ದ್ವಿತೀಯ ಸ್ತರದ ನಗರಗಳ ಐಟಿ ಕಂಪನಿಗಳಿಗೆ ಹೇರಳ ರಿಯಾಯಿತಿ: ಡಿಸಿಎಂ

ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉದ್ದಿಮೆ ಸ್ಥಾಪಿಸಲು ಯೋಜಿಸುತ್ತಿರುವ ಅರ್ಹ ಐಟಿ ಸಂಸ್ಥೆಗಳಿಗೆ ವಿವಿಧ ಪ್ರೋತ್ಸಾಹ ಒದಗಿಸಿ ಉತ್ತೇಜಿಸಲು ಮುಂದಾದ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ| ಮುದ್ರಾಂಕ ಶುಲ್ಕದಿಂದ ವಿನಾಯಿತಿ| 

DCM CN Ashwathnarayan Talks Over Bengaluru Technology Summit grg

ಬೆಂಗಳೂರು(ನ.15): ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿಗೆ ವರ್ಚುಯಲ್‌ ರೂಪದಲ್ಲಿ ನ.19ರಿಂದ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬಿಟಿಎಸ್‌) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗುವ ನಿರೀಕ್ಷೆ ಹುಟ್ಟಿಸಿದೆ.

ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉದ್ದಿಮೆ ಸ್ಥಾಪಿಸಲು ಯೋಜಿಸುತ್ತಿರುವ ಅರ್ಹ ಐಟಿ ಸಂಸ್ಥೆಗಳಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ವಿವಿಧ ಪ್ರೋತ್ಸಾಹಗಳನ್ನು ಒದಗಿಸಿ ಉತ್ತೇಜಿಸಲು ಮುಂದಾಗಿದ್ದಾರೆ. ಬಾಡಿಗೆ ವೆಚ್ಚದ ಮರುಪಾವತಿ, ಮುದ್ರಾಂಕ ಶುಲ್ಕದಿಂದ ವಿನಾಯಿತಿ, ವಿದ್ಯುಚ್ಛಕ್ತಿ ದರದಲ್ಲಿ ರಿಯಾಯಿತಿ, ಪೇಟೆಂಟ್‌ಗಳಿಗೆ ತಗಲಿದ ವೆಚ್ಚದ ಮರುಪಾವತಿ, ಮಾರಾಟೋದ್ಯಮ ವೆಚ್ಚದ ಮರುಪಾವತಿ ಸೇರಿದಂತೆ ಹಲವು ಪ್ರೋತ್ಸಾಹಕ ನೀಡುವ ಮಹತ್ವದ ನಿರ್ಧಾರವನ್ನು ಅಶ್ವತ್ಥ ನಾರಾಯಣ ಅವರು ಕೈಗೊಂಡಿದ್ದಾರೆ.

ಏನೇನು ಪ್ರೋತ್ಸಾಹಕ ಕ್ರಮ?:

ರಾಜ್ಯದಲ್ಲಿರುವ ಎಲ್ಲಾ ಅರ್ಹ ಐಟಿ ಉದ್ಯಮಗಳ ಸ್ಥಳೀಯ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿ, ಪುರಸ್ಕರಿಸಿರುವ ಪೇಟೆಂಟ್‌ಗೆ ತಗಲಿರುವ ವೆಚ್ಚಕ್ಕೆ 2 ಲಕ್ಷ ರು.ವರೆಗೆ ಮರುಪಾವತಿಸಲಾಗುವುದು. ಅದೇ ರೀತಿ ಪುರಸ್ಕರಿಸಿರುವ ಅಂತಾರಾಷ್ಟ್ರೀಯ ಪೇಟೆಂಟ್‌ಗೆ ತಗಲಿರುವ ವೆಚ್ಚಕ್ಕೆ 10 ಲಕ್ಷ ರು.ವರೆಗೆ ಮರುಪಾವತಿಗೆ ಉಪಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು ಹೊರತು ಪಡಿಸಿರುವ ನಗರದಲ್ಲಿ ಐಟಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸಮಾವೇಶಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಉತ್ತೇಜನ ನೀಡಲಿದೆ. ಐಟಿ ಘಟಕಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಂಬಂಧಪಟ್ಟಇತರ ಹಿತಾಸಕ್ತಿದಾರರಿಗೆ ಉದ್ಯಮದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲು ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಪಡೆಯಲು ಈ ಸಮಾವೇಶ ವೇದಿಕೆ ಕಲ್ಪಿಸಲಿದೆ.
ಪ್ರಮುಖ ಆರ್ಥಿಕ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸಿ ಉತ್ತಮಗೊಳಿಸಲು ವಿವಿಧ ಉಪಕ್ರಮಗಳ ಮೂಲಕ ಉದ್ಯೋನ್ಮುಖ ಉದ್ಯಮದ ಸಾಮರ್ಥ್ಯಗಳಿಗೆ ಒತ್ತು ನೀಡಲು ಮತ್ತು ಪೂರಕ ಪರಿಸರ ವ್ಯವಸ್ಥೆಯನ್ನು ಬೆಳೆಸಿ ವರ್ಧಿಸಲು ಸರ್ಕಾರವು ತನ್ನ ಹೊಣೆಗಾರಿಕೆಯನ್ನು ಕಂಡುಕೊಂಡಿದೆ. ವ್ಯವಹಾರವನ್ನು ಹೆಚ್ಚು ಸುಗಮವಾಗಿ ಕೈಗೊಳ್ಳಲು ಅನುವಾಗುವಂತೆ ಐಟಿ ಸೇವೆಗಳ, ಯಂತ್ರಾಂಶ ಮತ್ತು ತಂತ್ರಾಂಶ ಉತ್ಪನ್ನಗಳ ಮತ್ತು ಕ್ಲೌಡ್‌ ಸಂಬಂಧಿತ ಸೇವೆ ಕುರಿತು ಅಶ್ವತ್ಥ ನಾರಾಯಾಣ ನೇತೃತ್ವದಲ್ಲಿ ಐಟಿ ಇಲಾಖೆಯು ತನ್ನ ಸಾರ್ವಜನಿಕ ಸಂಗ್ರಹಣೆಯನ್ನು ಕ್ರಮದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ.

ನ.19ರಿಂದ ಬೆಂಗಳೂರು ಟೆಕ್‌ ಶೃಂಗ: ಮಹತ್ವದ 12 ಒಪ್ಪಂದಗಳಿಗೆ ಸಹಿ

ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಗಳಲ್ಲಿ ಐಟಿ ಮೂಲಸೌಕರ್ಯವೂ ಒಂದು. ರಾಜ್ಯದ ಪ್ರಗತಿಯ ಒರೆಗಲ್ಲಿಗೆ ಇದು ಅತ್ಯಂತ ಸ್ಪಷ್ಟಸಾಕ್ಷಿಯಾಗಿದೆ. ಬೆಂಗಳೂರು ಹೊರತುಪಡಿಸಿ ಇತರೆ ನಗರಗಳ ಬೆಳವಣಿಗೆಯ ವೇಗವನ್ನು ವರ್ಧಿಸಲು ಈ ಸಮಾವೇಶ ಶ್ರೀಕಾರ ಹಾಕಲಿದೆ ಎಂದು ಬಿಂಬಿಸಲಾಗುತ್ತಿದೆ.

