ಕೊರೋನಾ ಕಾರ್ಯನಿರತ ವೈದ್ಯರಿಗೆ ಇಲ್ಲಿದೆ ಗುಡ್ ನ್ಯೂಸ್. ಕೊರೋನಾ ವಾರಿಯರ್ಸ್ ಆಗಿರುವ ವೈದ್ಯರಿಗೆ ಕ್ರೆಡಿಟ್ ಪಾಯಿಂಟ್ಸ್ಗಳು ಸಿಗಲಿವೆ.
ವರದಿ : ಲಿಂಗರಾಜು ಕೋರಾ
ಬೆಂಗಳೂರು (ಆ.27): ಕೊರೋನಾ ನಿಯಂತ್ರಣ ಹಾಗೂ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ನೋಂದಾಯಿತ ವೈದ್ಯರಿಗೂ ಈ ಬಾರಿ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ (ಕೆಎಂಸಿ) ತಮ್ಮ ವೃತ್ತಿ ಪರವಾನಗಿ ನವೀಕರಣಕ್ಕೆ ಸುಲಭವಾಗಿ 6 ಕ್ರೆಡಿಟ್ ಪಾಯಿಂಟ್‌ಗಳು ಸಿಗಲಿವೆ.
ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಕೋವಿಡ್ ಕಾರ್ಯದಲ್ಲಿ ತೊಡಗಿರುವ ವೈದ್ಯರಿಗೆ ಪರವಾನಗಿ ನವೀಕರಣಕ್ಕೆ ಅನುಕೂಲವಾಗುವಂತೆ ನಿರ್ದಿಷ್ಟಅಂಕ (ಕ್ರಿಡಿಟ್ ಪಾಯಿಂಟ್) ನೀಡಲು ಪರಿಗಣಿಸಬೇಕೆಂದು ಸರ್ಕಾರದ ಕೋವಿಡ್-19 ತಾಂತ್ರಿಕ ತಜ್ಞರ ಸಮಿತಿ ಕೆಎಂಸಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಪರಿಗಣಿಸುವಂತೆ ಕೋವಿಡ್-19 ಮಾರ್ಗಸೂಚಿ ಮತ್ತು ನಿಯಮಗಳು (ಎಸ್‌ಇಪಿ) ಕಾರ್ಯಪಡೆ ಅಧ್ಯಕ್ಷರೂ ಆದ ಆರ್‌ಜಿಯುಎಚ್‌ಎಸ್ ಕುಲಪತಿ ಡಾ.ಸಚ್ಚಿದಾನಂದ ಅವರು ಕೆಎಂಸಿಗೆ ಪತ್ರ ಬರೆದಿದ್ದರು.
ಇದಕ್ಕೆ ಸಮ್ಮತಿಸಿ ಗರಿಷ್ಠ 6 ಹಾಗೂ ಅದಕ್ಕೂ ಹೆಚ್ಚು ದಿನ ಕೋವಿಡ್ ಕಾರ್ಯ ಸಲ್ಲಿಸಿದವರಿಗೆ ಕನಿಷ್ಠ ಒಂದು ದಿನಕ್ಕೆ ಒಂದು ಅಂಕದಂತೆ ಆರು ದಿನಕ್ಕೆ ಗರಿಷ್ಠ 6 ಅಂಕ ನೀಡುವುದಾಗಿ ಕೆಎಂಸಿ ಇದೀಗ ಸುತ್ತೋಲೆ ಹೊರಡಿಸಿದೆ.
