ಉಪ್ಪಿನಂಗಡಿ(ಜ.12): ಕನ್ನಡ ಮತ್ತು ಕರ್ನಾಟಕ ಇವೆರಡು ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುತ್ತವೆ. ಈ ನೆಲದ ಗುಣವೇ ಅಂತದ್ದು. ಇಲ್ಲಿ ಹುಟ್ಟುವ ಪ್ರತಿಯೊಬ್ಬರೂ ದೇಶ ಮತ್ತು ವಿದೇಶವನ್ನು ತಮ್ಮ ವಿದ್ವತ್ತಿನಿಂದ ಸೆಳೆಯಬಲ್ಲ ಶಕ್ತಿ ಇರುವವರು.

ಇನ್ನು ಕನ್ನಡದ ಮಕ್ಕಳೆಂದರೆ ಕೇಳಬೇಕೆ?. ಕನ್ನಡಾಂಬೆಯ ಆರ್ಶೀವಾದದಿಂದ ಕರುಣಾಡಿನ ಕೀರ್ತಿ ಪತಾಕೆಯನ್ನು ದೇಶ, ವಿದೇಶಗಳಲ್ಲಿ ರಾರಾಜಿಸುವಂತೆ ಮಾಡುತ್ತವೆ ಈ ಪುಟಾಣಿಗಳು. 

ಅದರಂತೆ ಕೇಂದ್ರ ಸರ್ಕಾರದ ಸಂಸ್ಕೃತಿ‌ ಸಚಿವಾಲಯ ಮತ್ತು ನ್ಯಾಶನಲ್ ಕೌನ್ಸಿಲ್ ಫಾರ್ ಸೈನ್ಸ್ ‌ಮ್ಯೂಸಿಯಂ‌ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವದಲ್ಲಿ ಕರುನಾಡಿನ ಮಕ್ಕಳು ಮಿಂಚಿದ್ದಾರೆ.

ಕರ್ನಾಟಕದ ದ.ಕ. ಜಿಲ್ಲೆಯ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು "ಕನಸ ಕಂಗಳು" ನಾಟಕವನ್ನು ಪ್ರಸ್ತುತ ಪಡಿಸಿ ಪ್ರಶಸ್ತಿ ಪಡೆದಿದ್ದಾರೆ.

28 ನಿಮಿಷದ ಈ ನಾಟಕದಲ್ಲಿ ಎಂಟು ಮಕ್ಕಳು ಪಾತ್ರಧಾರಿಗಳಿದ್ದು, ಸ್ವಚ್ಛತೆಯ ಸಂದೇಶ ನಾಟಕದ ತಿರುಳಾಗಿತ್ತು. ಮನಸ್ಸಿನ, ದೇಹದ, ಪರಿಸರದ‌ ಕೊಳಕು ನಿವಾರಿಸಿ ಮನಸ್ಸು, ದೇಹ, ಪರಿಸರವನ್ನು ಶುದ್ಧಗೊಳಿಸುವ ಸಂದೇಶದ ಕಥಾವಸ್ತುವನ್ನು ಈ  ನಾಟಕ ನಿರೂಪಿಸುತ್ತದೆ.

ತಂಡದಲ್ಲಿ ತನ್ವೀ ಜಿ.ಕೆ, ಶಿವಾನಿ, ವರ್ಷಿಣಿ‌ ರೈ, ಶರಣ್ಯ ನಾಯಕ್, ಲಿಪಿ ಗೌಡ, ಅನ್ವಿತಾ, ಸಮರ್ಥ ಮೂಡಾಜೆ ಮತ್ತು ಅನುಪಮ್ ಎಂಬ ವಿದ್ಯಾರ್ಥಿಗಳಿದ್ದು, ಮಕ್ಕಳ ಅಭಿನಯ ಮತ್ತು ನಾಟಕದ ಸಂದೇಶವನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡರು.