ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಮಾವೇಶವು ರಾಜ್ಯಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಪ್ರಕಾರ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಮತ್ತು ಡೇಟಾ ಕೇಂದ್ರಗಳಂತಹ ವಲಯಗಳಲ್ಲಿ ಹಲವು ಜಾಗತಿಕ ಕಂಪನಿಗಳು ಹೂಡಿಕೆ ಮಾಡಲು ಒಲವು ತೋರಿವೆ.

ಬೆಂಗಳೂರು: ರಾಜ್ಯದಲ್ಲಿ ಅತ್ಯಾಧುನಿಕ ತಯಾರಿಕೆ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಡೇಟಾ ಕೇಂದ್ರಗಳ ಸ್ಥಾಪನೆ ಸಂಬಂಧ ಹೊಸ ಹೂಡಿಕೆ ಆಕರ್ಷಿಸಲು ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಸಮಾವೇಶ ಸಹಕಾರಿಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದ ನಾಲ್ಕು ದಿನಗಳ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆಗೂಡಿ ಹಲವು ಸಭೆಗಳನ್ನು ನಡೆಸಲಾಗಿದೆ. ಏರೋಸ್ಪೇಸ್‌ ಮತ್ತು ಡಿಫೆನ್ಸ್, ಅಡ್ವಾನ್ಸ್ಡ್‌ಮ್ಯಾನುಫ್ಯಾಕ್ಚರಿಂಗ್‌, ಪಾನೀಯ, ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಮತ್ತಿತರ ಆದ್ಯತಾ ವಲಯಗಳಲ್ಲಿ 25ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಕಂಪನಿಗಳು ಮತ್ತು 15ಕ್ಕೂ ಹೆಚ್ಚಿನ ಭಾರತದ ಕಂಪನಿಗಳ ಜತೆ ಸಭೆ ನಡೆಸಲಾಗಿದೆ. ಅದರಲ್ಲಿ ಬಹುತೇಕ ವಲಯಗಳು ಕರ್ನಾಟಕದಲ್ಲಿ ಹೂಡಿಕೆಗೆ ಒಲವು ತೋರಿವೆ. ಜತೆಗೆ ಲಿಚೆಂಟೈನ್‌, ಸಿಂಗಾಪುರ ಸರ್ಕಾರದ ಜತೆಗೆ ಸರ್ಕಾರದಿಂದ ಸರ್ಕಾರಕ್ಕೆ (ಜಿ2ಜಿ) ಮಾತುಕತೆ ನಡೆಸಲಾಗಿದೆ. ಎಂದರು.

Scroll to load tweet…

ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ ಹೂಡಿಕೆಗೆ ಒಲವು

ದಾವೋಸ್‌ ಸಮಾವೇಶದಲ್ಲಿ ರಾಜ್ಯದ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಹೂಡಿಕೆ ಹಾಗೂ ವಿಸ್ತರಣೆಗೆ ಒತ್ತು ನೀಡಲಾಗಿದ್ದು, ಹಲವು ಕಂಪನಿಗಳು ಆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿವೆ. ಅದರಲ್ಲೂ ರಾಜ್ಯದ 2ನೇ ಸ್ತರದ ನಗರಗಳಲ್ಲಿ ಉದ್ಯಮ ವಿಸ್ತರಣೆಗೆ ಟೆಕ್‌ ಮಹೀಂದ್ರಾ, ಡೇಟಾ ಕೇಂದ್ರ ಸ್ಥಾಪಿಸಲು ಭಾರ್ತಿ ಎಂಟರ್‌ಪ್ರೈಸಸ್‌ ಮತ್ತು ಸಿಫಿ ಟೆಕ್ನಾಲಜೀಸ್‌ ಆಸಕ್ತಿ ತೋರಿಸಿವೆ ಎಂದು ತಿಳಿಸಿದರು.

ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್‌, ಕ್ವಾಂಟಂ ಸೇರಿದಂತೆ ಮತ್ತಿತರ ಭವಿಷ್ಯದ ತಂತ್ರಜ್ಞಾನಗಳು ಒಡ್ಡಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಚಿಂತನೆಗಳನ್ನು ಅಳವಡಿಸುವ ಅಗತ್ಯತೆ ದಾವೋಸ್‌ ಭೇಟಿಯಲ್ಲಿ ತಿಳಿದುಬಂದಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ ಎಂದು ವಿವರಿಸಿದರು.

ಭವಿಷ್ಯದ ಹೂಡಿಕೆಗಳ ಬಗ್ಗೆ ಚರ್ಚೆ

ಸಮಾವೇಶದಲ್ಲಿ ದೇಶಿ ಉದ್ಯಮಗಳೊಂದಿಗೆ ಯಾವುದೇ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳದ ಕುರಿತು ನಿರ್ಧರಿಸಲಾಗಿತ್ತು. ಅದರ ಬದಲು ಭವಿಷ್ಯದ ಹೂಡಿಕೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ ಕ್ವಿನ್‌ ಸಿಟಿಯ ಭಾಗವಾಗುವುದಕ್ಕೆ ಟಾಟಾ ಸನ್ಸ್‌ ಆಸಕ್ತಿ ತೋರಿದೆ. ಈ ಸಂಬಂಧ ಮಾತುಕತೆ ಮುಂದುವರಿಸಲಾಗುವುದು ಎಂದು ಹೇಳಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ, ಇನ್ವೆಸ್ಟ್‌ ಕರ್ನಾಟಕ ಫೋರಂನ ಸಿಇಒ ಜೋತ್ಸ್ನಾ, ಕೆಐಎಡಿಬಿ ಸಿಇಒ ಡಾ. ಮಹೇಶ್‌, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಇತರರಿದ್ದರು.