ಬೆಂಗಳೂರಲ್ಲಿ ಜೂನ್‌ ವೇಳೆಗೆ 16.8 ಲಕ್ಷ ಕೇಸ್‌!| 15 ದಿನ ಲಾಕ್‌ಡೌನ್‌ ಮಾಡಿದರೂ ಕೋವಿಡ್‌ ಪ್ರಕರಣ ಭಾರಿ ಹೆಚ್ಚಳ: ಐಐಎಸ್‌ಸಿ ಅಧ್ಯಯನ ವರದಿ\ ಸಾವಿನ ಸಂಖ್ಯೆ 16 ಸಾವಿರಕ್ಕೆ ಹೆಚ್ಚಳ| 30 ದಿನ ಲಾಕ್‌ಡೌನ್‌ ಮಾಡಿದರೆ ಸೋಂಕು ಸ್ವಲ್ಪ ನಿಯಂತ್ರಣ

ಬೆಂಗಳೂರು(ಮೇ.06): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 15 ದಿನಗಳ ಲಾಕ್‌ಡೌನ್‌ ಮಾಡಿದರೂ ಜೂ.11ರ ವೇಳೆಗೆ ಒಟ್ಟು ಸೋಂಕು ಪ್ರಕರಣ 16.87 ಲಕ್ಷಕ್ಕೆ ತಲುಪಲಿದ್ದು, ಸಾವಿನ ಸಂಖ್ಯೆ 15,888ಕ್ಕೆ ಏರಿಕೆಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಅಧ್ಯಯನವೊಂದು ತಿಳಿಸಿದೆ.

ಅದೇ 30 ದಿನಗಳ ಲಾಕ್‌ಡೌನ್‌ ಮಾಡಿದ್ದರೆ ಸೋಂಕು, ಸಕ್ರಿಯ ಪ್ರಕರಣ ಹಾಗೂ ಸಾವಿನ ಪ್ರಮಾಣ ಸ್ವಲ್ಪ ಹೆಚ್ಚು ನಿಯಂತ್ರಣಕ್ಕೆ ಬರಲಿದೆ. ಸೋಂಕು ಪ್ರಕರಣಗಳು 2.78 ಲಕ್ಷದಷ್ಟುಕಡಿಮೆಯಾಗಲಿದ್ದು, ಸಕ್ರಿಯ ಸೋಂಕು 1.53 ಲಕ್ಷದಷ್ಟುಹಾಗೂ ಸಾವು 1,665 ರಷ್ಟುಕಡಿಮೆಯಾಗಲಿದೆ ಎಂದು ಅಂದಾಜು ಮಾಡಿದೆ.

ಐಐಎಸ್ಸಿ ಪ್ರೊ. ಶಶಿಕುಮಾರ್‌ ಗಣೇಶನ್‌ ಹಾಗೂ ಪ್ರೊ. ದೀಪಕ್‌ ಸುಬ್ರಮಣಿ ನೇತೃತ್ವದಲ್ಲಿ ನಡೆಸಿರುವ ಪಿಡಿಇ ಆಧಾರಿತ ಮಾಡೆಲಿಂಗ್‌ನ ಕಂಪ್ಯೂಟರ್‌ ಆಧಾರಿತ ಗಣಿತ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಏ.27ರವರೆಗಿನ ಅಂಕಿ-ಅಂಶ ಆಧರಿಸಿ ಮಾಡೆಲಿಂಗ್‌ ಸಿದ್ಧಪಡಿಸಿರುವ ಅವರು ಕರ್ನಾಟಕದಲ್ಲಿ ಹಾಲಿ ಇರುವ ಸೋಂಕಿನ ವೇಗದ ಪ್ರಕಾರ ಮೇ 4ರ ವೇಳೆಗೆ ಬೆಂಗಳೂರಿನಲ್ಲಿ 8.71 ಲಕ್ಷ ಸೋಂಕು ಪ್ರಕರಣ, 2.81 ಲಕ್ಷ ಸಕ್ರಿಯ ಪ್ರಕರಣ ವರದಿಯಾಗಲಿದ್ದು, 5.83 ಲಕ್ಷ ಮಂದಿ ಗುಣಮುಖರಾಗಲಿದ್ದಾರೆ. ಈ ವೇಳೆಗೆ 7,102 ಮಂದಿ ಸಾವನ್ನಪ್ಪಲಿದ್ದಾರೆ ಎಂದು ಅಂದಾಜಿಸಿತ್ತು. ಮೇ 4ರ ವೇಳೆಗೆ ವಾಸ್ತವವಾಗಿ 8.63 ಲಕ್ಷ ಪ್ರಕರಣ ವರದಿಯಾಗಿದ್ದು, 5.43 ಲಕ್ಷ ಗುಣಮುಖರಾಗಿ 7,006 ಮಂದಿ ಸಾವನ್ನಪ್ಪಿದ್ದಾರೆ.

"

ಇನ್ನು ಅಧ್ಯಯನವು ಏ.27 ರಿಂದ 15 ದಿನಗಳ ಲಾಕ್‌ಡೌನ್‌ ಮಾಡಿದರೆ ಜೂ.11 ರ ವೇಳೆಗೆ ಎಷ್ಟುಪ್ರಕರಣ ದಾಖಲಾಗಲಿವೆ. ಏ.27 ರಿಂದ 30 ದಿನಗಳ ಲಾಕ್ಡೌನ್‌ ಮಾಡಿದರೆ ಜೂ.11ರ ವೇಳೆಗೆ ಎಷ್ಟುಪ್ರಕರಣಗಳು ದಾಖಲಾಗಲಿವೆ ಎಂಬುದನ್ನು ಅಂದಾಜು ಮಾಡಿದೆ. ಯಾವುದೇ ಲಾಕ್‌ಡೌನ್‌ ಮಾಡದಿದ್ದರೆ ಜೂ.11ರ ವೇಳೆಗೆ 32.78 ಲಕ್ಷ ಸೋಂಕು ಉಂಟಾಗಿ, 26,174 ಮಂದಿ ಸಾವನ್ನಪ್ಪುತ್ತಿದ್ದರು ಎಂಬ ಆತಂಕಕಾರಿ ವಿಷಯವನ್ನೂ ಪ್ರಸ್ತಾಪಿಸಿದೆ.

30 ದಿನಗಳ ಲಾಕ್‌ಡೌನ್‌ ಮಾಡಿದರೆ ಜೂ.11 ರ ವೇಳೆಗೆ ಬೆಂಗಳೂರಿನಲ್ಲಿ 14.09 ಲಕ್ಷ ಮಂದಿಗೆ ಸೋಂಕು ತಗುಲಲಿದ್ದು, 11.34 ಲಕ್ಷ ಮಂದಿಗೆ ಗುಣಮುಖರಾಗಿ 2.60 ಲಕ್ಷ ಸಕ್ರಿಯ ಸೋಂಕು ಉಳಿಯಲಿದೆ. ಈ ವೇಳೆಗೆ 14,223 ಮಂದಿ ಸಾವನ್ನಪ್ಪಲಿದ್ದಾರೆ. 15 ದಿನಗಳ ಲಾಕ್‌ಡೌನ್‌ ಮಾಡಿದರೆ ಜೂ.11 ರ ವೇಳೆಗೆ ತುಸು ಹೆಚ್ಚು ಸೋಂಕು, ಸಾವು ವರದಿಯಾಗಲಿದ್ದು ಒಟ್ಟು ಸೋಂಕು 16.87 ಲಕ್ಷ ವರದಿಯಾಗಿ 12.58 ಲಕ್ಷ ಮಂದಿ ಗುಣಮುಖರಾಗಲಿದ್ದಾರೆ. 4.13 ಲಕ್ಷ ಸಕ್ರಿಯ ಸೋಂಕು ಇರಲಿದ್ದು ಒಟ್ಟು ಸಾವಿನ ಪ್ರಮಾಣ 15,888ಕ್ಕೆ ಹೆಚ್ಚಾಗಲಿದೆ ಎಂದು ಅಧ್ಯಯನ ಅಂದಾಜಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona