Asianet Suvarna News Asianet Suvarna News

ಕೊರೋನಾ ಟೆಸ್ಟ್‌ ಮಾಡಿಸಿ 15 ದಿನ ಆದ್ರೂ ರಿಸಲ್ಟ್‌ ಇಲ್ಲ: ಆತಂಕದಲ್ಲಿ ಜನತೆ

ಕೊರೋನಾ ಟೆಸ್ಟ್‌ ಫಲಿತಾಂಶ ಭಾರೀ ವಿಳಂಬ| ನೂತನ ಆರೋಗ್ಯ ಸಚಿವರೇ ಸೋಂಕು ಫಲಿತಾಂಶದ ಬಗ್ಗೆಯೂ ಗಮನ ಹರಿಸಿ| ಆರೋಗ್ಯ ಇಲಾಖೆ ನೂತನ ಸಚಿವ ಡಾ.ಕೆ. ಸುಧಾಕರ್‌ ಅವರೇ ಸ್ವಲ್ಪ ಇತ್ತ ಗಮನಿಸಿ| 15 ದಿನವಾದರೂ ಫಲಿತಾಂಶ ಬರಲ್ಲ| 

Covid Test Result is Delay in Karnataka grg
Author
Bengaluru, First Published Oct 24, 2020, 10:44 AM IST

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಅ.24): ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಕೊರೋನಾ ಸೋಂಕಿನ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಆದರೆ, ಮತ್ತೊಂದೆಡೆ ಪರೀಕ್ಷೆ ನಡೆಸಿದ 10-15 ದಿನ ಕಳೆದರೂ ಕೊರೋನಾ ಸೋಂಕಿತರ ಪರೀಕ್ಷೆಯ ಫಲಿತಾಂಶಗಳು ಬರುತ್ತಿಲ್ಲ. ಈ ಬಗ್ಗೆ ವ್ಯಾಪಕ ದೂರುಗಳಿದ್ದು, ಇಂತಹದೊಂದು ಸಮಸ್ಯೆ ಇರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳೇ ಒಪ್ಪುತ್ತಾರೆ. ಈ ಸಮಸ್ಯೆ ವ್ಯಾಪಕವಾಗಿರುವುದರಿಂದ ಸೋಂಕು ಕಡಿಮೆಯಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಈ ಬಗ್ಗೆ ಅನುಮಾನ ಮೂಡುವಂತಾಗಿದೆ.

ಈ ಸಮಸ್ಯೆ ಎಷ್ಟು ತೀವ್ರವಾಗಿದೆ ಎಂದರೆ, ಫಲಿತಾಂಶ ವಿಳಂಬದ ಬಗ್ಗೆ ಖುದ್ದು ಆರೋಗ್ಯ ಇಲಾಖೆ ತಜ್ಞರೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರಿಗೆ ದೂರು ನೀಡಿದ್ದು ತನಿಖೆ ನಡೆಸುವಂತೆ ಕೋರಿದ್ದಾರೆ. ಹೀಗಾಗಿ, ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಕಡಿಮೆ ಆಗುತ್ತಿರುವ ವೇಳೆ 10-12 ದಿನ ಕಳೆದರೂ ವರದಿಗಳು ಬಾರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊರೋನಾ ಸೋಂಕು ಇಳಿಕೆಗೆ ವರದಿ ಫಲಿತಾಂಶ ಪ್ರಕಟದಲ್ಲಿ ಉಂಟಾಗುತ್ತಿರುವ ಭಾರೀ ಲೋಪವೇ ಕಾರಣವೇ? ಎಂಬ ಗಂಭೀರ ಪ್ರಶ್ನೆ ಎದ್ದಿದೆ.

