ಸಂಪತ್‌ ತರೀಕೆರೆ

ಬೆಂಗಳೂರು(ನ.06): ಪಡಿತರ ಆಹಾರ ಧಾನ್ಯ ಅಕ್ರಮದಲ್ಲಿ ಭಾಗಿಯಾಗುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಪಡಿತರ ಆಹಾರ ಧಾನ್ಯ ಅಕ್ರಮ ದಾಸ್ತಾನು, ಪಡಿತರ ಹಂಚಿಕೆಯಲ್ಲಿ ಅಕ್ರಮ, ಧವಸ ಧಾನ್ಯಗಳ ದುರ್ಬಳಕೆ ಸೇರಿದಂತೆ ಇನ್ನಿತರ ಕಾರಣಕ್ಕೆ ದಂಡ ವಿಧಿಸಿ ಇಲ್ಲವೇ ತಾತ್ಕಾಲಿಕವಾಗಿ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು ಮಾಡುವಂತ ಸಾಧಾರಣ ಶಿಕ್ಷೆಯನ್ನಷ್ಟೇ ಅಂಗಡಿ ಮಾಲಿಕರಿಗೆ ವಿಧಿಸಲಾಗುತ್ತಿತ್ತು. ಇದರಿಂದ ಕೆಲ ಮಾಲಿಕರು ತಮ್ಮ ಹಳೆಯ ಚಾಳಿ ಮುಂದುವರೆಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದು, ಹೀಗಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಆರು ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಾದ ಆಹಾರ ಧಾನ್ಯ ದುರ್ಬಳಕೆ, ಹಣ ವಸೂಲಿ ಸೇರಿದಂತೆ ಇನ್ನಿತರ ಕಾರಣಕ್ಕಾಗಿ ಸುಮಾರು 200ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಂತ್ಯೋದಮ ಮತ್ತು ಬಿಪಿಎಲ್‌ ಕಾರ್ಡುದಾರರಿಂದ ಆಹಾರ ಧಾನ್ಯ ಹಂಚಿಕೆ ಮಾಡಲು ತಲಾ 10ರಿಂದ 20 ರು. ವಸೂಲಿ ಮಾಡುವುದು, ಪಡಿತರ ಚೀಟಿದಾರರಿಗೆ ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ತೂಕದ ಧಾನ್ಯ ವಿತರಣೆ, ಆಹಾರ ಧಾನ್ಯದ ವಿತರಣೆ ಜತೆಗೆ ಸೋಪು, ಬೇಳೆ, ಎಣ್ಣೆ ಸೇರಿದಂತೆ ಇತರೆ ವಸ್ತುಗಳನ್ನು ತಂದು ನ್ಯಾಯಬೆಲೆ ಅಂಗಡಿಯಲ್ಲಿ ಮಾರಾಟ ಮಾಡುವುದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೇ ಅನುಚಿತವಾಗಿ ನಡೆದುಕೊಳ್ಳುವುದು ಮತ್ತು ಪಡಿತರ ವಿತರಣೆಗೆಂದು ಸರಬರಾಜು ಮಾಡಿದ ಆಹಾರಧಾನ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಸೇರಿದಂತೆ ಇತರೆ ಪ್ರಕರಣಗಳು ನ್ಯಾಯಬೆಲೆ ಅಂಗಡಿ ಮಾಲಿಕರ ವಿರುದ್ಧ ದಾಖಲಾಗಿವೆ.
ಆದರೆ, ಗಂಭೀರ ಶಿಕ್ಷೆಯಿಲ್ಲದ ಕಾರಣ ನ್ಯಾಯಬೆಲೆ ಅಂಗಡಿ ಮಾಲೀಕರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಚಾಳಿ ಮುಂದುವರೆಸಿದ್ದಾರೆ. ಹೀಗಾಗಿ ಜೈಲುವಾಸ ದೊರೆಯುವಂತಹ ಕಠಿಣ ಶಿಕ್ಷೆಯಾಗಬೇಕು ಎಂದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತಾಗಬೇಕು. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

ಗದಗಿನಲ್ಲಿ ಮತ್ತೆ ಗರಿಗೆದರಿದ ಅಕ್ರಮ ಪಡಿತರ ಅಕ್ಕಿ ದಂಧೆ!

