ್ಲ.

ಕಾಡಾನೆಗಳ ಹಾಟ್‌ಸ್ಪಾಟ್‌: ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತೆ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ತೆಂಗಿನಕಲ್ಲು, ನರೀಕಲ್ಲು, ಹಂದಿಗುಂದಿ, ಸಾತನೂರು, ಕಬ್ಬಾಳು ಸೇರಿ ಹತ್ತಾರು ಸಾವಿರ ಎಕರೆ ಪ್ರಾದೇಶಿಕ ಅರಣ್ಯ ಪ್ರದೇಶವಿದೆ. ಎರಡೂ ವನ್ಯಜೀವಿ ವಲಯದಿಂದ ಜಿಲ್ಲೆಯ ಪ್ರಾದೇಶಿಕ ಅರಣ್ಯ ಪ್ರದೇಶಕ್ಕೆ ಬರುವ ಕಾಡಾನೆ ಹಿಂಡು ಕಾಡಂಚಿನ ಗ್ರಾಮಗಳಲ್ಲಿ ಪದೇ ಪದೆ ಹಾವಳಿ ಮಾಡುತ್ತಿವೆ. ಇದರಿಂದಾಗಿ ಜಿಲ್ಲೆಯ ನೂರಾರು ಗ್ರಾಮ ಕಾಡಾನೆಗಳ ಹಾಟ್‌ಸ್ಪಾಟ್‌ ಆಗಿವೆ. ಕಳೆದ ಎರಡು ದಶಕದಿಂದ ಬೀಡು ಬಿಟ್ಟಿರುವ ಕಾಡನೆಗಳು ನಿತ್ಯವೂ ಈ ಭಾಗದ ರೈತರ ತಾಕುಗಳಿಗೆ ದಾಂಗುಡಿ ಇಡುತ್ತಿವೆ. ಪ್ರತಿವರ್ಷ ಸಾವಿರಾರು ಎಕರೆ ಬೆಳೆ ನಾಶ ಒಂದೆಡೆಯಾದರೆ, ಕನಿಷ್ಠ ಇಬ್ಬರಿಂದ ಮೂರು ಜನ ಕಾಡಾನೆಗಳ ದಾಳಿಗೆ ಸಿಲುಕಿ ಸಾವಿಗೀಡಾಗುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 18-20 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಾಡಾನೆಗಳ ಪ್ರಾಣಕ್ಕೂ ಕುತ್ತು: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನೂರಾರು ಆನೆಗಳು ಬೀಡು ಬಿಟ್ಟಿವೆ. ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳು ಶಾಶ್ವತ ಕಾಡಾನೆ ಪೀಡಿತ ಪ್ರದೇಶವಾಗಿ ಪರಿಣಮಿಸಿವೆ. ಈ ಗ್ರಾಮಗಳಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿಮಾಡುತ್ತಿವೆ. ಇನ್ನು ಕಾಡಾನೆಗಳನ್ನು ಓಡಿಸಲು ಹೋದರೆ ಜೀವಕ್ಕೆ ಅಪಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಡಾನೆ ಪೀಡಿತ ಪ್ರದೇಶಗಳ ಜನತೆ ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.

ಪ್ರಯೋಜನಕ್ಕೆ ಬಾರದ ಕಾಡಾನೆ ಕಾರ್ಯಪಡೆ: ಕಾಡಾನೆಗಳಿಂದ ಜನರಿಗೆ, ಜನರಿಂದ ಆನೆಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕಳೆದ 2-3 ತಿಂಗಳ ಹಿಂದಷ್ಟೇ ಕಾಡಾನೆ ಕಾರ್ಯಪಡೆ ರಚಿಸಲಾಗಿದೆ. ಆದರೆ, ಈ ಟಾಸ್ಕ್ ಫೋರ್ಸ್ ಜನರ ಬಗ್ಗೆ ಗಮನ ಹರಿಸುತ್ತಿಲ್ಲ, ಕಾಡಾನೆಗಳ ಮೇಲೂ ನಿಗಾ ಇಡುತ್ತಿಲ್ಲ. ಟಾಸ್ಕ್ ಫೋರ್ಸ್ ನಲ್ಲಿ ಒಬ್ಬ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರು ಹಾಗೂ 32 ಜನ ಹೊರಗುತ್ತಿಗೆ ನೌಕರರನ್ನು ಕಾರ್ಯಪಡೆಯಲ್ಲಿ ಇದ್ದಾರೆ. ಇಷ್ಟು ಜನರಿದ್ದರೂ ಕಾಡಾನೆಗಳ ರಕ್ಷಣೆಯೂ ಆಗುತ್ತಿಲ್ಲ. ಇತ್ತ ಜನರಿಗೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗುತ್ತಿಲ್ಲ.

ಮುಸ್ಲಿಮರನ್ನು ಸಂತೈಸುತ್ತಿರುವ ಸಿಎಂ ಸಿದ್ದರಾಮಯ್ಯ: ಯಡಿಯೂರಪ್ಪ ಟೀಕೆ

ಕಾಡಾನೆಗಳ ಸಾವಿನ ವಿವರ...
-2016ರ ಡಿ.8ರಂದು ಕನಕಪುರ ತಾಲೂಕಿನ ನೇರಳಟ್ಟಿಕೆರೆಯತ್ತ ಆಗಮಿಸುತ್ತಿದ್ದ ಸುಮಾರು 20 ವರ್ಷ ವಯಸ್ಸಿನ ಆನೆ ಮೇಲೆ ಕಾಡುಗಳ್ಳರು ಗುಂಡು ಹಾರಿಸಿದ್ದರು. ಬ್ಯಾಲಮರದ ಬಳಿ ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆ ನೀಡಲಾಗಿತ್ತಾದರೂ ಫಲಕಾರಿಯಾಗದೆ ಅಸುನೀಗಿತ್ತು.

-2016ರ ಡಿ.9ರಂದು ಮಾಗಡಿ ತಾಲೂಕಿನ ಮಂಚನಬೆಲೆ ಹಿನ್ನೀರಿನ ಜಲಾಶಯದ ಅವ್ವೇರಹಳ್ಳಿಯ ರಾಗಿ ಹೊಲದಲ್ಲಿ ಕಾಲು ಮುರಿದು ನಿತ್ರಾಣಗೊಂಡಿದ್ದ ಕಾಡಾನೆ ಸಿದ್ದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತು.

-2021ರ ಫೆ.26ರಂದು ರಾಮನಗರ ತಾಲೂಕು ತುಂಬೇನಹಳ್ಳಿಯ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ತೆರಳುವಾಗ ಗಂಡಾನೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದೆ.

-2021ರ ಆ.25ರಂದು ಕನಕಪುರ ತಾಲೂಕು ಕಬ್ಬಾಳು ಅರಣ್ಯ ಪ್ರದೇಶದಲ್ಲಿ 30 ವರ್ಷ ಪ್ರಾಯದ ಗಂಡಾನೆ ಕಳೇಬರ ಪತ್ತೆಯಾಗಿದೆ. ನಿತ್ರಾಣಗೊಂಡು ಇದ್ದಲ್ಲಿಯೇ ಪ್ರಾಣ ಬಿಟ್ಟಿತ್ತು.

-2021ರ ಸೆ.10ರಂದು ಚನ್ನಪಟ್ಟಣ ತಾಲೂಕಿನ ಮಲ್ಲಂಗೆರೆ ಗ್ರಾಮದ ತೋಟದಲ್ಲಿ 35 - 40 ವರ್ಷ ಪ್ರಾಯದ ಕಾಡನೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿತು.

-2023ರ ಡಿ.6ರಂದು ಕನಕಪುರ ಅರಣ್ಯ ವಲಯದ ಕೋಡಿಹಳ್ಳಿಯಲ್ಲಿ 14 ವರ್ಷದ ಗಂಡಾನೆ ಅಕ್ರಮ ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟಿದೆ.

Follow Us:
Download App:
  • android
  • ios