ಬೆಂಗಳೂರಿಗರಿಗೆ ನೆಮ್ಮದಿ, ಕೊರೋನಾ ಪಾಸಿಟಿವಿಟಿ, ಸೋಂಕಿತರ ಸಂಖ್ಯೆ ಇಳಿಕೆ
* ಬೆಂಗಳೂರು ನಗರದಲ್ಲಿ ಭಾನುವಾರ 89 ಮಂದಿಯಲ್ಲಿ ಕೋವಿಡ್ ಪತ್ತೆ
* ನಗರದಲ್ಲಿ ಇಳಿದ ಸೋಂಕಿತರ ಸಂಖ್ಯೆ, ಪಾಸಿಟಿವಿಟಿ ದರ
* ನಗರದಲ್ಲಿ ಒಟ್ಟು 1,839 ಸಕ್ರಿಯ ಪ್ರಕರಣ
ಬೆಂಗಳೂರು(ಮೇ.09): ಬೆಂಗಳೂರು ನಗರದಲ್ಲಿ ಭಾನುವಾರ 89 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.1.62ಕ್ಕೆ ಇಳಿಕೆಯಾಗಿದೆ. 91 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಸಾವು ದಾಖಲಾಗಿಲ್ಲ.
ನಗರದಲ್ಲಿ ಒಟ್ಟು 1,839 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ 3 ಮತ್ತು ಸಾಮಾನ್ಯ ವಾರ್ಡ್‌ನಲ್ಲಿ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕಂಟೈನ್ಮೆಂಟ್ ವಲಯಗಳಿದ್ದು, ಭಾನುವಾರ ನಗರದಲ್ಲಿ ಹೊಸದಾಗಿ ಕಂಟೈನ್ಮೆಂಟ್ ವಲಯ ಸೃಷ್ಟಿಯಾಗಿಲ್ಲ. ಮಹದೇವಪುರದಲ್ಲಿ 44 ಪ್ರಕರಣ ಪತ್ತೆಯಾಗಿದ್ದು, ಶೇ.3.88 ಪಾಸಿಟಿವಿಟಿ ಇದೆ. ಉಳಿದಂತೆ ಪೂರ್ವ 24, ಬೊಮ್ಮನಹಳ್ಳಿ 15, ದಕ್ಷಿಣ 12, ಯಲಹಂಕ 8, ಪಶ್ಚಿಮ 6, ಆರ್‌ಆರ್ ನಗರ 5 ಮತ್ತು ದಾಸರಹಳ್ಳಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ.
ಶನಿವಾರ 18,438 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 2267 ಮಂದಿ ಮೊದಲ ಡೋಸ್, 7,505 ಮಂದಿ ಎರಡನೇ ಡೋಸ್ ಮತ್ತು 8666 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟು 10,044 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 8,476 ಆರ್‌ಟಿಪಿಸಿಆರ್ ಹಾಗೂ 1568 ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.