ಬೆಂಗಳೂರು (ಡಿ.01):  ಕಳೆದ ಐದು ತಿಂಗಳ ನಂತರ ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಒಂದು ಸಾವಿರಕ್ಕೆ ಇಳಿದಿದೆ. ಸೋಮವಾರ ಕೇವಲ 998 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದೆ. 2,209 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ಜೂನ್‌ 30 ರಂದು 947 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಪ್ರತಿದಿನ ಸೋಂಕಿನ ಸಂಖ್ಯೆ ಸಾವಿರ ದಾಟುತ್ತಿತ್ತು. ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ನಿರಂತರವಾಗಿ ಹತ್ತು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ಅಕ್ಟೋಬರ್‌ ಮೂರನೇ ವಾರದಿಂದ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಾ ಬಂದಿದ್ದು, ನವೆಂಬರ್‌ 15 ರಿಂದ ಎರಡು ಸಾವಿರದೊಳಗೆಯೇ ಪ್ರಕರಣಗಳು ಬೆಳಕಿಗೆ ಬರುತ್ತಿತ್ತು. ಸೋಮವಾರ ಸಾವಿರದೊಳಗಿನ ಪ್ರಕರಣ ವರದಿಯಾಗಿರುವುದು ರಾಜ್ಯದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.

ಸದ್ಯ 23,279 ಸಕ್ರಿಯ ಕೊರೋನಾ ಪ್ರಕರಣಗಳಿದ್ದು ಈ ಪೈಕಿ 349 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಗರ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಒಂದೇ ಒಂದು ಪ್ರಕರಣಗಳಿಲ್ಲ. ಈವರೆಗೆ 8.84 ಲಕ್ಷ ಮಂದಿಗೆ ಸೋಂಕು ತಟ್ಟಿದ್ದು ಅವರಲ್ಲಿ 8.49 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11,778 ಮಂದಿ ಮರಣವನ್ನಪ್ಪಿದ್ದಾರೆ.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಬಿಜೆಪಿ MLA ನಿಧನ .

ಸೋಮವಾರ 81,333 ಪರೀಕ್ಷೆಗಳಷ್ಟೆನಡೆದಿದೆ. ಉಳಿದ ದಿನಗಳಲ್ಲಿ ಸಾಮಾನ್ಯವಾಗಿ ಲಕ್ಷದ ಮೇಲೆಯೇ ಪರೀಕ್ಷೆಗಳು ನಡೆಯುತ್ತಿವೆ. ಕಡಿಮೆ ಪರೀಕ್ಷೆ ನಡೆದಿರುವುದು ಕೂಡ ಹೊಸ ಪ್ರಕರಣಗಳಲ್ಲಿ ಇಳಿಕೆ ವರದಿಯಾಗಲು ಕಾರಣ ಆಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 6, ಬೆಂಗಳೂರು ಗ್ರಾಮಾಂತರ 2, ಬಾಗಲಕೋಟೆ, ಬಳ್ಳಾರಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 444, ಹಾವೇರಿಯಲ್ಲಿ 123 ಹೊಸ ಸೋಂಕಿನ ಪ್ರಕರಣಗಳು ದೃಢ ಪಟ್ಟಿವೆ. ಉಳಿದಂತೆ ಬಾಗಲಕೋಟೆ 3, ಬಳ್ಳಾರಿ 10, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 23, ಬೀದರ್‌ 2, ಚಾಮರಾಜ ನಗರ 4, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 14, ಚಿತ್ರದುರ್ಗ 1, ದಕ್ಷಿಣ ಕನ್ನಡ 27, ದಾವಣಗೆರೆ 11, ಧಾರವಾಡ 8, ಗದಗ 3, ಹಾಸನ 45, ಕಲಬುರಗಿ 15, ಕೊಡಗು 4, ಕೋಲಾರ 12, ಕೊಪ್ಪಳ 10, ಮಂಡ್ಯ 30, ಮೈಸೂರು 43, ರಾಯಚೂರು 10, ರಾಮನಗರ 8, ಶಿವಮೊಗ್ಗ 14, ತುಮಕೂರು 43, ಉಡುಪಿ 14, ಉತ್ತರ ಕನ್ನಡ 21, ವಿಜಯಪುರ 30 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.