ವೈಮಾನಿಕ-ರಕ್ಷಣೆ ಸೇರಿ 5 ಆದ್ಯತಾ ವಲಯಗಳಲ್ಲಿ ಕ್ರಾಂತಿಕಾರಿ ಮುನ್ನಡೆ ಸಾಧಿಸಲು ಕರ್ನಾಟಕ ಸಜ್ಜಾಗಿದೆ. ಇನ್ನು ಈ ಬಗ್ಗೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದರು. 

ಬೆಂಗಳೂರು, (ಮಾ.02): ಕರ್ನಾಟಕ ರಾಜ್ಯದ ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ಇ.ಆರ್.&ಡಿ) ನೀತಿ-2021 ಯನ್ನು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ಅನಾವರಣಗೊಳಿಸಿದರು. 

ನೀತಿಯನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ರಾಜ್ಯದ ಪ್ರಗತಿಗೆ ಹೊಸ ದಿಕ್ಕು ತೋರುವ ಈ ನೀತಿಯನ್ನು ಇಡೀ ಭಾರತದಲ್ಲಿಯೇ ಕರ್ನಾಟಕ ರಾಜ್ಯವು ಮೊದಲ ಬಾರಿಗೆ ರೂಪಿಸಿ ಅಳವಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಕೈಗಾರಿಕೆ ತರಬೇತಿ ಶಿಕ್ಷಣ (ITI)ಅಭಿವೃದ್ಧಿಗೆ 5,000 ಕೋಟಿ ರೂ. ವೆಚ್ಚ: ಡಿಸಿಎಂ

ನಮ್ಮ ದೇಶದಲ್ಲಿ ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು 2018ರಿಂದ ವಾರ್ಷಿಕವಾಗಿ ಸರಾಸರಿ 12.8% ಬೆಳವಣಿಗೆ ಸಾಧಿಸುತ್ತಿದೆ. ಇದೇ ವೇಳೆ ಈ ವಲಯದ ಮೇಲಿನ ಜಾಗತಿಕ ವೆಚ್ಚವು 2025ರ ಹೊತ್ತಿಗೆ 2 ಟ್ರಿಲಿಯನ್ ಡಾಲರ್‌ಗಳಷ್ಟಾಗುವ ಅಂದಾಜಿದ್ದು, ಈ ವಹಿವಾಟು ಅವಕಾಶಗಳಿಗೆ ಅನುಗುಣವಾಗಿ ರಾಜ್ಯವನ್ನು ಸಜ್ಜುಗೊಳಿಸುವ ಉದ್ದೇಶವನ್ನು ಈ ಕಾರ್ಯನೀತಿ ಹೊಂದಿದೆ ಎಂದು ತಿಳಿಸಿದರು.

ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ತಂತ್ರಜ್ಞಾನ ಮತ್ತು ನಾವೀನ್ಯತಾ ಸಂಸ್ಥೆ (ಕಿಟ್ಸ್), ನ್ಯಾಸ್‌ಕಾಂನ ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ರೂಪಿಸಿರುವ ಕಾರ್ಯನೀತಿ ಇದಾಗಿದೆ‌ ಎಂದ ಡಿಸಿಎಂ; ಇದರ ವ್ಯಾಪ್ತಿಯಲ್ಲಿ ಅನೇಕ ವಲಯಗಳನ್ನು ಸೇರಿಸಿಕೊಂಡು ಮುನ್ನಡೆಯಲಾಗುವುದು ಎಂದರು. 

ಕ್ಷೇತ್ರಗಳು ಯಾವುವು?: 
*ವೈಮಾಂತರಿಕ್ಷ ಮತ್ತು ರಕ್ಷಣೆ
*ವಾಹನ-ವಾಹನ ಬಿಡಿಭಾಗಗಳು-ವಿದ್ಯುತ್ ಚಾಲಿತ ವಾಹನಗಳು
*ಜೈವಿಕ ತಂತ್ರಜ್ಞಾನ, ಔಷಧ ಮತ್ತು ವೈದ್ಯಕೀಯ ಉಪಕರಣಗಳು/ಸಾಧನಗಳು
*ಅರೆವಾಹಕಗಳು, ದೂರಸಂಪರ್ಕ, ಎಲೆಕ್ಟ್ರಾನಿಕ್‌ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣೆ (ಇ.ಎಸ್.ಡಿ.ಎಂ.)
*ಸಾಫ್ಟ್‌ವೇರ್ ಉತ್ಪನಗಳು 

ಇವು ಈ ಕಾರ್ಯನೀತಿಯ ಐದು ಆದ್ಯತಾ ವಲಯಗಳಾಗಿವೆ. ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಅನುಷ್ಟಾನದ ನಂತರ ಮೇಲಿನ ಎಲ್ಲ ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶಗಳನ್ನು ಹಾಗೂ ಮುನ್ನಡೆಯನ್ನು ಕಾಣಬಹುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ಜ್ಞಾನಕಾಶಿಯಾಗಿಸಲು ಸಹಕಾರಿ: 
400ಕ್ಕೂ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳು/ಜಿಸಿಸಿಗಳು ರಾಜ್ಯದಲ್ಲಿದ್ದು ದೇಶದ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಉದ್ಯಮದಲ್ಲಿ ಅತ್ಯಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಈ ಅಗ್ರ ಶ್ರೇಯಾಂಕವನ್ನು ಕಾಯ್ದುಕೊಳ್ಳುವ ಗುರಿ ನಮಗಿದ್ದು, ಬೌದ್ಧಿಕ ಸ್ವತ್ತುಗಳ ಸೃಷ್ಟಿ ಹಾಗೂ ರಾಜ್ಯವನ್ನು ಕೌಶಲಯುಕ್ತ ಜ್ಞಾನಕಾಶಿಯಾಗಿಸಲು ಇದು ಸಹಕಾರಿ ಆಗುತ್ತದೆ ಎಂದು ಡಿಸಿಎಂ ವಿವರಿಸಿದರು. 
.
ಅತ್ಯಂತ ಪರಿಣಾಮಕಾರಿ ಒಳನೋಟದಿಂದ ಕೂಡಿದ ನೀತಿ ಇದಾಗಿದೆ. ಉದ್ಯಮ ಪ್ರಚಲಿತ ಸ್ಥಿತಿಗತಿಗಳನ್ನು ಅವಲೋಕನ ಮಾಡಿ, ಅದಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ. ರಾಜ್ಯವು ಬಹುರಾಷ್ಟ್ರೀಯ ಕಂಪನಿಗಳ ಪ್ರಶಸ್ತ ಆದ್ಯತೆಯ ತಾಣವನ್ನಾಗಿಸಲು ಈ ನೀತಿ ಅನುವು ಮಾಡಿಕೊಡಲಿದೆ. ಜಾಗತಿಕ ಮುಂಚೂಣಿ ಇ.ಆರ್.&ಡಿ ಕಂಪನಿಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಎಂಜಿನಿಯರಿಂಗ್ ಸೇವಾದಾತರು ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೂಡಿಕೆ ಮಾಡುವಂತೆ ಮಾಡುವುದು ಹಾಗೂ ಹಾಗೆ ಬರುವ ಘಟಕಗಳಿಗೆ ರಾಜ್ಯದಲ್ಲಿ ಸೂಕ್ತ ವಾತಾವರಣ ನಿರ್ಮಿಸಬೇಕು ಎಂಬುದು ಈ ನೀತಿ ಗುರಿ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. 

*ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ಇ.ಆರ್.&ಡಿ) ನೀತಿ-2021; ಏನು? ಎತ್ತ? 
ಈಗ ಅನಾವರಣಗೊಂಡಿರುವ ಈ ನೀತಿಯ ಕಾರ್ಯಸೂಚಿ, ಉದ್ದೇಶಗಳು, ಉಪಯೋಗ, ಇನ್ನಿತರೆ ಅಂಶಗಳ ಬಗ್ಗೆ ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದು ಹೀಗೆ; 

*ನೀತಿಯ ಉದ್ದೇಶ 
-ಉದ್ಯಮ ಹಾಗೂ ಶೈಕ್ಷಣಿಕ ವಲಯದ ನಡುವೆ ಸಂಪರ್ಕಗಳನ್ನು ಸೃಷ್ಟಿಸುವುದು.
-ಕೌಶಲಯುಕ್ತ ಎಂಜಿನಿಯರಿಂಗ್ ಮಾನವ ಸಂಪನ್ಮೂಲ ಸೃಷ್ಟಿಸುವುದು.
-ಪರೀಕ್ಷೆ, ಪ್ರಾಯೋಗಿಕ ಮಾದರಿ ಹಾಗೂ ಇತರ ನಾವೀನ್ಯತಾ ಮೂಲಸೌಕರ್ಯಗಳ ಸೃಷ್ಟಿ.
-ಬೆಂಗಳೂರು ವ್ಯಾಪ್ತಿಯಾಚೆ ಎಂಜಿನಿಯರಿಂಗ್ ಆರ್&ಡಿ ಉದ್ಯಮ ಬೆಳೆಸುವುದು 

*ನೀತಿಯ ಉಪಯೋಗ 
-ದೇಶದ ಎಂಜಿನಿಯರಿಂಗ್ ಮತ್ತು ಅಭಿವೃದ್ಧಿ ವಹಿವಾಟನಲ್ಲಿ ಕರ್ನಾಟಕದ ಶೇ.45ರಷ್ಟು ಕೊಡುಗೆಗೆ ಅನುವು ಮಾಡಿಕೊಡುವುದು.
-50,000 ಕೌಶಲಯುಕ್ತ ಉದ್ಯೋಗಗಳನ್ನು (ಪ್ರತ್ಯಕ್ ಹಾಗೂ ಪರೋಕ್ಷ) ಸೃಷ್ಟಿಸುವುದು.
-ಎಂಜಿನಿಯರಿಂಗ್ ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಆಕರ್ಷಿಸುವುದು.
-ಎಂಜಿನಿಯರಿಂಗ್/ಸಂಶೋಧನಾ ಪ್ರತಿಭಾ ಸಂಪನ್ಮೂಲ ಹಾಗೂ ಉದ್ಯಮದ ಅಗತ್ಯಗಳ ಅಂತರ ತುಂಬುವುದು. 

*ಪ್ರೋತ್ಸಾಹಕ ಕ್ರಮ: 
•ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಾಚೆಗೆ ಸ್ಥಾಪನೆ/ವಿಸ್ತರಣೆ ಮಾಡಿದರೆ ಬಾಡಿಗೆ ಮರುಪಾವತಿ.
•ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಾಚೆಗೆ ಸ್ಥಾಪನೆ/ವಿಸ್ತರಣೆ ಮಾಡಿದರೆ ನೇಮಕಾತಿಗೆ ನೆರವು.
•ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಾಚೆಗೆ ಸ್ಥಾಪನೆ/ವಿಸ್ತರಣೆ ಮಾಡಿದರೆ ಹೂಡಿಕೆಗೆ ಸಬ್ಸಿಡಿ.
•ನಾವೀನ್ಯತಾ ಪ್ರಯೋಗಾಲಯಗಳ ಸ್ಥಾಪನೆಗೆ ಹಣಕಾಸು ನೆರವು.
•ಡಿಜಿಟಲ್ ನಾವೀನ್ಯತಾ ಕಾರ್ಯಯೋಜನೆಗಳಿಗೆ ರೂ.3 ಕೋಟಿಯವರೆಗೆ ನೆರವು.
•ಶೈಕ್ಷಣಿಕ ವಲಯದ ಸಂಶೋಧನೆಗಳನ್ನು ಔದ್ಯಮಿಕ ಆನ್ವಯಿಕತೆಯಾಗಿ ಪರಿವರ್ತಿಸಲು ಅನುದಾನ.
•ಭವಿಷ್ಯದ ಇ.ಆರ್. ಮತ್ತು ಡಿ ಕೋರ್ಸುಗಳನ್ನು ರೂಪಿಸಲು ನೆರವು.
•ಶೈಕ್ಷಣಿಕ ಕೌಶಲಗಳು ಹಾಗೂ ಉದ್ಯಮಗಳ ನಡುವಿನ ಅಂತರ ತುಂಬಲು ಇಂಟರ್ನಶಿಪ್ ಉತ್ತೇಜಿಸಲು ಸ್ಟೈಪೆಂಡ್ ನೀಡುವುದು ಇತ್ಯಾದಿ.
•ಇ.ಆರ್.ಅಂಡ್ ಡಿ ವಲಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಉತ್ತೇಜನ.
•ಪಿಎಚ್.ಡಿ. ಮಾಡುವವರಿಗೆ ಮುಖ್ಯಮಂತ್ರಿಯವರ ಸಂಶೋಧನಾ ಅನುದಾನ. 

ರಾಜ್ಯದ ಮಾಜಿ ಮುಖ್ಯಕಾರ್ಶಿ ಹಾಗೂ ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್, ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ನ್ಯಾಸ್‌ಕಾಂ ಅಧ್ಯಕ್ಷೆ ದೇಬ್‌ಜಾನಿ ಘೋಷ್ ಅವರುಗಳ ನೀತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಪ್ರಸಕ್ತ ನೀತಿಯಿಂದ ರಾಜ್ಯಕ್ಕೆ-ದೇಶಕ್ಕೆ ಆಗಲಿರುವ ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲಿದರು, 

ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಅವರು ನೀತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. 

ರಾಜ್ಯದ ನ್ಯಾಸ್‌ಕಾಂ ಮುಖ್ಯಸ್ಥ ವಿಶ್ವನಾಥನ್‌, ಕ್ವೆಸ್ಟ್ ಗ್ಲೋಬಲ್ ಅಧ್ಯಕ್ಷ ಡಾ.ಅಜಯ್ ಪ್ರಭು, ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.