ಬೆಂಗಳೂರು (ಫೆ.20):  ಪಿಂಚಣಿ ಸೇರಿದಂತೆ ಕಂದಾಯ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಎಂಬ ವಿನೂತನ ಕಾರ್ಯಕ್ರಮ ರಾಜ್ಯಾದ್ಯಂತ ಶನಿವಾರ ನಡೆಯಲಿದೆ.

ಕಂದಾಯ ಸಚಿವರು ಸೇರಿದಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಗದಿಪಡಿಸಿರುವ ಗ್ರಾಮಗಳಲ್ಲಿ ಜನರ ಸಮಸ್ಯೆ ಆಲಿಸಿ ಪರಿಹರಿಸಿ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.

ಶನಿವಾರ ರಾಜ್ಯದ 227 ಗ್ರಾಮ ಪಂಚಾಯಿತಿಗಳಲ್ಲಿ ಕ್ಲರ್ಕ್ಗಳನ್ನು ಹೊರತುಪಡಿಸಿ ಎಲ್ಲಾ ಹಂತದ ಅಧಿಕಾರಿಗಳು ಗ್ರಾಮಗಳಿಗೆ ತೆರಳಲಿದ್ದಾರೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಸೇರಿದಂತೆ ಇತರೆ ಅಧಿಕಾರಿಗಳು ಗ್ರಾಮಗಳಲ್ಲಿ ದಿನವಿಡಿ ಅಲ್ಲಿಯೇ ಇದ್ದು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲಿದ್ದಾರೆ.

ಮೈಸೂರು ಡೀಸಿ ರೋಹಿಣಿ ವಿರುದ್ಧ ಕೇಸ್‌ ..

ಪುರುಷ ಜಿಲ್ಲಾಧಿಕಾರಿಗಳು ವಸತಿ ನಿಲಯ, ವಸತಿ ಶಾಲೆಯಲ್ಲಿ ತಂಗಲಿದ್ದು, ಮಹಿಳಾ ಜಿಲ್ಲಾಧಿಕಾರಿಗಳು ಗ್ರಾಮದವರ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಗೆ ಪಿಂಚಣಿ ಸೌಲಭ್ಯಗಳ ಸಮಸ್ಯೆಗಳ ಕುರಿತು ಅಲಿಸಲಾಗುವುದು. ಪ್ರವಾಹ ಪೀಡಿತ ಸಮಸ್ಯೆಗಳಿಗೂ ಸ್ಪಂದಿಸಲಾಗುವುದು. ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗುವುದು.

ಹೊಸ ಹಳ್ಳಿಯಲ್ಲಿ ಸಚಿವ ಅಶೋಕ್‌ ವಾಸ್ತವ್ಯ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಅಂಗವಾಗಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ತಾವು ಉಸ್ತುವಾರಿ ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದಿನವಿಡೀ ಅಲ್ಲಿಯೇ ಇದ್ದು, ಖುದ್ದು ಸಮಸ್ಯೆಗಳನ್ನು ಆಲಿಸಲಿದ್ದಾರೆ.

ಶನಿವಾರ ಬೆಳಗ್ಗೆ 11 ಗಂಟೆಗೆ ಹೊಸಹಳ್ಳಿ ಗ್ರಾಮಕ್ಕೆ ತೆರಳಿ ದಲಿತರ ಕಾಲೋನಿಗೆ ಭೇಟಿ ನೀಡಿ ಒಂದು ತಾಸು ಅವರೊಂದಿಗೆ ಇದ್ದು ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಪ್ರಯತ್ನ ಮಾಡಲಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಹಳ್ಳಿಕಟ್ಟೆಯಲ್ಲಿ ಕುಳಿತು ಸಮಾಲೋಚನೆ ನಡೆಸಿ ಇತರರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆರೋಗ್ಯ ಶಿಬಿರ ನಡೆಸಲಾಗುವುದು.

ಸಂಜೆ 4ರಿಂದ 5 ಗಂಟೆವರೆಗೆ ಸ್ಥಳೀಯ ಶಾಸಕರೊಂದಿಗೆ ಇದ್ದು, ಗ್ರಾಮಸ್ಥರಿಗೆ ಪರಿಹಾರ ವಿತರಣಾ ಕಾರ್ಯಕ್ರಮ ನಡೆಸಲಾಗುವುದು. ರಾತ್ರಿ 7ಗಂಟೆಗೆ ಸ್ಥಳೀಯ ಕಲಾವಿದರ ಜತೆ ಚರ್ಚೆ ನಡೆಸಲಿದ್ದಾರೆ. ರಾತ್ರಿ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಮರುದಿನ ಬೆಂಗಳೂರಿಗೆ ಆಗಮಿಸಲಿದ್ದಾರೆ.