ಬೆಂಗಳೂರು :  ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನ ಆದೇಶದಂತೆ ರಾಜ್ಯ ಸರ್ಕಾರವು ರೂಪರೇಷೆಗಳನ್ನು ರೂಪಿಸಿ ಆದೇಶ ಹೊರಡಿಸಿದ್ದು, ನ.5ರಿಂದ ಮೂರು ದಿನಗಳ ಕಾಲ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಬೇಕು ಎಂದು ಸೂಚನೆ ನೀಡಿದೆ.

ದೀಪಾವಳಿ ಹಬ್ಬ ಆಚರಣೆ ವೇಳೆ ಪಟಾಕಿಗಳಿಂದಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಣಿ ಸ್ಫೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಕೆ ಮಾಡುವುದನ್ನು ನಿಷೇಧಿಸಿ ಆದೇಶಿಸಲಾಗಿದೆ. ಪರಿಸರ ಮಾಲಿನ್ಯ ಕುರಿತು ಜಾಗೃತಿ, ಪರಿಸರ ಮಾಲಿನ್ಯ ನಿಯಂತ್ರಣದ ಬಗ್ಗೆ ಎಚ್ಚರ ವಹಿಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಮೇಲೆ ನಿಗಾವಹಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮತ್ತು ಪಟಾಕಿಯಿಂದ ಸಂಭವಿಸಬಹುದಾದ ಅನಾಹುತ ಕುರಿತು ಜಾಗೃತಿ ಮೂಡಿಸಲು ವಾರ್ತಾ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಹೊಣೆಗಾರಿಕೆ ವಹಿಸಲಾಗಿದೆ. ವಾಯುಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನ ತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಫೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸ್ಫೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ಮತ್ತು ಅಧಿಕೃತವಾಗಿ ಪರವಾನಗಿ ಪಡೆದವರು ಸ್ಫೋಟಕ ಪಟಾಕಿಗಳನ್ನು ಸರ್ಕಾರದ ಆದೇಶದನ್ವಯ ಮಾತ್ರ ಮಾರಾಟ ಮಾಡಬೇಕು. ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಜಿಲ್ಲಾಡಳಿತಯು ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ದೀಪಾವಳಿ ಹಬ್ಬವನ್ನು ನ.5, 6 ಮತ್ತು 7ರಂದು ಆಚರಣೆ ಮಾಡುವುದರಿಂದ ಆ ಮೂರು ದಿನ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಬೇಕು ಎಂದು ಸೂಚಿಸಲಾಗಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 14 ದಿನಗಳ ಕಾಲ ಮೇಲ್ವಿಚಾರಣೆ ನಡೆಸಬೇಕು. ದೀಪಾವಳಿ ಹಬ್ಬ ಆರಂಭವಾಗುವ 7 ದಿನಗಳ ಮೊದಲು ಮತ್ತು ದೀಪಾವಳಿ ಹಬ್ಬದ ನಂತರ 7 ದಿನಗಳು ಪಟಾಕಿ ಸಿಡಿಸುವುದರ ಬಗ್ಗೆ ಮೇಲ್ವಿಚಾರಣೆ ಮಾಡಬೇಕು. ಎಲ್ಲಾ ಮಹಾನಗರ ಪಾಲಿಕೆಗಳು, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಪಟಾಕಿಗಳನ್ನು ಸಾಮೂಹಿಕವಾಗಿ ಸಿಡಿಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕು. ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯು ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸುವುದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಸೂಕ್ತ ಸಹಕಾರ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಯಾವಾಗೆಂದರೆ ಜನರು ಪಟಾಕಿ ಸಿಡಿಸಿದರೆ ಪೊಲೀಸರೇ ಹೊಣೆ

ಪೊಲೀಸ್‌ ಇಲಾಖೆಯು ಪಟಾಕಿ ಸಿಡಿತ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ನಡೆಯುವಂತೆ ಗಮನಹರಿಸುವುದು ಮತ್ತು ನಿಷೇಧಿತ ಸ್ಫೋಟಕ ಪಟಾಕಿಗಳ ಮಾರಾಟವನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳಲು ತಪ್ಪಿದರೆ ಠಾಣಾಧಿಕಾರಿಗಳನ್ನು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಆರೋಪದ ಮೇಲೆ ತಪ್ಪಿತಸ್ಥರು ಎಂದು ನಿರ್ಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.