ರಾಜ್ಯದಲ್ಲಿ ನಿತ್ಯ ನಡೆಸುವ ಸರಾಸರಿ 1 ಲಕ್ಷ ಪರೀಕ್ಷೆಯಲ್ಲಿ ಶೇ.80 ರಷ್ಟುಪರೀಕ್ಷೆಗಳು ಆರ್‌ಟಿ-ಪಿಸಿಆರ್‌ ಮಾದರಿಯವೇ ಇರುತ್ತದೆ. ಈ ಪರೀಕ್ಷೆಯ ಫಲಿತಾಂಶ 24 ಗಂಟೆಗಳ ಒಳಗಾಗಿ ನೀಡಬೇಕು. ಗರಿಷ್ಠ 3 ದಿನ ಮೀರಬಾರದು ಎಂಬ ನಿಯಮವಿದೆ. ತ್ವರಿತವಾಗಿ ಪರೀಕ್ಷೆ ಫಲಿತಾಂಶ ದೊರೆತರೆ ಮಾತ್ರ ಸೂಕ್ತ ಸಮಯಕ್ಕೆ ಸೋಂಕಿತರಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಬಹುದು. ಆದರೆ, ರಾಜ್ಯದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾದ ವ್ಯಕ್ತಿಗಳಿಗೆ ಬರೋಬ್ಬರಿ 10-12 ದಿನ ಕಳೆದರೂ ಫಲಿತಾಂಶ ಬರುತ್ತಿಲ್ಲ. ಸಂಬಂಧಪಟ್ಟಇಲಾಖೆಯಿಂದ ಬಹುತೇಕರಿಗೆ ಮೊಬೈಲ್‌ ಸಂದೇಶವಾಗಲಿ ಅಥವಾ ಕರೆಯಾಗಲಿ ಬಂದಿಲ್ಲ. ಈ ರೀತಿ ಸಾವಿರಾರು ದೂರುಗಳು ಬರುತ್ತಿದ್ದು, ಈ ಬಗ್ಗೆ ಐದು ಪರೀಕ್ಷೆಗಳ ಎಸ್‌ಆರ್‌ಎಫ್‌ ಐಡಿ ಪರಿಶೀಲಿಸಿದ ‘ಕನ್ನಡಪ್ರಭ’ಕ್ಕೆ ವರದಿ ವಿಳಂಬವಾಗುತ್ತಿರುವುದು ಖಚಿತವಾಗಿದೆ. ಇದರಿಂದ ನಿತ್ಯ ನಡೆಯುತ್ತಿರುವ ಪರೀಕ್ಷೆಗಳ ಫಲಿತಾಂಶವು ವರದಿಯಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಮಾಸ್ಕ್‌ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ

ಸೋಂಕಿತರಿಗೂ ಪಾಸಿಟಿವ್‌ ವರದಿ ಇಲ್ಲ!

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ನೆಗೆಟಿವ್‌ ವರದಿ ಇರುವವರಿಗೆ ಮಾಹಿತಿ ನೀಡಿರುವುದು ಸ್ವಲ್ಪ ವಿಳಂಬವಾಗಿರಬಹುದು. ಆದರೆ ಪಾಸಿಟಿವ್‌ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ 3 ದಿನದೊಳಗಾಗಿ ಪರೀಕ್ಷೆಗೆ ಒಳಪಟ್ಟವರಿಗೆ ಮಾಹತಿ ರವಾನಿಸುತ್ತಿದ್ದೇವೆ. ಆದರೆ ಸೋಂಕು ದೃಢಪಟ್ಟಹಲವರಿಗೂ (ಪಾಸಿಟಿವ್‌) ವಿಳಂಬವಾಗಿಯೇ ಮಾಹಿತಿ ನೀಡಲಾಗುತ್ತಿದೆ ಎಂದಿದ್ದಾರೆ.

ಸ್ವತಃ ಪರೀಕ್ಷೆಗೆ ಒಳಪಟ್ಟವರೇ ಬಿಬಿಎಂಪಿ ಸಹಾಯವಾಣಿ, ಆಪ್ತಮಿತ್ರ, ಆರೋಗ್ಯ ಇಲಾಖೆ ಸೂಚಿಸಿರುವ ‘ಕೋವಿಡ್‌ವಾರ್‌ ಕರ್ನಾಟಕ’ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದರೂ ಸೂಕ್ತ ಸಮಯಕ್ಕೆ ವರದಿ ದೊರೆಯುತ್ತಿಲ್ಲ. ವರದಿ ದೊರೆತ ಬಳಿಕ ಬಿಯು ಸಂಖ್ಯೆ ಬಂದರೆ ಮಾತ್ರ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ. ಹೀಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಲೂ ಸಹ ಸಮಸ್ಯೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಫಲಿತಾಂಶದಲ್ಲಿ ಭಾರೀ ಲೋಪ:

