ಮುಂಬೈ (ಜು. 18):  ಕೊರೋನಾ ನಿರ್ವಹಣೆ ಮತ್ತು ಆದಾಯ ಕುಸಿತದಿಂದ ಭಾರೀ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳು, ಈ ವರ್ಷವೊಂದರಲ್ಲೇ ಪರಿಸ್ಥಿತಿ ನಿರ್ವಹಣೆಗಾಗಿ ಮಾರುಕಟ್ಟೆಯಿಂದ ಭರ್ಜರಿ 1.93 ಲಕ್ಷ ಕೋಟಿ ರು. ಸಾಲ ಪಡೆದುಕೊಂಡಿವೆ ಎಂದು ಕೇರ್‌ ರೇಟಿಂಗ್ಸ್‌ ಬಿಡುಗಡೆ ಮಾಡಿದ ವರದಿ ಹೇಳಿದೆ.

ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಪಡೆದುಕೊಂಡಿದ್ದ ಸಾಲದ ಪ್ರಮಾಣಕ್ಕಿಂತ ಶೇ.76ರಷ್ಟುಹೆಚ್ಚು. ಈ ಸಾಲವು ಈಗಾಗಲೇ ರಾಜ್ಯಗಳು ಮಾಡಿರುವ ಒಟ್ಟು 52.6 ಲಕ್ಷ ಕೋಟಿ ರು. ಸಾಲದ ಹೊರೆ ಮತ್ತಷ್ಟುದೊಡ್ಡದಾಗುವಂತೆ ಮಾಡಿದೆ.

ಕೊರೋನಾ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಸಂಪನ್ಮೂಲ ಸಂಗ್ರಹಕ್ಕೆ ಅನುವಾಗುಂತೆ ಕೇಂದ್ರ ಸರ್ಕಾರ ವಿತ್ತೀಯ ಕೊರತೆ ಪ್ರಮಾಣವನ್ನು ಶೇ.3 ರಿಂದ ಶೇ.5 ರವರೆಗೂ ವಿಸ್ತರಣೆಗೆ ಅವಕಾಶ ಮಾಡಿಕೊಟ್ಟಿತ್ತು. ಜೊತೆಗೆ ಸಾಲ ಪಡೆಯಲು ಇದ್ದ ಕೆಲ ನಿಯಮಗಳನ್ನು ಸರಳೀಕೃತಗೊಳಿಸಿತ್ತು. ಅದರ ಬೆನ್ನಲ್ಲೇ ವಿವಿಧ ರಾಜ್ಯಗಳು ಮಾರುಕಟ್ಟೆಯಿಂದ, ಉಜ್ವಲ ಡಿಸ್ಕಾಂ ಖಾತರಿ ಯೋಜನೆ ಬಾಂಡ್‌ ಖರೀದಿ, ನ್ಯಾಷನಲ್‌ ಸೋಷಿಯಲ್‌ ಸೆಕ್ಯುರಿಟಿ ಫಂಡ್‌, ಬ್ಯಾಂಕ್‌ ಮತ್ತು ಇತರೆ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆದುಕೊಂಡಿವೆ. ಇದೇ ವೇಳೆ 2020ನೇ ಹಣಕಾಸು ವರ್ಷದಲ್ಲಿ ರಾಜ್ಯಗಳ ಒಟ್ಟು ಸರ್ಕಾರದ ಆಂತರಿಕ ಸಾಲದ ಅನುಪಾತ ಶೇ.35.1ಕ್ಕೆ ತಲುಪಿದೆ. 2015ನೇ ಸಾಲಿನಲ್ಲಿ ಅದು ಶೇ.30.9ರಷ್ಟಿತ್ತು ಎಂದು ವರದಿ ತಿಳಿಸಿದೆ.

ಲಾಕ್‌ಡೌನ್ ಮತ್ತೆ ಮುಂದುವರೆಯುತ್ತಾ? ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು!

ರಾಜ್ಯಗಳ ಒಟ್ಟು 52.6 ಲಕ್ಷ ಕೋಟಿ ರು. ಸಾಲದಲ್ಲಿ ಶೇ.72ರಷ್ಟುಪಾಲು ಟಾಪ್‌ 10 ರಾಜ್ಯಗಳದ್ದೇ ಆಗಿದೆ. ಈ ಪೈಕಿ 6 ಲಕ್ಷ ಕೋಟಿ ರು. ಅಂದರೆ ಶೇ.11ರಷ್ಟುಪಾಲಿನೊಂದಿಗೆ ಉತ್ತರಪ್ರದೇಶ ನಂ.1 ಸ್ಥಾನದಲ್ಲಿದೆ. ಉಳಿದಂತೆ ಮಹಾರಾಷ್ಟ್ರ 5 ಲಕ್ಷ ಕೋಟಿ ರು. ಸಾಲದೊಂದಿಗೆ 2ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ. ಅದರೆ ಈ ಪೈಕಿ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ ಮತ್ತು ಕರ್ನಾಟಕ ರಾಜ್ಯಗಳು ಜಿಡಿಪಿಯ ಶೇ.25 ರಷ್ಟುಕಡಿಮೆ ಸಾಲ ಹೊಂದಿರುವ ಮೂಲಕ 14ನೇ ಹಣಕಾಸು ಆಯೋಗ ಸೂಚಿಸಿದ್ದ ಮಿತಿಯೊಳಗೇ ಇವೆ. ಈ ಪೈಕಿ ಕರ್ನಾಟಕ ಜಿಡಿಪಿಯ ಶೇ.20ರಷ್ಟಕ್ಕಿಂತ ಕಡಿಮೆ ಸಾಲ ಹೊಂದಿದೆ.