ಬೆಂಗಳೂರು (ಜ.24):  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಸಾಗಿದ್ದ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಕಂಡುಬಂದಿದೆ. ಶನಿವಾರ 900ಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಬೆಂಗಳೂರಿನಲ್ಲೇ 527 ಪ್ರಕರಣಗಳು ದೃಢಪಟ್ಟಿವೆ.

ಜ.8ರಂದು ರಾಜ್ಯದಲ್ಲಿ 970 ಪ್ರಕರಣಗಳು ವರದಿಯಾಗಿದ್ದವು. ಆ ನಂತರ ಇಳಿಕೆಯಾಗುತ್ತಾ ಸಾಗಿದ್ದ ಪ್ರಕರಣಗಳ ಸಂಖ್ಯೆ ಜ.22ರ ಶುಕ್ರವಾರ 324 ಪ್ರಕರಣಗಳಿಗೆ ಕುಸಿದಿತ್ತು. ಆದರೆ ಶನಿವಾರ ದಿಢೀರ್‌ 902 ಪ್ರಕರಣಗಳು ವರದಿಯಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಜ.22ರಂದು 160 ಪ್ರಕರಣಗಳು ವರದಿಯಾಗಿದ್ದವು. ಇದೀಗ ಶನಿವಾರ 527 ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲಿ ಎರಡನೇ ಅಲೆಯ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಇಮ್ಯುನಿಟಿ ಹೆಚ್ಚಿಸುತ್ತೆ ಕೊವ್ಯಾಕ್ಸಿನ್, ಬಳಕೆಗೆ ಸುರಕ್ಷಿತ: ಆದ್ರೆ ಈ ಕೆಲವು ಸಮಸ್ಯೆ ಕಾಮನ್ ...

ಶನಿವಾರ ಬೆಂಗಳೂರು ನಗರ, ತುಮಕೂರು ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. 542 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 9,35,478ಕ್ಕೆ, ಒಟ್ಟು ಬಿಡುಗಡೆಯಾದವರ ಸಂಖ್ಯೆ 9,15,924 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಒಟ್ಟು ಸಂಖ್ಯೆ 12,193 ತಲುಪಿದೆ. ಉಳಿದ 7,432 ಜನ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆ, ಗೃಹ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 157 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾವಾರು ಪ್ರಕರಣ:  ಶನಿವಾರ ಬೆಂಗಳೂರು 527, ಮೈಸೂರು 51, ಕಲಬುರಗಿ 39, ದಕ್ಷಿಣ ಕನ್ನಡ 31, ತುಮಕೂರು 24, ಚಿತ್ರದುರ್ಗ, ಬೆಳಗಾವಿ 23, ಚಿಕ್ಕಬಳ್ಳಾಪುರ, ಹಾಸನ, ಶಿವಮೊಗ್ಗ ತಲಾ 19, ಧಾರವಾಡ, ಉತ್ತರ ಕನ್ನಡ ತಲಾ 15, ದಾವಣಗೆರೆ 13, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ತಲಾ 11, ಕೊಡಗು, ಉಡುಪಿ 10, ಮಂಡ್ಯ ತಲಾ 9, ಬೀದರ್‌ 8, ವಿಜಯಪುರ 7, ಚಾಮರಾಜನಗರ, ಕೋಲಾರ ತಲಾ 4, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಯಾದಗಿರಿ ತಲಾ 2, ಗದಗ, ಕೋಲಾರ, ರಾಯಚೂರು ತಲಾ 1 ಪ್ರಕರಣಗಳು ವರದಿಯಾಗಿವೆ.