ಈ ಬಗ್ಗೆ ‘ಕನ್ನಡಪ್ರಭ’ ಪರಿಶೀಲಿಸಿದರೆ, ಹಲವಾರು ಮಂದಿಗೆ 10 ದಿನ ಕಳೆದರೂ ಫಲಿತಾಂಶ ಬರುತ್ತಿಲ್ಲ ಎಂಬುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಐದು ಎಸ್‌ಆರ್‌ಎಫ್‌-ಐಡಿ ಸಂಖ್ಯೆಗಳ ವರದಿಯನ್ನು ಕನ್ನಡಪ್ರಭ ನೇರವಾಗಿ ತರಿಸಿಕೊಂಡಿದೆ. ಇವುಗಳನ್ನು ಪರಿಶೀಲಿಸಿದರೆ 10-12 ದಿನ ಕಳೆದರೂ ನೆಗೆಟಿವ್‌ ಹಾಗೂ ಪಾಸಿಟಿವ್‌ ವರದಿ ಪರೀಕ್ಷೆಗೆ ಒಳಪಟ್ಟವರಿಗೆ ಸೇರಿಲ್ಲ ಎಂಬುದು ದೃಢಪಟ್ಟಿದೆ.

ಈ ಬಗ್ಗೆ ಕೊರೋನಾ ಟಾಸ್ಕ್‌ಫೋರ್ಸ್‌ ಸದಸ್ಯರು ಹಾಗೂ ಕೊರೋನಾ ಪ್ರಯೋಗಾಲಯಗಳ ನೋಡಲ್‌ ಅಧಿಕಾರಿಯಾಗಿರುವ ಡಾ.ಸಿ.ಎನ್‌. ಮಂಜುನಾಥ್‌, ‘ಕನ್ನಡಪ್ರಭ ಮಾಹಿತಿ ಆಧರಿಸಿ ಪರಿಶೀಲಿಸಿದರೆ ಐದು ಮಂದಿಗೂ ವರದಿ ತಲುಪದಿರುವುದು ದೃಢಪಟ್ಟಿದೆ. ಒಂದು ವೇಳೆ ವರದಿ ನೆಗೆಟಿವ್‌ ಆಗಿದ್ದರೆ ತಲುಪಿಸಲು ನಿರ್ಲಕ್ಷ್ಯ ಮಾಡಿರುವ ಸಾಧ್ಯತೆ ಇದೆ. ಆದರೆ ಕೊರೋನಾ ಫಲಿತಾಂಶ ಪಾಸಿಟಿವ್‌ನಷ್ಟೇ ನೆಗೆಟಿವ್‌ ಸಹ ಮುಖ್ಯ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಆರೋಗ್ಯ ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

15 ದಿನವಾದರೂ ಫಲಿತಾಂಶ ಬರಲ್ಲ!

ಸಾವಿರಾರು ವರದಿಗಳು ಪರೀಕ್ಷೆಗೆ ಒಳಗಾದವರಿಗೆ ತಲುಪುತ್ತಿಲ್ಲ. ವೆಬ್‌ಸೈಟ್‌ನಲ್ಲೂ ಅಪ್‌ಡೇಟ್‌ ಆಗುತ್ತಿಲ್ಲ. ಉದಾಹರಣೆಗೆ ಎಸ್‌ಆರ್‌ಎಫ್‌ ಐಡಿ: 2952502045241 ವ್ಯಕ್ತಿಯು ಅ.7 ರಂದು ನಡೆಸಿರುವ ಪರೀಕ್ಷೆಯ ಫಲಿತಾಂಶ ಇನ್ನೂ ತಲುಪಿಲ್ಲ. ಅ.7 ರಂದು ನಡೆಸಿರುವ 2952502046867 ಫಲಿತಾಂಶ, ಸೆ.29 ರಂದು ನಡೆಸಿರುವ 2952501743164 ಫಲಿತಾಂಶ ಇನ್ನೂ ತಲುಪಿಲ್ಲ. ಅ.12 ರಂದು ನಡೆಸಿದ 2952502290757 ಪರೀಕ್ಷೆಯ ಫಲಿತಾಂಶವೂ ಇನ್ನೂ ಬಂದಿಲ್ಲ.
 

Follow Us:
Download App:
  • android
  • ios