ಉಡುಪಿ(ಏ.17): ಒಂದೇ ವಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿ ತೀವ್ರ ಆತಂಕ ಹುಟ್ಟಿಸಿದ್ದ ಮಣಿಪಾಲದ ಮಾಹೆ ವಿವಿಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಎಂಐಟಿ) ಮೈಕ್ರೋ ಕಂಟೈನ್ಮೆಂಟ್‌ ಝೋನ್‌ ರಚಿಸಿ ಸಮರ್ಪಕ ಕ್ರಮ ಕೈಗೊಂಡ ಪರಿಣಾಮ ಎರಡೇ ವಾರಗಳಲ್ಲಿ ಕ್ಯಾಂಪಸ್‌ ಸಂಪೂರ್ಣ ಸೋಂಕುಮುಕ್ತವಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸುವ ವೇಳೆ ಇದೇ ಉಪಾಯ ಸೂಚಿಸಿದ್ದರು. ಲಾಕ್‌ಡೌನ್‌ ಮಾಡುವುದಕ್ಕಿಂತ ಮೈಕ್ರೋ ಕಂಟೈನ್‌ಮೆಂಟ್‌ ಝೋನ್‌ ರಚಿಸಿ ಯುದ್ಧೋಪಾದಿ ಯತ್ನ ನಡೆಸಬೇಕು ಎಂದು ಸಲಹೆ ನೀಡಿದ್ದರು.

ಅದಾಗಲೇ ಇದೇ ಉಪಾಯ ಅಳವಡಿಸಿ ಕಾರ್ಯಾಚರಣೆ ಪ್ರಾರಂಭಿಸಿದ್ದ ಉಡುಪಿ ಜಿಲ್ಲಾಡಳಿತ ಮತ್ತು ಎಂಐಟಿಯ ಆಡಳಿತಗಳು ಇದೀಗ ಕ್ಯಾಂಪಸ್‌ ಅನ್ನು ಕೊರೋನಾಮುಕ್ತವಾಗಿಸುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಮೈಕ್ರೋ ಕಂಟೋನ್‌ಮೆಂಟ್‌ ರಚನೆ ಕೊರೋನಾ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಎಂಬುದು ಇದೀಗ ಸಾಬೀತಾಗಿದ್ದು, ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ತಜ್ಞರ ಸಭೆಯಲ್ಲೂ ತೀವ್ರ ಚರ್ಚೆಗೊಳಗಾಗಿದೆ.

ಏನಾಗಿತ್ತು?:

ಎಂಐಟಿಯಲ್ಲಿ 6 ಸಾವಿರ ವಿದ್ಯಾರ್ಥಿಗಳು, 3000 ಪ್ರಾಧ್ಯಾಪಕರು, ಸಿಬ್ಬಂದಿ ಇದ್ದಾರೆ. ಪರೀಕ್ಷೆ ಮುಗಿದ ಖುಷಿಯಲ್ಲಿ ವಿದ್ಯಾರ್ಥಿಗಳು ಒಂದೆಡೆ ಸೇರಿ ಪಾರ್ಟಿ ಮಾಡಿದ್ದರು. ಪರಿಣಾಮ ಅವರ ಮಧ್ಯೆ ಕೊರೋನಾ ಹರಡಿತ್ತು. ಮಾ.20ರಂದು 42 ವಿದ್ಯಾರ್ಥಿಗಳಿಗೆ ಕೊರೋನಾ ತಗಲಿರುವುದು ಖಚಿತವಾಗಿತ್ತು. ಅವರ ಸಂಪರ್ಕಿತರನ್ನು ಪರೀಕ್ಷಿಸಿದಾಗ ಮಾ.21ರಂದು 145 ವಿದ್ಯಾರ್ಥಿಗಳಿಗೆ ಸೋಂಕಿರುವುದು ಪತ್ತೆಯಾಗಿತ್ತು. ನಂತರ ಪ್ರತಿದಿನ ನೂರರ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಾ, ಮಾ.26ರಂದು ಒಂದೇದಿನ ಅತೀ ಹೆಚ್ಚು 184 ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿತ್ತು.