ಬೆಂಗಳೂರು ಹೊರತು ಇತರೆ ನಗರದಲ್ಲಿ ಸ್ಥಾಪಿಸುವ ಐಟಿ ಹಬ್‌ಗಳು/ಕ್ಲಸ್ಟರ್‌ಗಳಿಗೆ, ಸ್ಥಿರ ಹೂಡಿಕೆಗಳ (ಜಮೀನು ವೆಚ್ಚ ಹೊರತುಪಡಿಸಿ) ಶೇ.20ರವರೆಗೆ ಮತ್ತು 3 ಕೋಟಿ ರು.ಗಳ ಪರಿಮಿತಿಗೊಳಪಟ್ಟು, ಇವೆರೆಡರಲ್ಲಿ ಯಾವುದು ಕಡಿಮೆಯೋ ಅಷ್ಟುಆರ್ಥಿಕ ಬೆಂಬಲ ಕಲ್ಪಿಸಲಿದೆ. ಐಟಿ ಹಬ್‌ಗಳು/ಕ್ಲಸ್ಟರ್‌ಗಳು ನೆಲೆಯೂರಿರುವ ಸ್ಥಳದ ಕನಿಷ್ಠ ಶೇ. 60ರಷ್ಟಕ್ಕೆ ಅಥವಾ ಐಟಿ ಉದ್ಯಮದಲ್ಲಿ ಕನಿಷ್ಠ 500 ಉದ್ಯೋಗಾವಕಾಶಗಳನ್ನು ಕಲ್ಪಸುವ ಸಂಸ್ಥೆಗಳಿಗೆ ರಾಜ್ಯಮಟ್ಟದ ಸಮಿತಿಗಳಿಂದ ಅನುಮೋದನೆ ಮತ್ತು ಶಿಫಾರಸ್ಸುಗಳಿಗೆ ಒಳಪಟ್ಟು ಆರ್ಥಿಕ ಸಹಾಯವು ಅನ್ವಯವಾಗುತ್ತದೆ.

ಮುದ್ರಾಂಕ ಶುಲ್ಕದಿಂದ ವಿನಾಯಿತಿ

ರಾಜ್ಯ ಕೈಗಾರಿಕಾ ನೀತಿಯ ಪ್ರಕಾರ ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಮಂಗಳೂರಿನಲ್ಲಿ ಶೇ.75ರಷ್ಟುವಿನಾಯಿತಿ ಮತ್ತು ಬೆಂಗಳೂರಿನ ಹೊರತು ಪಡಿಸಿ ಇನ್ನುಳಿದೆಲ್ಲಾ ಪ್ರದೇಶಗಳಲ್ಲಿ ಉದ್ಯಮ ಸ್ಥಾಪಿಸುವವರಿಗೆ ಶೇ.100ರಷ್ಟು ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಅಂತೆಯೇ ರಾಜ್ಯದಲ್ಲಿನ ಐಟಿ ಉದ್ಯಮಗಳಿಗೆ ವಾಣಿಜ್ಯ ದರಕ್ಕೆ ಹೋಲಿಸಿದಾಗ ಅಗ್ಗವೆನಿಸುವ ಕೈಗಾರಿಕಾ ವಿದ್ಯುಚ್ಛಕ್ತಿ ದರವನ್ನು ಅನ್ವಯ ಮಾಡಲಾಗಿದೆ.

ವೆಚ್ಚ ಮರುಪಾವತಿ

ಬೆಂಗಳೂರಿನ ಹೊರಗೆ ಸ್ಥಾಪಿಸಲಾದ ಎಲ್ಲಾ ಅರ್ಹ ಐಟಿ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದ ವ್ಯಾಪಾರ ಪ್ರದರ್ಶನದಲ್ಲಿ ಭಾಗವಹಿಸುವಿಕೆಗೆ ವೆಚ್ಚವಾಗುವ ಮೊತ್ತದಲ್ಲಿ ಶೇ.30 ರಷ್ಟನ್ನು ಕರ್ನಾಟಕ ಸರ್ಕಾರವು ಭರಿಸಲಿದೆ. ಈ ಯೋಜನೆಯ ಲಾಭವನ್ನು ಒಂದು ಘಟಕಕ್ಕೆ ಒಂದು ವರ್ಷಕ್ಕೆ 4 ಲಕ್ಷ ರು.ವರೆಗೆ ದೊರೆಯಲಿದೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ

ಸ್ಥಳೀಯ ಐಟಿ ಸಂಸ್ಥೆಗಳು (ವಿದೇಶಿ ಸಂಸ್ಥೆಗಳ ಭಾರತೀಯ ಅಂಗಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ) ಕೈಗೊಳ್ಳುವ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರವು ಗರಿಷ್ಠ ಶೇ.33 ರಷ್ಟು ಅಥವಾ 1 ಕೋಟಿ ರು., (ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು) ಅನುದಾನ ನೀಡಲಿದೆ. ಈ ಅನುದಾನ ಒಂದು ಬಾರಿ ಪಡೆದುಕೊಳ್ಳಬಹುದು.
 

Latest Videos
Follow Us:
Download App:
  • android
  • ios