Asianet Suvarna News Asianet Suvarna News

ನಿರಂತರ ಮಳೆಯಿಂದ ಹಲವು ಬೆಳೆ ನಾಶ: ಕಂಗಾಲಾದ ರೈತರು

*  ತೊಗರಿ ಹೂವು ಉದುರಿ ಸಂಕಷ್ಟ
*  ಭತ್ತ, ರಾಗಿ, ಹತ್ತಿಗೆ ಜಮೀನಿನಲ್ಲೇ ಕೊಳೆಯುವ ದುಸ್ಥಿತಿ
*  ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ರಸ್ತೆ ಮತ್ತೆ ಕುಸಿತ

Crop Loss Due to Continuous Rain in Karnataka grg
Author
Bengaluru, First Published Nov 19, 2021, 6:34 AM IST

ಬೆಂಗಳೂರು(ನ.19):  ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ(Rain) ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ರಾಜ್ಯದಲ್ಲಿ(Karnataka) ಮಳೆಯ ಹೊಡೆತಕ್ಕೆ ಅನ್ನದಾತ(Farmers) ತತ್ತರಿಸಿ ಹೋಗಿದ್ದಾನೆ. ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ಬೆಳೆಯು ರೈತನ ಕೈ ಸೇರುತ್ತದೆ. ಆದರೆ ಈ ಬಾರಿ ಮಳೆಯಿಂದಾಗಿ ಬೆಳೆಗಳು ಜಮೀನಿನಲ್ಲಿಯೇ ಹಾಳಾಗುತ್ತಿವೆ. ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ ಬೆಳೆಗಳು ಮಳೆಯ ನೀರಿನಲ್ಲಿ ಸಿಲುಕಿ ನಾಶವಾಗಿದೆ. ಇನ್ನು ಅಡಕೆ, ಕಾಫಿ ಬೆಳೆಯು ಕೊಳೆ ರೋಗಕ್ಕೆ ತುತ್ತಾಗಿವೆ. ಗದಗ, ಯಾದಗಿರಿ, ಬಾಗಲಕೋಟೆಯಲ್ಲಿ ಬೆಳೆಗೆ ಹಾನಿಯಾಗಿಲ್ಲ.

ಉದುರಿದ ತೊಗರಿ ಹೂವು

ಕಲಬುರಗಿ(Kalaburagi) ಜಿಲ್ಲೆಯಲ್ಲಿ ತೊಗರಿ ಬೆಳೆ(Crop) ಪ್ರಮುಖವಾಗಿದ್ದು, ಜಿಟಿಜಿಟಿ ಮಳೆ ಹಾಗೂ ಮುಸುಕಿನ ಮಂಜಿನಿಂದ ತೊಗರಿ ಬೆಳೆಗಳ ಹೂವು ಮತ್ತು ಮೊಗ್ಗು ಉದುರಿ ಹೋಗಿದೆ. ಬೆಳೆಗೆ ತುಂಬ ಹಾನಿಯಾಗುವ ಭೀತಿ ಎದುರಾಗಿದೆ. ಈಗಾಗಲೇ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಗೆ ಹಾನಿಯಾಗಿದೆ.

Karnataka Rain:ಮಳೆಗೆ ತತ್ತರಿಸಿದ ದಕ್ಷಿಣ ಕರ್ನಾಟಕ, ಬೆಂಗಳೂರು ಸೇರಿ 5 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ!