15 ದಿನದಲ್ಲೇ ಸೋಂಕು ಮುಕ್ತ: ದಿನದಿಂದ ದಿನಕ್ಕೆ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಮಾ.25ರಂದು ಉಡುಪಿ ಜಿಲ್ಲಾಧಿಕಾರಿ ಅವರು ಎಂಐಟಿಯನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಿದರು. ಈ ವೇಳೆ ಮಾಹೆಯ ಪ್ರತಿಯೊಂದು ಹಾಸ್ಟೆಲ್‌ ಅನ್ನು, ವಿದ್ಯಾರ್ಥಿಗಳಿರುವ ಬಾಡಿಗೆ ರೂಮ್‌ಗಳನ್ನು, ಮನೆಗಳನ್ನು ಪ್ರತ್ಯೇಕ ಕ್ವಾರಂಟೈನ್‌ ಝೋನ್‌ಗಳನ್ನಾಗಿ ಮಾಡಲಾಯಿತು. ಅವರ ಸಂಪರ್ಕಿತರನ್ನು ನೂರಾರು ಸಂಖ್ಯೆಯಲ್ಲಿ ಅವರವರ ಮನೆಯಲ್ಲಿ ಕಡ್ಡಾಯ ಕ್ವಾರಂಟೈನ್‌ಗೊಳಿಸಿ ಪರೀಕ್ಷೆಗೊಳಪಡಿಸಲಾಯಿತು, ಇತರರಿಗೆ ಸೋಂಕು ಹರಡದಂತೆ ಹೇಗಿರಬೇಕು ಎಂದು ತಿಳಿ ಹೇಳಲಾಯಿತು. ಸೋಂಕಿತರಿಗೆ, ಸಂಪರ್ಕಿತರಿಗೆ ಹೊರಗಿನ ಸಂಪರ್ಕವೇ ಇಲ್ಲದಂತೆ ಮಾಡಲಾಯಿತು. ಪರಿಣಾಮ ವಾರದಲ್ಲಿಯೇ ಸೋಂಕು ಹರಡುವುದು ನಿಂತಿತು. ಏ.1ರಿಂದ ಮಣಿಪಾಲದಲ್ಲಿ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ. ಕಂಟೈನ್ಮೆಂಟ್‌ ಘೋಷಣೆಯಾದ 15 ದಿನಗಳಲ್ಲಿಯೇ ಎಂಐಟಿ ಸೋಂಕು ಮುಕ್ತವಾಗಿದೆ.

ದಿನಕ್ಕೆ ಸಾವಿರಾರು ಪರೀಕ್ಷೆ...

ಮಾಹೆ ವಿವಿ ತನ್ನದೇ ವೈರಾಲಜಿ ವಿಭಾಗವನ್ನು ಹೊಂದಿರುವುದರಿಂದ ದಿನಕ್ಕೆ 1000- 1,500ರಂತೆ ವಿದ್ಯಾರ್ಥಿ-ಸಿಬ್ಬಂದಿಯನ್ನು ಪರೀಕ್ಷೆ ಮಾಡಲಾಯಿತು ಮತ್ತು ಕಟ್ಟುನಿಟ್ಟು ಕ್ವಾರಂಟೈನ್‌ ಮಾಡಲಾಯಿತು. ಸೋಂಕಿದ್ದವರನ್ನು ಇತರರೊಂದಿಗೆ ಪ್ರತ್ಯೇಕಿಸಲಾಯಿತು. ಇದರಿಂದ ಸೋಂಕು ಹರಡುವುದನ್ನು ನಿಯಂತ್ರಿಸುವುದು ಸಾಧ್ಯವಾಯಿತು.

-ಡಾ.ನಾರಾಯಣ ಸಭಾಹಿತ್‌, ಮಾಹೆ ವಿವಿ ಕುಲಸಚಿವ