ಪ್ರವಾಸಿಗರ ಹುಚ್ಚಾಟ: ವಾರಾಂತ್ಯಕ್ಕೆ ಸುರಕ್ಷತೆ ಇಲ್ಲದೆ ಜನಜಾತ್ರೆ!
ಪ್ರವಾಸಿಗರ ಹುಚ್ಚಾಟ!| ವಾರಾಂತ್ಯಕ್ಕೆ ಸುರಕ್ಷತೆ ಇಲ್ಲದೆ ಜನಜಾತ್ರೆ| ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೊರೋನಾ ಭೀತಿಯೇ ಇಲ್ಲದೆ ಸಂಡೇ ಮೋಜು| ಆರ್ಥಿಕತೆಗೆ ಪ್ರವಾಸೋದ್ಯಮ ಚೇತರಿಕೆ ಅಗತ್ಯ| ಆದರೆ, ಸುರಕ್ಷತೆ ಅತಿ ಮುಖ್ಯ| ಜನರು ಸಹಕರಿಸದಿದ್ದರೆ ಯಾರಿಂದಲೂ ಕೊರೋನಾ ಗಂಡಾಂತರ ತಡೆ ಅಸಾಧ್ಯ| ಕೊಪ್ಪಳ ಜಿಲ್ಲೆ ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ಸುರಕ್ಷತೆಯೇ ಇಲ್ಲದೆ ನೆರೆದಿದ್ದ ಜನಸ್ತೋಮ.
ಬೆಂಗಳೂರು(ಅ.12): ಕೊರೋನಾ ಹಿನ್ನೆಲೆಯಲ್ಲಿ ಭಣಗುಡುತ್ತಿದ್ದ ರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲೀಗ ಮತ್ತೆ ಪ್ರವಾಸಿಗರ ಕಲರವ ಆರಂಭವಾಗಿದೆ. ಲಾಕ್‌ಡೌನ್ ನಿಯಮಾವಳಿ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರಿನ ನಂದಿಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರ ಭಾರೀ ದಂಡು ಕಾಣಸಿಗುತ್ತಿದೆ. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರ, ರಾಜ್ಯದ ಆರ್ಥಿಕತೆಯ ಚೇತರಿಕೆಯ ಮುನ್ಸೂಚನೆ ನೀಡುತ್ತಿದೆ. ಆದರೆ, ಈ ವೇಳೆ ಕೋವಿಡ್ ನಿಯಮಾವಳಿ ಗಾಳಿಗೆ ತೂರಿ ಗುಂಪುಸೇರುವುದು, ಮಾಸ್ಕ್ ಧರಿಸದೆ ಸುತ್ತಾಡುವಂಥ ಹುಚ್ಚಾಟವೂ ಪ್ರವಾಸಿಗರಿಂದ ಹೆಚ್ಚುತ್ತಿದ್ದು,ಇದು ಕೊರೋನಾ ವ್ಯಾಪಿಸುವ ಆತಂಕ ಹುಟ್ಟುಹಾಕುತ್ತಿದೆ.
ಚಿಕ್ಕಮಗಳೂರಿನ ಪ್ರಸಿದ್ಧ ಮುಳ್ಳಯ್ಯನಗಿರಿ ಗಿರಿಧಾಮಕ್ಕೆ ಭಾನುವಾರ ಒಂದೇ ದಿನ 5 ಸಾವಿಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರೆ, ಬೆಂಗಳೂರಿನ ಸಮೀಪದ ನಂದಿಬೆಟ್ಟಕ್ಕೆ ಸುಮಾರು 8ರಿಂದ 9 ಸಾವಿರ ಮಂದಿ ದೌಡಾಯಿಸಿದ್ದಾರೆ. ವಿಶ್ವವಿಖ್ಯಾತ ಹಂಪಿಗೆ 5 ಸಾವಿರಕ್ಕೂ ಹೆಚ್ಚು ಮಂದಿ, ಜೋಗ ಜಲಪಾತಕ್ಕೆ 3500ಕ್ಕೂ ಹೆಚ್ಚು , ಚಿತ್ರದುರ್ಗ ಕೋಟೆಗೆ 2 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಇದಲ್ಲದೆ ಶಿವಮೊಗ್ಗದ ತಾವರೆæಕೊಪ್ಪ ವನ್ಯಜೀವಿಧಾಮಕ್ಕೆ ಒಂದೂವರೆ ಸಾವಿರಕ್ಕೂ ಹೆಚ್ಚು ಹಾಗೂ ಮೈಸೂರು ಅರಮನೆಗೆ 2865 ಮಂದಿ ಭೇಟಿ ಕೊಟ್ಟು ಖುಷಿಪಟ್ಟಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಬೀಚ್‌ಗೆ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಉಡುಪಿಯ ಮಲ್ಪೆ ಕಡಲತೀರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಇಷ್ಟೊಂದು ಸಂಖ್ಯೆಯಲ್ಲಿ ಪ್ರಾಕೃತಿಕ ಮತ್ತು ಪ್ರೇಕ್ಷಣೀಯ ತಾಣಗಳಿಗೆ ದೌಡಾಯಿಸುವ ಪ್ರವಾಸಿಗರು ಕೋವಿಡ್ ನಿಯಮಾವಳಿ ಗಾಳಿಗೆ ತೂರುತ್ತಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕೋವಿಡ್‌ನಿಂದಾಗಿ ಇಷ್ಟುದಿನ ಮನೆಯಲ್ಲೇ ಬಂಧಿಯಾಗಿದ್ದವರು ಇದೀಗ ಭಾರೀ ಸಂಖ್ಯೆಯಲ್ಲಿ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿರುವುದು ಕೊರೋನಾದಿಂದಾಗಿ ನೆಲಕಚ್ಚಿದ್ದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಜೀವ ನೀಡುತ್ತಿರುವುದು, ಆರ್ಥಿಕ ಕ್ಷೇತ್ರದ ಚೇತರಿಕೆಗೆ ಕಾರಣವಾಗುತ್ತಿದ್ದರೂ ನಿಜವೇ ಆಗಿದ್ದರೂ ಕೋವಿಡ್ ನಿಯಮಾವಳಿ ಗಾಳಿಗೆ ತೂರುವುದು ಸರಿಯಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಮಾಸ್ಕ್ ಧರಿಸದೆ, ಗುಂಪು ಸೇರಿ ಕೊರೋನಾ ಆತಂಕ ಮುಗಿದೇ ಹೋಯ್ತು ಎನ್ನುವಂತೆ ಓಡಾಡುವುದು ಅಪಾಯಕಾರಿ. ಇದರಿಂದ ಕೊರೋನಾ ಇನ್ನಷ್ಟುವ್ಯಾಪಿಸಬಹುದು ಎಂಬ ಆಕ್ರೋಶ ಕೆಲವರಿಂದ ವ್ಯಕ್ತವಾಗುತ್ತಿದೆ.
ಇದು ಪ್ರಾಕೃತಿಕ ತಾಣಗಳ ಕತೆಯಾದರೆ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೂ ಪ್ರವಾಸಿಗರ ಸಂಖ್ಯೆಯಲ್ಲಿ ದಿನೇ ದಿನೆ ಏರಿಕೆ ಕಾಣುತ್ತಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠ, ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರದಿಂದಲೇ ಭಕ್ತ ಸಾಗರ ಕಂಡು ಬಂದಿದೆ. ಭಾನುವಾರವಂತು ಕುಕ್ಕೆಸುಬ್ರಹ್ಮಣ್ಯದಲ್ಲಿ ಸಹಸ್ರಾರು ಭಕ್ತರು ಗೋಪುರ ಹೊರಭಾಗದ ವರೆಗೂ ಸಾಲು ನಿಂತು ದೇವರ ದರ್ಶನ ಪಡೆದರು. ಆದರೆ, ಪ್ರಾಕೃತಿಕ ತಾಣಗಳಿಗೆ ಹೋಲಿಸಿದರೆ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಕೋವಿಡ್ ನಿಯಮಾವಳಿಗಳನ್ನು ಸ್ವಲ್ಪ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎನ್ನುವುದು ಕೊಂಚ ನೆಮ್ಮದಿಯ ಸಂಗತಿ.
ಎಲ್ಲಿ ಎಷ್ಟುಜನ?
10000 ಜನ: ಮಂಗಳೂರಿನ ಪ್ರಸಿದ್ಧ ಪಣಂಬೂರು ಬೀಚ್‌ಗೆ ಬಂದವರ ಸಂಖ್ಯೆ
9000 ಮಂದಿ: ಬೆಂಗಳೂರು ಸಮೀಪದ ನಂದಿ ಬೆಟ್ಟಕ್ಕೆ ಭೇಟಿ ನೀಡಿದವರು
5000ಕ್ಕೂ ಹೆಚ್ಚು: ಬಳ್ಳಾರಿ ಜಿಲ್ಲೆಯ ಜಗತ್‌ಪ್ರಸಿದ್ಧ ಹಂಪಿಗೆ ಭೇಟಿ ನೀಡಿದವರು
5000 ಜನ: ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಭಾನುವಾರ ಜನಸಂದಣಿ
3500 ಜನ: ಶಿವಮೊಗ್ಗ ಜಿಲ್ಲೆ ಜೋಗ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರು
2865 ಮಂದಿ: ಮೈಸೂರಿನ ವಿಶ್ವಪ್ರಸಿದ್ಧ ಅಂಬಾ ವಿಲಾಸ ಅರಮನೆಗೆ ಬಂದವರು
2000ಕ್ಕೂ ಹೆಚ್ಚು: ಚಿತ್ರದುರ್ಗದ ಕಲ್ಲಿನ ಕೋಟೆ ವೀಕ್ಷಿಸಲು ಬಂದವರ ಸಂಖ್ಯೆ