ರಾಗಿ, ಭತ್ತ, ಹತ್ತಿ ನಾಶ

ಪ್ರಮುಖ ಆಹಾರ ಬೆಳೆಯಾದ ಭತ್ತ(Paddy) ಬೆಳೆಗೆ ಅಕಾಲಿಕ ಮಳೆಯು ಹಾನಿ ಮಾಡಿದೆ. ರಾಯಚೂರು(Raichur) ಜಿಲ್ಲೆಯಲ್ಲಿ 700 ಹೆಕ್ಟೇರ್‌, ದಾವಣಗೆರೆಯಲ್ಲಿ(Davanagere) 1122 ಹೆಕ್ಟೇರ್‌ನಲ್ಲಿ ಕ್ರಮವಾಗಿ ಮೆಕ್ಕೆಜೋಳ ಹಾಗೂ ಹತ್ತಿ, ಚಿತ್ರದುರ್ಗ ಜಿಲ್ಲೆಯ 2.60 ಲಕ್ಷ ಹೆಕ್ಟೇರ್‌ನಲ್ಲಿ ಶೇಂಗಾ ಕೊಳೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 1147 ಎಕರೆ ಭತ್ತ, ಮೆಕ್ಕೆಜೋಳ ಇತರೆ ಬೆಳೆ ನಾಶವಾಗಿದೆ. ಶಿವಮೊಗ್ಗ 74 ಹೆಕ್ಟೇರ್‌ ಭತ್ತ, 14 ಹೆಕ್ಟೇರ್‌ ಮೆಕ್ಕೆಜೋಳ ಮತ್ತು 2 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, ಕೋಲಾರ(Kolar)ಜಿಲ್ಲೆಯಲ್ಲಿ 35 ಸಾವಿರ ಎಕರೆ ರಾಗಿ ಬೆಳೆ ಹಾನಿಯಾಗಿದೆ. ಬಳ್ಳಾರಿಯಲ್ಲಿ 1685, ವಿಜಯನಗರ ಜಿಲ್ಲೆಯಲ್ಲಿ 68 ಹೆಕ್ಟೇರ್‌ನಲ್ಲಿದ್ದ ಭತ್ತ, ಮೆಕ್ಕೆ ಜೋಳ ನಾಶವಾಗಿದೆ. ಚಾಮರಾಜನಗರ ಜಿಲ್ಲೆಯ 1500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, ಮೆಕ್ಕೆಜೋಳ, ಕಡಲೆ ನಾಶವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 73 ಹೆಕ್ಟೇರ್‌ ಭತ್ತ, ಅಡಕೆ ಮತ್ತು ತೆಂಗು ಸೇರಿ ಒಟ್ಟು 223.12 ಹೆಕ್ಟೇರ್‌, ಉಡುಪಿ ಜಿಲ್ಲೆಯಲ್ಲಿ 35,700 ಹೆಕ್ಟೇರ್‌, ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ ಭತ್ತ 1 ಸಾವಿರ ಹೆಕ್ಟೇರ್‌, ಹಾವೇರಿ ಜಿಲ್ಲೆಯಲ್ಲಿ 10509 ಹೆಕ್ಟೇರ್‌ನಲ್ಲಿ ಮಳೆಗೆ ಭತ್ತ, ಹತ್ತಿ, ಮೆಣಸಿನಕಾಯಿ ನಾಶವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 2177, ಧಾರವಾಡ(Dharwad) ಜಿಲ್ಲೆಯಲ್ಲಿ 7500 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಕಾಫಿ, ಅಡಕೆಗೆ ಹಾನಿ

ಚಿಕ್ಕಮಗಳೂರು-ಕೊಡಗು, ಹಾಸನ ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿ, ಕಾಳು ಮೆಣಸು, ಅಡಕೆ ಹಾಗೂ ಭತ್ತದ ಬೆಳೆಗೆ ಹಾನಿ ಸಂಭವಿಸಿದೆ. ಕಾಫಿಯ ಹಣ್ಣುಗಳು ನೆಲಕ್ಕೆ ಉದುರಿದ್ದು, ಶೇ.50ರಷ್ಟು ಹಾನಿಯಾಗಿದ್ದರೆ, ಮೆಣಸು ಬೆಳೆಗೆ ಶೇ.30ರಷ್ಟುನಷ್ಟವಾಗಿದೆ. ಮೈಸೂರು ಜಿಲ್ಲೆಯಲ್ಲಿ ಮಳೆ ಹಾನಿಯ ಸಮೀಕ್ಷೆಗೆ(Survey) ಮಳೆಯೇ ಅಡ್ಡಿಯಾಗಿದೆ. ಇಷ್ಟೇ ಅಲ್ಲದೆ ಮೆಣಸಿನ ಕಾಯಿ, ನೂರಾರು ಎಕರೆಯಲ್ಲಿ ಬೆಳೆದ ಕಾಯಿಪಲ್ಲೆ, ತೋಟಗಾರಿಕೆ ಬೆಳೆಗಳು ಮಳೆಯಿಂದ ನಷ್ಟವಾಗಿದೆ. ಪಪ್ಪಾಯ ಬೆಳೆಯು ನಷ್ಟವಾಗಿದೆ.

ಕೋಲಾರ ಜಿಲ್ಲೆಯಲ್ಲಿ ಶಾಲೆಯ ಕಟ್ಟಡ, ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ರಸ್ತೆ ಮತ್ತೆ ಕುಸಿದಿದೆ(Landslide), ಅಲ್ಲದೆ ಹಳೆಯ ಕಟ್ಟಡ ನೆಲಕ್ಕುರುಳಿದೆ. ರಾಮನಗರ ಜಿಲ್ಲೆಯಲ್ಲಿ ಸೇತುವೆ(Bridge) ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಹೆಚ್ಚಾಗಿರುವುದರಿಂದ ಕೆಆರ್‌ಎಸ್‌ ಅಣೆಕಟ್ಟೆಗೆ(KRS Dam) ಒಳ ಹರಿವು ಹೆಚ್ಚಿದೆ. ಈಗಾಗಲೇ ತುಂಬಿರುವ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಕೋಡಿ ಬಿದ್ದ ಕೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನೋರ್ವನನ್ನು ಬೈಕ್‌ ಸಹಿತ ಗ್ರಾಮಸ್ಥರು ರಕ್ಷಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿವೆ, ರಸ್ತೆಗಳು ಕೊಚ್ಚಿ ಹೋಗಿವೆ. ಇನ್ನು ಹಲವು ನಗರಗಳಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.
 

Follow Us:
Download App:
  • android
  • ios