ಬೆಂಗಳೂರು (ಜೂ. 19): ಕೊರೋನಾ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆಗುವ ಸುಲಿಗೆ ತಪ್ಪಿಸಲು ರಾಜ್ಯ ಸರ್ಕಾರದ ವತಿಯಿಂದಲೇ ಗುರುವಾರ ನಡೆದ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ದರ ನಿಗದಿ ಅಂತಿಮಗೊಳಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಗುರುವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ನಡೆದ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಜೂ.4 ರಂದು ಸರ್ಕಾರದಿಂದ ಚಿಕಿತ್ಸಾ ದರ ನಿಗದಿಗೆ ರಚಿಸಿದ್ದ 8 ಮಂದಿ ಸದಸ್ಯರ ಸಮಿತಿಯ ಶಿಫಾರಸುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಒಂದು ದರ ನಿಗದಿ ಮಾಡಲು ನಿರ್ಧರಿಸಿದ್ದಾರೆ.

 

ಇದರಂತೆ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಯೋಜನೆಯಡಿ ಚಿಕಿತ್ಸೆ ಪಡೆಯುವ ಬಿಪಿಎಲ್‌ ಕಾರ್ಡ್‌ದಾರರಿಗೆ ಒಂದು ದರ ಹಾಗೂ ನಗದು ಪಾವತಿ, ವಿಮಾ ಯೋಜನೆಗಳಡಿ ಚಿಕಿತ್ಸೆ ಪಡೆಯುವವರಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.

ಎಬಿ-ಎಆರ್‌ಕೆ ಯೋಜನೆಯಡಿ ದಿನಕ್ಕೆ ಜನರಲ್‌ ವಾರ್ಡ್‌ಗೆ 5,200 ರು., ಆಕ್ಸಿಜನ್‌ ವ್ಯವಸ್ಥೆಯುಳ್ಳ ವಾರ್ಡ್‌ಗೆ ನಿತ್ಯ 7 ಸಾವಿರ ರು., ಐಸಿಯು ವಾರ್ಡ್‌ಗೆ 8,500 ರು., ಐಸಿಯು ಜೊತೆಗೆ ವೆಂಟಿಲೇಟರ್‌ ಉಳ್ಳ ವರ್ಡ್‌ಗೆ 10 ಸಾವಿರ ನಿಗದಿ ಮಾಡಲಾಗಿದೆ.

ಉಳಿದಂತೆ ನಗದು ಹಾಗೂ ವಿಮಾ ಯೋಜನೆ ಹೊಂದಿರುವವರಿಗೆ ಜನರಲ್‌ ವಾರ್ಡ್‌ಗೆ ದಿನಕ್ಕೆ 10 ಸಾವಿರ ರು., ಆಕ್ಸಿಜನ್‌ ವ್ಯವಸ್ಥೆಯುಳ್ಳ ವಾರ್ಡ್‌ಗೆ 12 ಸಾವಿರ ರು., ಐಸಿಯು ವಾರ್ಡ್‌ಗೆ 15,000 ರು., ಐಸಿಯು ಮತ್ತು ವೆಂಟಿಲೇಟರ್‌ ಹೊಂದಿರುವ ವಾರ್ಡ್‌ಗೆ 25,000 ರು. ನಿಗದಿ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಮಿತಿ ಸೂಚಿಸಿದ್ದ ದರ ಪರಿಷ್ಕರಣೆ:

ಗುರುವಾರ ನಡೆದ ಟಾಸ್ಕ್‌ಫೋರ್ಸ್‌ನಲ್ಲಿ ಜೂನ್‌ 4 ರಂದು ದರ ನಿಗದಿಗೆ ರಚಿಸಿದ್ದ ಎಂಟು ಜನರ ಸಮಿತಿಗೆ ಖಾಸಗಿ ಆಸ್ಪತ್ರೆಗಳು ಸಲ್ಲಿಸಿದ್ದ ಬೇಡಿಕೆ ದರಗಳನ್ನು ಬಹುತೇಕ ಕಡಿತಗೊಳಿಸಲಾಗಿದೆ.

ಎಬಿ-ಎಆರ್‌ಕೆ ಫಲಾನುಭವಿಗಳಿಗೆ ಸಾಮಾನ್ಯವಾರ್ಡ್‌ಗೆ 5,200, ಆಕ್ಸಿಜನಲ್‌ ಉಳ್ಳ ವಾರ್ಡ್‌ಗೆ 7 ಸಾವಿರ ರು., ಐಸಿಯು ವಾರ್ಡ್‌ಗೆ 8,500 ರು., ಐಸಿಯು ಜೊತೆಗೆ ವೆಂಟಿಲೇಟರ್‌ ಇರುವ ವಾರ್ಡ್‌ಗೆ 10 ಸಾವಿರ ರು. ನಿಗದಿ ಮಾಡಲು ಶಿಫಾರಸು ಮಾಡಿತ್ತು.

ಉಳಿದಂತೆ ನಗದಿ ಹಾಗೂ ವಿಮಾ ಯೋಜನೆಗಳಡಿ ಚಿಕಿತ್ಸೆ ಪಡೆಯುವವರಿಗೆ ಸಾಮಾನ್ಯ ವಾರ್ಡ್‌ಗೆ 15,000 ರು., ಆಕ್ಸಿಜನ್‌ ಉಳ್ಳ ವಾರ್ಡ್‌ಗೆ 20 ಸಾವಿರ ರು., ಐಸಿಯು ವಾರ್ಡ್‌ಗೆ 25 ಸಾವಿರ ರು., 35 ಸಾವಿರ ರು. ನಿಗದಿ ಮಾಡಿತ್ತು. ಇದನ್ನು ಬಹುತೇಕ ಪರಿಷ್ಕರಣೆ ಮಾಡಿ ದರಗಳನ್ನು ಕಡಿಮೆ ಮಾಡಲು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಟಾಸ್ಕ್‌ಫೋರ್ಸ್‌ ಅಂತಿಮಗೊಳಿಸಿರುವ ದರ: (ದಿನಕ್ಕೆ/ರು.ಗಳಲ್ಲಿ)

ವಾರ್ಡ್‌ ಆಯುಷ್ಮಾನ್‌ ಫಲಾನುಭವಿ ನಗದು ಪಾವತಿ/ವಿಮಾ ಪಾಲಿಸಿದಾರರು

ಸಾಮಾನ್ಯ ವಾರ್ಡ್‌ 5,200 10,000

ಆಕ್ಸಿಜನ್‌ ವ್ಯವಸ್ಥೆ ವಾರ್ಡ್‌ 7,000 12,000

ಐಸಿಯು ವಾರ್ಡ್‌ 8,500 15,000

ಐಸಿಯು ಜತೆ ವೆಂಟಿಲೇಟರ್‌ 10,000 25,000

ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಚಿಕಿತ್ಸೆಗೆ ದರ ನಿಗದಿ ಮಾಡುವ ಕುರಿತು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸದ್ಯದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು.

- ಬಿ. ಶ್ರೀರಾಮುಲು, ಆರೋಗ್ಯ ಸಚಿವ