ಜಿಲ್ಲಾವಾರು ಪ್ರಕರಣ:

ಆಹಾರ ಇಲಾಖೆ ವರದಿಯಂತೆ ಸೆಪ್ಟೆಂಬರ್‌ವರೆಗೆ ಹಾಸನ, ಚಿಕ್ಕಬಳ್ಳಾಪುರ ತಲಾ 15, ಚಿತ್ರದುರ್ಗ, ಬೆಂಗಳೂರು, ಬೆಳಗಾವಿ, ಧಾರವಾಡ ತಲಾ 12, ಮಂಡ್ಯ 10, ದಾವಣಗೆರೆ, ರಾಮನಗರ, ಮೈಸೂರು ತಲಾ 8, ವಿಜಯಪುರ, ಕಲಬುರಗಿ ತಲಾ 7, ಶಿವಮೊಗ್ಗ 6, ಚಾಮರಾಜನಗರ, ರಾಯಚೂರು, ಯಾದಗಿರಿ, ಬೆಂಗಳೂರು ಪಶ್ಚಿಮ, ಚಿಕ್ಕಮಗಳೂರು ತಲಾ 5, ಬೆಂಗಳೂರು ದಕ್ಷಿಣ, ಬಳ್ಳಾರಿ, ಬಾಗಲಕೋಟೆ ತಲಾ 4, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ತುಮಕೂರು, ಬೆಂಗಳೂರು ಪೂರ್ವ ವಲಯ, ಬೀದರ್‌, ಬೆಂಗಳೂರು ಉತ್ತರ ತಲಾ 2, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ತಲಾ 1 ಹೀಗೆ 187 ನ್ಯಾಯಬೆಲೆ ಅಂಗಡಿಗಳ ವಿರುದ್ಧ ಪ್ರಕರಣ ಸೇರಿದಂತೆ ಈವರೆಗೂ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ 10,93,427 ಅಂತ್ಯೋದಯ, 1,16,81,949 ಬಿಪಿಎಲ್‌ ಕಾರ್ಡ್‌ ಹಾಗೂ 20,86663 ಎಪಿಎಲ… ಕಾರ್ಡ್‌ ಸೇರಿ ಒಟ್ಟು 1,48,620,39 ಪಡಿತರ ಕಾರ್ಡ್‌ಗಳಿವೆ. ಪ್ರತಿ ತಿಂಗಳು ರಾಜ್ಯಾದ್ಯಂತ 19,965 ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯ ವಿತರಿಸಲಾಗುತ್ತಿದೆ.

ಸಣ್ಣಪುಟ್ಟ ಅಕ್ರಮ ನಡೆಸಿದರೆ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ದೊಡ್ಡ ಪ್ರಮಾಣದ ಪ್ರಕರಣವಾಗಿದ್ದರೆ ಪರವಾನಗಿ ಅಮಾನತು ಮಾಡಲಾಗುತ್ತದೆ. ಕೆಲವು ಪ್ರಕರಣಗಳು ಫುಡ್‌ ಇನ್ಸ್‌ಪೆಕ್ಟರ್‌, ತಹಶೀಲ್ದಾರ್‌, ಪೊಲೀಸ್‌ ಅಥವಾ ಜಿಲ್ಲಾಧಿಕಾರಿ ಮಟ್ಟದಿಂದ ತನಿಖೆಗೊಳಪಟ್ಟು ಇಲಾಖೆಗೆ ಬರುವಷ್ಟರಲ್ಲಿ ಐದಾರು ತಿಂಗಳೇ ಕಳೆದುಹೋಗುತ್ತವೆ. ಈ ಬಗ್ಗೆ ಇಲಾಖೆ ಗಂಭೀರ ಕ್ರಮ ಕೈಗೊಳ್ಳುವ ಚಿಂತನೆ ನಡೆಸುತ್ತಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.