*   ಮುಖ್ಯಮಂತ್ರಿ ಬಯಕೆ ವ್ಯಕ್ತಪಡಿಸಿದ ಮಾಜಿ ಸಿಎಂ*   ದಲಿತರ ಅನುದಾನ ದಲಿತರಿಗಷ್ಟೇ ಬಳಸುವ ವಾಗ್ದಾನ*  ಶಿಕ್ಷಣಕ್ಕೆ ಆದ್ಯತೆ ಕೊಡಿ 

ಬೆಂಗಳೂರು(ಮೇ.19): ‘ನನ್ನ ಅಧಿಕಾರಾವಧಿಯಲ್ಲಿ ದಲಿತರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದೇನೆ. ಈಗ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದರೆ ದಲಿತರ ಸಾಲ ಮನ್ನಾ ಮಾಡುತ್ತೇನೆ.’ ಹೀಗೆ ಹೇಳುವ ಮೂಲಕ ಮತ್ತೆ ಮುಖ್ಯಮಂತ್ರಿ ಹುದ್ದೆಗೇರುವ ಆಕಾಂಕ್ಷೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

ವಸಂತನಗರದ ಮಿಲ್ಲ​ರ್‍ಸ್ ರಸ್ತೆಯಲ್ಲಿರುವ ಅಂಬೇಡ್ಕರ್‌ ಭವನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಷಿತರ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿದ್ದಾಗ ಶೋಷಿತ ಸಮುದಾಯ ಅಭಿವೃದ್ಧಿಯಾಗಬೇಕೆಂದು ದಲಿತರಿಗೆ ಅನುದಾನವನ್ನು 50 ಲಕ್ಷದಿಂದ 1 ಕೋಟಿ ರು. ವರೆಗೆ ಹೆಚ್ಚಳ ಮಾಡುವಂತೆ ಘೋಷಿಸಿದ್ದೆ. ಆದರೆ ನಂತರ ಅದನ್ನು ಯಾರೂ ಅನುಷ್ಠಾನಕ್ಕೆ ತರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಾಡಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಯಡಿಯೂರಪ್ಪ, ಬೊಮ್ಮಾಯಿನೂ ಮಾಡಲಿಲ್ಲ, ಮತ್ತೊಮ್ಮೆ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದರೆ ದಲಿತರ ಸಾಲವನ್ನು ಮನ್ನಾ ಮಾಡುತ್ತೇನೆ. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಕೇವಲ ದಲಿತ ಸಮುದಾಯಕ್ಕೆ ಮಾತ್ರ ಬಳಕೆ ಮಾಡುವೆ’ ಎಂದು ಹೇಳಿದರು.

OBC Reservation: ಜಾತಿ ಗಣತಿ ಆಧರಿಸಿ ಒಬಿಸಿ ಮೀಸಲು ಕೊಡಿ: ಸಿದ್ದರಾಮಯ್ಯ

‘ಈ ಸರ್ಕಾರ ದಲಿತರಿಗೆ ಮೋಸ ಮಾಡಿದೆ. ಈ ವಿಚಾರ ಗೊತ್ತಿದ್ದರೂ ದಲಿತ ಸಂಘಟನೆಗಳು ಏನು ಮಾಡುತ್ತಿವೆ ? ಸಮುದಾಯದ ಪರ ಧ್ವನಿ ಎತ್ತಬೇಕಲ್ಲವೇ? ನಿಮ್ಮ ಹಣವನ್ನು ಬೇರೆಯವರಿಗೆ ಖರ್ಚು ಮಾಡಲಾಗುತ್ತಿದೆ. ಆದರೂ ಈ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ? ಎಂದು ಕಿಡಿಕಾರಿದ ಅವರು, ದಲಿತರಿಗೆ ಗುತ್ತಿಗೆ ಮೀಸಲಾತಿ ತಂದಿದ್ದು ನಾನು. ದಲಿತರಿಗೆ, ಶೋಷಿತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದು ಜನ ವಿರೋಧಿ ಆಡಳಿತದ ವಿರುದ್ಧ ಪ್ರತಿಯೊಬ್ಬರು ಹೋರಾಡಬೇಕು’ ಎಂದು ಕರೆ ನೀಡಿದರು.

ಶಿಕ್ಷಣಕ್ಕೆ ಆದ್ಯತೆ ಕೊಡಿ:

ಅಸ್ಪೃಶ್ಯತೆ ಸಂವಿಧಾನ ಬಾಹಿರವಾಗಿದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಇನ್ನು ಜೀವಂತವಾಗಿಟ್ಟಿವೆ. ಶೋಷಿತರು ಇದರ ವಿರುದ್ಧ ಹೋರಾಡಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾಗುವ ಮೂಲಕ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಬೇಕು. ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಪ್ರಾಮುಖ್ಯತೆ ನೀಡಬೇಕು ಎಂದರು.

ವಿಶ್ರಾಂತ ನ್ಯಾ.ಎಚ್‌.ಎನ್‌. ನಾಗಮೋಹನ್‌ದಾಸ್‌ ಮಾತನಾಡಿ, ‘ಭಾರತ ಸಂವಿಧಾನ ಗಂಡಾಂತರದಲ್ಲಿದೆ. ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ಕೋಮುವಾದಕ್ಕೆ ರಾಜ್ಯವನ್ನು ಪ್ರಯೋಗ ಶಾಲೆಯನ್ನಾಗಿ ಬಳಕೆ ಮಾಡಲಾಗುತ್ತಿದೆ. ಅನೇಕತೆಯಲ್ಲಿ ಏಕತೆ ಸಾರುವ, ಪ್ರತಿಯೊಬ್ಬರೂ ಶಾಂತಿ, ನೆಮ್ಮದಿಯಿಂದ ಬಾಳ್ವೆ ನಡೆಸಲು ಅನುವು ಮಾಡಿಕೊಟ್ಟು, ತಮಗಿಷ್ಟವಾದ ಧರ್ಮ ಪಾಲಿಸುವಂತೆ ಅವಕಾಶ ಕೊಟ್ಟಿರುವ ನಮ್ಮ ಸಂವಿಧಾನ ಉಳಿಸಬೇಕಿದೆ. ಆ ನಿಟ್ಟಿನಲ್ಲಿ ಅತ್ಯಂತ ಎಚ್ಚರಿಕೆಯಿಂದ ಮುನ್ನುಗ್ಗಬೇಕಿದ್ದು ಆ ಮೂಲಕ ಅಂಬೇಡ್ಕರ್‌ ಜಯಂತಿಗೆ ಅರ್ಥಕಲ್ಪಿಸಿ ಕೊಡಬೇಕು’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್‌. ಆಂಜನೇಯ, ಶಾಸಕ ರಿಜ್ವಾನ್‌ ಅರ್ಷದ್‌, ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ಗುರುಮೂರ್ತಿ, ಮುಂಡರಗಿ ನಾಗರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.