ಕೆಎಂಸಿ ರಿಜಿಸ್ಟ್ರಾರ್ ಡಾ.ಬಿ.ಪಿ. ಮೂರ್ತಿ ಅವರು ಹೊರಡಿಸಿರುವ ಸುತ್ತೋಲೆ ಲಭ್ಯವಾಗಿದ್ದು, ಯಾವುದೇ ಸರ್ಕಾರಿ, ಖಾಸಗಿ ಕೋವಿಡ್ ಆಸ್ಪತ್ರೆ, ಫೀವರ್ ಕ್ಲಿನಿಕ್, ಸಂಚಾರಿ ಫೀವರ್ ಕ್ಲಿನಿಕ್, ಸುರಕ್ಷಾ ಕ್ಲಿನಿಕ್‌ಗಳಲ್ಲಿ ಕೋವಿಡ್ ನಿಯಂತ್ರಣ ಅಥವಾ ಚಿಕಿತ್ಸಾ ಕಾರ್ಯ ನಿರ್ವಹಿಸಿದ ಎಲ್ಲ ವೈದ್ಯರೂ ಕ್ರೆಡಿಟ್ ಪಾಯಿಂಟ್ಸ್‌ಗೆ ಅರ್ಹರಾಗುತ್ತಾರೆ. ಈ ಅಂಕಗಳನ್ನು ಪಡೆಯಲು ವೈದ್ಯರು ತಾವು ಕೋವಿಡ್ ಕಾರ್ಯದಲ್ಲಿ ತೊಡಗಿದ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿ/ಡೀನ್/ಆರೋಗ್ಯ ಅಧಿಕಾರಿ ಅಥವಾ ಸಿವಿಲ್ ಸರ್ಜನ್ ಅವರಿಂದ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ನವೀಕರಣಕ್ಕೆ 30 ಅಂಕ ಬೇಕು:
ಕೆಎಂಸಿಯಡಿ ನೋಂದಾಯಿತ ವೈದ್ಯರು ಪ್ರತಿ ಐದು ವರ್ಷಕ್ಕೊಮ್ಮೆ ತಮ್ಮ ವೈದ್ಯ ವೃತ್ತಿ ಪರವಾನಗಿ ನವೀಕರಣಕ್ಕೆ ಸೆಮಿನಾರ್‌ಗಳು ಸೇರಿದಂತೆ ವೈದ್ಯಕೀಯ ಕ್ಷೇತ್ರದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಒಟ್ಟು 30 ಅಂಕಗಳನ್ನು ಗಳಿಸುವುದು ಕಡ್ಡಾಯ. ಪ್ರತಿ ವರ್ಷದ ವೃತ್ತಿ ತರಬೇತಿ ಹಾಗೂ ಪ್ರಾವೀಣ್ಯತೆ ಪರಿಗಣನೆಗೆ ಈ ಕ್ರೆಡಿಟ್ ಪಾಯಿಂಟ್‌ಗಳು ಅತಿ ಮುಖ್ಯ. ಆದರೆ, ವೃತ್ತಿ ಸೇವೆಯನ್ನು ಈ ಅಂಕಗಳಿಗಳಿಗೆ ಪರಿಗಣಿಸುವುದಿಲ್ಲ. ಆದರೆ, ಈ ಬಾರಿ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಪ್ರತಿಯೊಬ್ಬ ವೈದ್ಯರನ್ನೂ ತೊಡಗಿಸುವ ದೃಷ್ಟಿಯಿಂದ ಕೋವಿಡ್ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆಯನ್ನೂ ಅಂಕಗಳಿಗೆ ಪರಿಗಣಿಸಲು ಕೆಎಂಸಿ ತೀರ್ಮಾನಿಸಿದೆ. ಇದರಿಂದ 6 ಅಂಕಗಳು ಕೋವಿಡ್ ಕಾರ್ಯದಿಂದ ಸಿಗಲಿವೆ ಉಳಿದ 24 ಅಂಕಗಳನ್ನು ಪ್ರತಿ ವರ್ಷದಂತೆ ಕಾನ್ಫರೆನ್ಸ್‌ಗಳು, ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ (ಸಿಎಂಇ), ಆನ್‌ಲೈನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಗಳಿಸಬೇಕಾಗುತ್ತದೆ ಎನ್ನುತ್ತಾರೆ ಕೆಎಂಸಿ ಪದಾಧಿಕಾರಿಗಳು.
ಕೋವಿಡ್ ತಾಂತ್ರಿಕ ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಬರೆಯಲಾದ ಮನವಿ ಪತ್ರ ಪರಿಗಣಿಸಿದ ಕರ್ನಾಟಕ ವೈದ್ಯಕೀಯ ಮಂಡಳಿಯು ಕೋವಿಡ್ ಕಾರ್ಯವನ್ನೂ ವೈದ್ಯರಿಗೆ ನೀಡುವ ಕ್ರೆಡಿಟ್ ಪಾಯಿಂಟ್‌ಗೆ ಪರಿಗಣಿಸಲು ಸಮ್ಮತಿಸಿದೆ. ಕೋವಿಡ್ ಕಾರ್ಯದಲ್ಲಿ ಪ್ರತಿಯೊಬ್ಬ ವೈದ್ಯರೂ ಭಾಗಿಯಾಗಬೇಕೆಂಬುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಕೆಎಂಸಿಗೆ ಧನ್ಯವಾದ ತಿಳಿಸುತ್ತೇನೆ.
- ಡಾ.ಎಸ್.ಸಚ್ಚಿದಾನಂದ, ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ
