ಕೊರೋನಾದಿಂದ ಪಾರಾಗಲು ನಾವೀಗ ಏನೆಲ್ಲ ಮಾಡಬೇಕು? ಸರ್ಕಾರಕ್ಕೊಂದು ಪತ್ರ
ದೇಶ ಒಂದು ಕಡೆ, ನಮ್ಮ ಕರ್ನಾಟಕ ಈ ಕಡೆ. ಪರೋಕ್ಷವಾಗಿ, ಅಪರೋಕ್ಷವಾಗಿ ಕೊರೊನ ಕಪಿಮುಷ್ಟಿಯಲ್ಲಿ ನಾವೆಲ್ಲ ತತ್ತರಿಸಿಹೋಗಿದ್ದೇವೆ. ಕೋವಿಡ್ಡಿನ ಅಬ್ಬರದಿಂದ ಪಾರಾಗುವುದಕ್ಕೆ ಇಲ್ಲಿ ಅಲಾವುದ್ದೀನ್ ದೀಪ ಇಲ್ಲ. ಆತ್ಮನಿರ್ಭರ ತುಂಬಾ ದೊಡ್ಡ ಮಾತಾಯಿತು. ಮನುಷ್ಯ ಮಾತ್ರರಾಗಿ ನಾವುಗಳು ಮಾಡಬೇಕಾದ ಈ ಹೊತ್ತಿನ ಕೆಲವು ಸಣ್ಣಪುಟ್ಟ ಕೆಲಸಗಳಿವೆ. ನಾವೆಲ್ಲ ಸೇರಿಕೊಂಡು ಇದನ್ನ ಮಾಡೋಣವಾ?
ಡಿಯರ್ ಕರ್ನಾಟಕ ಸರಕಾರ...
ರಾಜ್ಯದಲ್ಲಿ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಪ್ರತಿದಿನದ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಒಂದು ಕಡೆ ಹೆಣಗಳು ಉರುಳುತ್ತಿವೆ. ಅಲ್ಲಲ್ಲಿ, ಇಲ್ಲಿಲ್ಲಿ ಹಲವರು ಉಸಿರು ಬಿಗಿಹಿಡಿದು ಜೀವನ್ಮರಣದ ಪ್ರಶ್ನೆಯಲ್ಲಿ ತೂಗುತ್ತಿದ್ದಾರೆ.
ಕೊರೋನಾ ಆಪತ್ತನ್ನು ನಿಯಂತ್ರಣದಲ್ಲಿಡಲು ತಾವುಗಳು ಎಷ್ಟು ಹೆಣಗಾಡುತ್ತೀದ್ದೀರೆಂದು ಪ್ರಜೆಗಳಿಗೆ ಗೊತ್ತು. ಪ್ರಜೆಗಳೂ ಅಷ್ಟೇ ಆತಂಕದಲ್ಲಿದ್ದಾರೆ. ಇಬ್ಬರೂ ಸಮಾನ ದುಃಖಿಗಳೇ. ಸೌಲಭ್ಯ, ಸಲಕರಣೆ ಕಲ್ಪಿಸುವ ಸ್ಥಾನದಲ್ಲಿ ನೀವಿದ್ದೀರಿ, ಸ್ವೀಕರಿಸುವ ಸ್ಥಿತಿಯಲ್ಲಿ ನಾವಿದ್ದೇವೆ.
ಕರ್ನಾಟಕದಲ್ಲಿ ಲಾಕ್‌ಡೌನ್ ಬದಲಿಗೆ ಮತ್ತೊಂದು ಟಫ್ ರೂಲ್ಸ್: ಏನದು?
ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪ ಚುನಾವಣೆಗಳು ಮುಗಿಯಲಿ ಎಂದು ತಾವನೇಕರು ಕಾದಿದ್ದಿರಿಲ್ಲವೇ. 17ರ ಮತದಾನದ ನಂತರ 18ರಂದು ಸರ್ವಪಕ್ಷ ಸಭೆ ಕರೆದು ರಾಜ್ಯಕ್ಕೆ ಮಂಗಳವನ್ನುಂಟುಮಾಡುವ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದಾಗಿ ಮಾಧ್ಯಮಗಳ ಮುಖೇನ ವಾಗ್ದಾನ ಮಾಡಿದ್ದಿರಿ.
ಮತದಾನ ಮುಗಿದು 24 ಗಂಟೆಗಳಾದವು. ಈ ಸಭೆ ನಡೆದ ಬಗೆಗೆ ನಮಗೇನೂ ಮಾಹಿತಿ ಇಲ್ಲ. ನಮಗೆ ಅರ್ಥವಾಗತ್ತೆ, ಮುಖ್ಯ ಮಂತ್ರಿಗಳಿಗೆ ಎರಡನೇ ಬಾರಿಗೆ ಕೊರೋನಾ ಎರಗಿ ಮಣಿಪಾಲ ಆಸ್ಪತ್ರೆಯಲಿದ್ರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕೊರೋನಾ ಅಂಟಿಕೊಂಡು ಅಪೋಲೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯನವರು ಕೈಗೆ ಗಾಯ ಮಾಡಿಕೊಂಡು ಸ್ವಗೃಹದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.
ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಮಾಡಲು ಆರೋಗ್ಯ ಸಚಿವರ ಸಭೆ
ಈ ಮಧ್ಯೆ ಭಾನುವಾರ ಮಧ್ಯಾನ್ಹ ಡಾ. ಸುಧಾಕರ್, ಅಶೋಕ, ಬೊಮ್ಮಾಯಿ ಹಾಗೂ ತಜ್ಞರನ್ನೊಳಗೊಂಡ ಇನ್ನೊಂದು ಸಮಿತಿ ರಚಿತವಾಗಿದೆ. ಈ ಸಮಿತಿ ಮಂಗಳವಾರ ಅಂದರೆ ಏಪ್ರಿಲ್ 20 ರಂದು ಕೆಲವು ಟಫ್ ರೂಲ್ಸುಗಳನ್ನು ಜಾರಿಗೆ ತರುವುದಾಗಿ ಹೇಳಿಕೆ ಕೊಟ್ಟಿದೆ. ಮಂಗಳವಾರದತನಕ ತಾವು ಏಕೆ ಕಾಯುತ್ತಿರುವಿರೋ ತಿಳಿಯದಾಗಿದೆ.
ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ. ಜ್ವರ ಬಂದವರಿಗೆ ಆಂಬುಲೆನ್ಸ್ ಸಿಗಲ್ಲ. ದಿನಕ್ಕೆ 300 ಟನ್ ಆಕ್ಸಿಜನ್ ಸಿಲಿಂಡರ್ ಬೇಕು. ನಿಮ್ಮತ್ರ ಇರೋದು 100 ಟನ್ ಮಾತ್ರ. ನಾನಾ ರಾಜ್ಯಗಳಿಗೆ LMO ಗಳನ್ನು ರೈಲಿನ ಮೂಲಕ ರವಾನೆ ಮಾಡುವ ಆದೇಶ ಇದೀಗ ಕೇಂದ್ರದಿಂದ ಹೊರಬಿದ್ದಿದೆ. ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆಯಾ ಎನ್ನುವುದು ಗೊತ್ತಿಲ್ಲ.
ಒಂದು ಕೆಲ್ಸ ಮಾಡೋಣ:
ತರಗತಿಯ ಬೇಧವಿಲ್ಲದೆ ಎಲ್ಲ ಪರೀಕ್ಷೆಗಳನ್ನು ಅನಿರ್ದಿಷ್ಟ ಕಾಲ ಮುಂದೂಡಿ.
ಬೆಂಗಳೂರಿನಲ್ಲಿರುವ 45ಕ್ಕೂ ಹೆಚ್ಚು ಮಾಲ್ ಗಳನ್ನು ಮುಚ್ಚಿಸಿರಿ
ಸಿನಿಮಾ, ನಾಟಕ, ಮತ್ತಿತರ ಸಾಂಸ್ಕೃತಿಕ, ಕೌಟುಂಬಿಕ ಹಬ್ಬಗಳಿಗೆ ಬ್ರೇಕ್ ಹಾಕೋಣ
ಮದುವೆ ಮುಹೂರ್ತಗಳನ್ನು ಮುಂದಕ್ಕೆ ಹಾಕಿ. ಮದುವೆ ಮುಂದೆ ಹೋದಷ್ಟೂ ಪ್ರೀತಿ ಬೆಳೆಯುತ್ತದೆ.
ಸಿಟಿ ಮಾರ್ಕೆಟ್, ಜಾನ್ಸನ್ ಮಾರ್ಕೆಟ್, ರಸೆಲ್ ಮಾರ್ಕೆಟ್ಟುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿ.
ಅಂತೆಯೇ, ಸರ್, ಬಿಡಿಎ ಕಾಂಪ್ಲೆಕ್ಸುಗಳನ್ನೂ ಮುಚ್ಚುವಂತೆ ಹೇಳಿಬಿಡಿ.
ಬಸ್ ಮುಷ್ಕರ ದೇವರೇ ಕರುಣಿಸಿದ ವರವಾಗಿದೆ. ರೈಲುಗಳು ಓಡುತ್ತಿರಲಿ.
ಆಟೋ ರಿಕ್ಷ ತಂಟೆಗೆ ಬರಬೇಡಿ. ಜನತೆ ಆಸ್ಪತ್ರೆಗಳಿಗೆ ಹೋಗುವುದಕ್ಕೆ ಬೇಕಾಗುತ್ತದೆ
ದೇವಸ್ಥಾನ, ಚರ್ಚ್, ಮಸೀದಿಗಳು ಸ್ವಲ್ಪ ದಿವ್ಸ ಬಾಗಿಲು ಮುಚ್ಚಲಿ. ಅರ್ಚಕರು, ಭಕ್ತವೃಂದ ಮನೆಯಲ್ಲೇ ದೀಪ ಹಚ್ಚಿ ಲೋಕಕಲ್ಯಾಣಕ್ಕೆ ಪ್ರಾರ್ಥನೆ ಮಾಡಲಿ.
ಬಾರ್ , ರೆಸ್ಟೋರೆಂಟ್ ಮುಚ್ಚಿ ಪರವಾಗಿಲ್ಲ. ದರ್ಶನಿ ಹೋಟೆಲುಗಳಿರಲಿ.
ರಸ್ತೆ ಬದಿಯ ಹಾಲು ಹಣ್ಣು ತರಕಾರಿ ಅಂಗಡಿಗಳು ಎಂದಿನಂತೆ ಇರಲಿ.
ಕಲ್ಲಂಗಡಿ, ಕರಬೂಜದಿಂದ ಕೊರೋನಾ ಬರಲ್ಲ.
ನಾವು ಜನ ಮಾಡಲೇಬೇಕಾದ ಸಣ್ಣಪುಟ್ಟ ಕರ್ತವ್ಯಗಳಿವೆ.
ನಮ್ಮ ನಮ್ಮ ಮನೆಗಳಲ್ಲಿ ಸುಮ್ಮನೆ ಇರೋಣ. ಸುಮ್ಮನೆ ಇರುವುದು ಕಷ್ಟ.
ಈ ಕಿವಿಮಾತನ್ನು ವಿಕಾರಿ ನಾಮ ಸಂವತ್ಸರ ಕಲಿಸಿಕೊಟ್ಟಿದೆ
ಇಂತಿ ನಿಮ್ಮ
ನಾಳೆಯೂ ಬದುಕು ಬಾಕಿ ಇದೆ ಎಂದು ನಂಬಿರುವ ನಾವು, ನೀವು.