ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರಿಂದ ಆತನನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಆತ ಎಚ್ಚರಗೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಆಸ್ಪತ್ರೆಯಲ್ಲಿ ಮೃತಪಟ್ಟ ಪ.ಪಂ.ಸದಸ್ಯ ಆಂಬ್ಯುಲೆನ್ಸಲ್ಲಿ ಬದುಕಿದ!

Dead Man Alive In Ambulance

ಬೆಳಗಾವಿ: ರೋಗಿಯು ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರಿಂದ ಆತನನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಆತ ಎಚ್ಚರಗೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಮುಗಳಖೋಡದ ಪ.ಪಂ. ಸದಸ್ಯ ಸಂಗಪ್ಪ ಖೇತಗೌಡರ (46) ಸಾವು ಗೆದ್ದ ವ್ಯಕ್ತಿ. ಸಂಗಪ್ಪ ಅವರು ಮಿದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದ ಸಂಗಪ್ಪ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ಆ್ಯಂಬುಲೆನ್ಸ್‌ನಲ್ಲಿ ಮುಗಳಖೋಡಕ್ಕೆ ಶವ ತರುತ್ತಿದ್ದಾಗ ಸಂಗಪ್ಪ ದಿಢೀರನೆ ಉಸಿರಾಡಿದ್ದಾರೆ. ತಕ್ಷಣ ಆತನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಗಪ್ಪ ಅವರು ಮುಗಳಖೋಡ ಪುರಸಭೆ ಸದಸ್ಯ ಹಾಗೂ ಪಟ್ಟಣದ ಪಿಕೆಪಿಎಸ್‌ ನಿರ್ದೇಶಕರೂ ಆಗಿದ್ದರು. ಹೀಗಾಗಿ ಸಂಗಪ್ಪ ಸಾವನ್ನಪ್ಪಿದ್ದಾಗಿ ತಿಳಿದು ಸ್ಥಳೀಯರು ಅಂಗಡಿ- ಮುಂಗಟ್ಟುಗಳನ್ನು ಬಂದ್‌ ಸಂತಾಪಕ್ಕೆ ಮುಂದಾಗಿದ್ದರು. ಇದರ ಮಧ್ಯ ಶವ ಹೂಳಲು ಕುಟುಂಬಸ್ಥರು ಸಿದ್ಧತೆ ಮಾಡಿದ್ದರು. ಬದುಕಿರುವ ಸುದ್ದಿ ತಿಳಿದ ಸಂಬಂಧಿಗಳು ಸಮಾಧಿಯಲ್ಲಿ ಕೋಳಿ ಹೂತು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಸತ್ತನೆಂದು ಆಸ್ಪತ್ರೆಯಿಂದ ಕಳಿಸಿದ ವ್ಯಕ್ತಿ ಮತ್ತೆ ಬದುಕಿರುವುದು ಕುಟುಂಬಸ್ಥರಿಗೆ ಆಶ್ಚರ್ಯದೊಂದಿಗೆ ಸಂತಸ ತಂದಿದೆ.