ವಿಳಂಬವಾಗಿ ಸಾಗಿರುವ ಡೈರಿ ಸರ್ಕಲ್-ಕಾಳೇನ ಅಗ್ರಹಾರದವರೆಗಿನ ಮೆಟ್ರೋ ಮಾರ್ಗ, ನಿಲ್ದಾಣಗಳ ಸಿವಿಲ್ ಕಾಮಗಾರಿಯು ಇಲ್ಲಿನ ರಸ್ತೆ ಸಂಚಾರ ಸವಾರರನ್ನು ಹೈರಾಣಾಗಿಸುತ್ತಿದೆ.
ಬೆಂಗಳೂರು (ಜು.3): ವಿಳಂಬವಾಗಿ ಸಾಗಿರುವ ಡೈರಿ ಸರ್ಕಲ್-ಕಾಳೇನ ಅಗ್ರಹಾರದವರೆಗಿನ ಮೆಟ್ರೋ ಮಾರ್ಗ, ನಿಲ್ದಾಣಗಳ ಸಿವಿಲ್ ಕಾಮಗಾರಿಯು ಇಲ್ಲಿನ ರಸ್ತೆ ಸಂಚಾರ ಸವಾರರನ್ನು ಹೈರಾಣಾಗಿಸುತ್ತಿದೆ.
ಗುಲಾಬಿ ಮಾರ್ಗದ ಮೆಟ್ರೋ ಇದಾಗಿದ್ದು, ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ 13.9 ಕಿ.ಮೀ. ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇನ್ನೊಂದು ಕಡೆ ಡೈರಿ ಸರ್ಕಲ್‌ನಿಂದ ಕಾಳೇನ ಅಗ್ರಹಾರದವರೆಗೆ ಎತ್ತರಿಸಿದ ಮಾರ್ಗದ ಕಾಮಗಾರಿ ಸಾಗಿದೆ. ಈ ಭಾಗದ ಕೆಲಸ ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದು, ಕೋವಿಡ್, ಗುತ್ತಿಗಾ ಸಂಸ್ಥೆ ಬದಲು, ಕಾರ್ಮಿಕರ ಅಭಾವದಿಂದ ಕಾಮಗಾರಿ ವಿಳಂಬವಾಗಿದೆ.
Namma metro: ವರ್ಷಾಂತ್ಯಕ್ಕೆ ಯೆಲ್ಲೋ ಮೆಟ್ರೋ ಶುರು?
ಇದು ಸ್ಥಳೀಯರು ರೋಸಿ ಹೋಗುವಂತೆ ಮಾಡಿದೆ. ನಿರಂತರ ಜನಸಂಚಾರದ ಬನ್ನೇರುಘಟ್ಟರಸ್ತೆಯ ಉದ್ದಕ್ಕೂ ಕಾಮಗಾರಿ ನಡೆಯುತ್ತಿರುವ ಕಾರಣ ಇಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸುಮಾರು 7.5 ಕಿ.ಮೀ. ಅಂತರದಲ್ಲಿ ಡೈರಿ ಸರ್ಕಲ್, ತಾವರೆಕೆರೆ, ಜಯದೇವ ಹಾಸ್ಪಿಟಲ್, ಜೆ.ಪಿ.ನಗರ ನಾಲ್ಕನೇ ಹಂತ, ಐಐಎಂ ಬೆಂಗಳೂರು, ಹುಳಿಮಾವು ಹಾಗೂ ಕಾಳೇನ ಅಗ್ರಹಾರ ಸೇರಿ ಏಳು ಮೆಟ್ರೋ ನಿಲ್ದಾಣಗಳು ಬರುತ್ತವೆ.
ಈ ಜಂಕ್ಷನ್‌ಗಳ ಕೆಳಭಾಗ ಹಾಗೂ ಪಕ್ಕದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗುತ್ತಿದೆ. ವೀಕೆಂಡ್‌ನಲ್ಲಿಯೂ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಕಳೆದ ಐದು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಸುಗಮ ಸಂಚಾರಕ್ಕೆ ಅಗತ್ಯ ಕಾರ್ಯವನ್ನು ಬಿಎಂಆರ್‌ಸಿಎಲ್ ಕೈಗೊಂಡಿಲ್ಲ ಎಂದು ಜನತೆ ದೂರುತ್ತಿದ್ದಾರೆ.
ಗುತ್ತಿಗೆ ಸಂಸ್ಥೆ ಬದಲು
2017ರ ಸೆಪ್ಟೆಂಬರ್‌ನಲ್ಲಿಯೇ ಡೈರಿ ಸರ್ಕಲ್‌ನಿಂದ ಕಾಳೇನ ಅಗ್ರಹಾರದವರೆಗಿನ ಗುಲಾಬಿ ಮಾರ್ಗ ನಿರ್ಮಾಣಕ್ಕಾಗಿ ಕೊಲ್ಕತ್ತಾ ಮೂಲದ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ಸ್ ಸಂಸ್ಥೆ .579 ಕೋಟಿ ಮೊತ್ತದ ಗುತ್ತಿಗೆ ಪಡೆದಿತ್ತು. ವಿಳಂಬವಾಗಿ ಕಾಮಗಾರಿ ಆರಂಭಿಸಿದ್ದು, ಕೋವಿಡ್ ಕಾರಣದಿಂದ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಮುಟ್ಟಿರಲಿಲ್ಲ. ಹೀಗಾಗಿ ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳು ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು 2021ರ ಜನವರಿಯಲ್ಲಿ ರದ್ದುಗೊಳಿಸಿದರು. ಬಳಿಕ ಆಗಸ್ಟ್‌ನಲ್ಲಿ ದಯಪುರ ಮೂಲದ ಜಿಆರ್ ಇನ್ಫ್ರಾಪ್ರಾಜೆಕ್ಟ್ ಲಿಮಿಟೆಡ್‌ಗೆ ಬಾಕಿ ಉಳಿದಿರುವ ಕಾಮಗಾರಿಯ ಗುತ್ತಿಗೆ ನೀಡಿತ್ತು.
Bengaluru: ಮೆಟ್ರೋದೊಳಗೆ ಲೌಡ್ ಸ್ಪೀಕರ್ ಸಂಗೀತ ನಿಷೇಧ: ಬಿಎಂಆರ್‌ಸಿಎಲ್ ಸೂಚನೆ
ಅದಾದ ಬಳಿಕ ಬಿಎಂಆರ್‌ಸಿಎಲ್‌ಗೆ ಕಾರ್ಮಿಕರ ಕೊರತೆ ಸಮಸ್ಯೆ ಕಾಡಿದೆ. ಇದರಿಂದಾಗಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಳೆದೆರಡು ವರ್ಷದಲ್ಲಿ ಈ ಮಾರ್ಗದ ಶೇ.70ಕ್ಕೂ ಹೆಚ್ಚಿನ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ತಗುಲಬಹುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಒಟ್ಟಾರೆ ಗುಲಾಬಿ ಮಾರ್ಗ 2024ಕ್ಕೆ ಮುಗಿಯಲಿದೆ ಎಂದು ಬಿಎಂಆರ್‌ಸಿಲ್ ತಿಳಿಸಿದೆ.
