ಬೆಂಗಳೂರು (ನ. 24): ಬಂಗಾಳ ಕೊಲ್ಲಿಯಲ್ಲಿ ‘ನಿವಾರ್‌’ ಚಂಡಮಾರುತ ಎದ್ದಿರುವ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಎಂಟು ಜಿಲ್ಲೆಗಳಿಗೆ ನ.25 ಮತ್ತು ನ.26ರಂದು ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಆದರೆ ಇದೇ ವೇಳೆ ಅರಬ್ಬಿ ಸಮುದ್ರದಲ್ಲಿ ಏಳುವ ‘ಗತಿ ಚಂಡಮಾರುತದಿಂದ ಯಾವುದೇ ತೊಂದರೆ ಇಲ್ಲ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಕಳೆದ ಮೂರು ದಿನದ ಹಿಂದೆ ಬಂಗಾಳಕೊಲ್ಲಿಯ ನೈಋುತ್ಯ ಭಾಗದಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ನ.24ರಂದು ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಇದಕ್ಕೆ ‘ನಿವಾರ್‌’ ಚಂಡಮಾರುತ ಎಂದು ಹೆಸರಿಡಲಾಗಿದೆ.

ಈ ನಿವಾರ್‌ ತನ್ನ ಮೂಲ ಸ್ಥಳದಿಂದ ಪೂರ್ವ ದಿಕ್ಕಿನೆಡೆಗೆ ಸಾಗಿ ತಮಿಳುನಾಡು ಪ್ರವೇಶಿಸಲಿದೆ. ಅಲ್ಲಿಂದ ಪುದುಚೇರಿ ಕರಾವಳಿ ಮಾರ್ಗವಾಗಿ ನ. 25ರಂದು ಹಾದು ಹೋಗುತ್ತದೆ. ಈ ಚಂಡಮಾರುತದ ಗಾಳಿ ಹಾದು ಹೋಗುವ ಪ್ರದೇಶಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಭಾರತದ ಮೇಲೆ ಅವಳಿ ಚಂಡಮಾರುತ ದಾಳಿ, 4 ರಾಜ್ಯಗಳಲ್ಲಿ ಮಳೆಯ ಮುನ್ನಚ್ಚರಿಕೆ

ಯೆಲ್ಲೋ ಅಲರ್ಟ್‌ ಎಚ್ಚರಿಕೆ:

ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ತುಮಕೂರು ಮತ್ತು ರಾಮನಗರ ಸೇರಿ ಎಂಟು ಜಿಲ್ಲೆಗಳಿಗೆ ನ. 25 ಮತ್ತು 26ರಂದು ಭಾರಿ ಮಳೆ ಕಾರಣಕ್ಕೆ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಈ ಮಳೆ ನಿರೀಕ್ಷಿತ ಪ್ರದೇಶಗಳಲ್ಲಿ ಸುಮಾರು 7-11 ಸೆಂ.ಮೀ.ವರೆಗೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.

ಉಳಿದಂತೆ ನ.25ರಿಂದ 27ರವರೆಗೆ ಕರಾವಳಿಯ ಉಡುಪಿ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಹಾಗೂ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ.