- ನಾಗರಾಜ.ಎಸ್‌.ಬಡದಾಳ್‌

ದಾವಣಗೆರೆ(ಮೇ.09): ಕೊರೋನಾ ಮಹಾಮಾರಿಯ ಹೊಡೆತದಿಂದ ತತ್ತರಿಸಿರುವ ಅಮೆರಿಕದಲ್ಲಿ ದಾವಣಗೆರೆ ಮೂಲದ ವೈದ್ಯೆಯೊಬ್ಬರು 5 ತಿಂಗಳ ಗರ್ಭಿಣಿಯಾಗಿದ್ದರೂ ಸೋಂಕಿತರ ರಕ್ಷಣೆಗಾಗಿ ನಿತ್ಯ 12ರಿಂದ 18 ತಾಸು ಸೇವೆ ಸಲ್ಲಿಸುತ್ತಿದ್ದು, ಅವರ ಈ ನಿಸ್ವಾರ್ಥ ಸೇವೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ದಾವಣಗೆರೆಯ ರಮೇಶ ಅಂಬರಕರ್‌ ಹಾಗೂ ರೂಪಶ್ರೀ ಅಂಬರಕರ್‌ ದಂಪತಿಯ ಕಿರಿಯ ಪುತ್ರಿ ಡಾ.ರಚನಾ.ಆರ್‌.ಅಂಬರಕರ್‌, ಅಮೆರಿಕದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್‌. ರಚನಾ ಅವರ ಪತಿ ಹೈದರಾಬಾದ್‌ ಮೂಲದ ಡಾ.ರೋಹನ್‌ ಗರ್ಜೆ ಕ್ಯಾನ್ಸರ್‌ ತಜ್ಞರಾಗಿದ್ದು, ಅವರೂ ಪತ್ನಿಗೆ ಬೆಂಬಲವಾಗಿ ನಿಂತಿದ್ದಾರೆ. ಆರು ವರ್ಷದಿಂದ ರಚನಾ ಅಮೆರಿಕದಲ್ಲಿ ನೆಲೆಸಿದ್ದಾರೆ.

12 ತಾಸು ಕಾರ್ಯ: ರಚನಾ ಈ ಮೊದಲು ಸೋಂಕಿತರ ರಕ್ಷಣೆಗೆ ನಿತ್ಯ 18 ತಾಸು ನಿರಂತರ ದುಡಿಯುತ್ತಿದ್ದರು. ಆದರೆ, ಇದೀಗ ಅವರು 5 ತಿಂಗಳ ಗರ್ಭಿಣಿಯಾಗಿರುವ ಕಾರಣಕ್ಕೆ ಆಸ್ಪತ್ರೆಯಲ್ಲೀಗ 12 ಗಂಟೆ ಕಾಲ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

ದಾವಣಗೆರೆಯ ತರಳಬಾಳು ಅನುಭವ ಮಂಟಪ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ರಚನಾ, ಎಸ್‌.ಎಸ್‌. ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ್ದರು. ನಂತರ ಅಮೆರಿಕದ ಮಿಷಿಗನ್‌ನಲ್ಲಿ ಎಂ.ಡಿ. ಮಾಡಿದ್ದು, ಕಳೆದೊಂದು ವರ್ಷದಿಂದ ಚಿಕಾಗೋದ ಲೋವಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದಾವಣಗೆರೆಯಲ್ಲಿ ಮತ್ತೆ 14 ಪಾಸಿಟಿವ್‌ ಕೇಸ್‌, 257 ವರದಿ ಬಾಕಿ: ಜಿಲ್ಲಾಧಿಕಾರಿ

‘ನಮ್ಮ ಮಗಳು ರಚನಾ ಕೆಲಸ ಮಾಡುತ್ತಿರುವ ಆಸ್ಪತ್ರೆಯಲ್ಲಿ ಸದ್ಯ 85 ಮಂದಿ ಸೋಂಕಿತರು ಕ್ವಾರಂಟೈನ್‌ನಲ್ಲಿದ್ದಾರಂತೆ. ಮಾಚ್‌ರ್‍ ತಿಂಗಳಿನಿಂದಲೇ ಮಗಳು ಸೋಂಕಿತರ ಸೇವೆ ಮಾಡುತ್ತಿದ್ದಾಳೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾವಿಬ್ಬರೂ ಈವೇಳೆಗೆ ಮಗಳ ಬಳಿ ಹೋಗಬೇಕಾಗಿತ್ತು. ಆದರೆ, ಕೊರೋನಾದಿಂದಾಗಿ ವಿಮಾನ ಸಂಚಾರ ಸ್ಥಗಿತವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ತಕ್ಷಣ ಮಗಳ ಬಳಿ ಹೋಗುತ್ತೇವೆ’ ಎಂದು ರಮೇಶ್‌-ರೂಪಶ್ರೀ ದಂಪತಿ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ.

‘5 ತಿಂಗಳ ಗರ್ಭಿಣಿ ಆಗಿರುವ ಕಾರಣ ಮಗಳು ಕೆಲಸ ಮಾಡುತ್ತಿರುವುದು ನಮ್ಮಲ್ಲೂ ಭಯ ತರುತ್ತದೆ. ಆದರೆ, ಕೊರೋನಾ ವಿಚಾರವಾಗಿ ಮಗಳು, ಅಳಿಯ ಜೊತೆ ಮಾತನಾಡುವುದಿಲ್ಲ’ ಎನ್ನುತ್ತಾರೆ ರಚನಾ ಪೋಷಕರು.

ನಿನ್ನ ಕರ್ತವ್ಯವನ್ನು ಶ್ರದ್ಧೆ, ಪ್ರಾಮಾಣಿಕೆಯಿಂದ ಮಾಡು. ನಾವು ನಂಬುವ ಬಾಬಾ ನಿಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬುದಾಗಿ ಹೇಳಿದ್ದೇವೆ. ನನ್ನ ಮಗಳು ಪವಿತ್ರ ವೃತ್ತಿಯಲ್ಲಿದ್ದು, ಆಕೆಯಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದೇವೆ. ನಿನ್ನ ಕೆಲಸವನ್ನು ಧೈರ್ಯದಿಂದ ಮಾಡು. ಯಾವುದಕ್ಕೂ ಹೆದರಬೇಡ. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿಕೋ ಎಂದು ಸಲಹೆ ನೀಡಿದ್ದೇವೆ.

- ರಮೇಶ್‌ ಮತ್ತು ರೂಪಶ್ರೀ ಅಂಬರಕರ್‌, ಡಾ.ರಚನಾ ಪೋಷಕರು