ಈ ಸಲ ಬಕ್ರೀದ್ನಲ್ಲಿ ಗೋಹತ್ಯೆ ಭಾರೀ ಇಳಿಕೆ: ಸಚಿವ ಚೌಹಾಣ್
* ರಾಜ್ಯಾದ್ಯಂತ 100 ಗೋವು ರಕ್ಷಣೆ
* ಆರೋಪಿಗಳ ಮೇಲೆ ಕೇಸು
* ಕಳೆದ ವರ್ಷಕ್ಕಿಂತ ಗೋಹತ್ಯೆ ಈ ವರ್ಷ ತುಂಬಾ ಕಡಿಮೆ
ಬೆಂಗಳೂರು(ಜು.12): ಬಕ್ರೀದ್ ಹಬ್ಬದ ಆಚರಣೆ ವೇಳೆ ಗೋಹತ್ಯೆ ಕಳೆದ ವರ್ಷಕ್ಕಿಂತ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿದ್ದು, ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಸೋಮವಾರ ರಾತ್ರಿ ವೇಳೆಗೆ ಜಿಲ್ಲಾವಾರು ರಕ್ಷಿಸಿದ ಗೋವುಗಳ ನಿಖರ ಮಾಹಿತಿ ತಿಳಿಯಲಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೋಹತ್ಯೆ ನಿಷೇಧ ಕಾಯಿದೆ ಜಾರಿಯಾದ ಬಳಿಕ ಸುಮಾರು 25 ಸಾವಿರ ಗೋವುಗಳ ರಕ್ಷಣೆಯಾಗಿದೆ. ಇನ್ನು ಈ ವರ್ಷದ ಬಕ್ರೀದ್ ವೇಳೆಯಲ್ಲಿ ಗೋ ಹತ್ಯೆಯನ್ನು ತಡೆಯಬೇಕು ಎಂಬ ಉದ್ದೇಶದಿಂದ 15 ದಿನಗಳ ಕಾಲ ರಾಜ್ಯ ಪ್ರವಾಸ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಪರಿಣಾಮ ಬಹುತೇಕ ಗೋ ಹತ್ಯೆಯನ್ನು ತಡೆಯಲಾಗಿದೆ. 100ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ್ದು, ರಾಜ್ಯದ ಮೂಲೆ-ಮೂಲೆಯಿಂದ ಇನ್ನೂ ಮಾಹಿತಿ ಕಲೆಯಾಗುತ್ತಿದೆ’ ಎಂದು ಹೇಳಿದರು.
Bidar: ಬಕ್ರೀದ್ ಹಬ್ಬದಲ್ಲಿ ಗೋವುಗಳ ಸಾಗಾಟಕ್ಕೆ ಕಡಿವಾಣ: ಸಚಿವ ಪ್ರಭು ಚವ್ಹಾಣ್
‘ಪ್ರಾಣಿ ಹಿಂಸೆಗೆ ಸಂಬಂಧಿಸಿದಂತೆ ಕಲಬುರಗಿ ಒಂದರಲ್ಲೇ 25 ಪ್ರಕರಣ ದಾಖಲಾಗಿವೆ. ಕೋಲಾರದಲ್ಲಿ 6 ಹಸುಗಳ ರಕ್ಷಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಗೋಹತ್ಯೆ ಈ ವರ್ಷ ತುಂಬಾ ಕಡಿಮೆಯಾಗಿದೆ. ಯಲ್ಲಾಪುರದಲ್ಲಿ 6 ಒಂಟೆಗಳನ್ನು ರಕ್ಷಣೆ ಮಾಡಿದ್ದು, ಮಹಾರಾಷ್ಟ್ರಕ್ಕೆ 2 ಲಾರಿಗಳಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಲಾಗಿದೆ. ಒಟ್ಟಾರೆ ಈಗ ಇರುವ ಮಾಹಿತಿ ಪ್ರಕಾರ 100 ಹಸುಗಳನ್ನು ರಕ್ಷಣೆ ಮಾಡಲಾಗಿದೆ’ ಎಂದರು.