* ನಿರ್ಲಕ್ಷ್ಯ ತೋರಿದ ಜಗಳೂರು ವೈದ್ಯನ ವಿರುದ್ಧ ಕ್ರಮಕ್ಕೆ ಸೂಚನೆ* ರೇಪ್‌ ಕೇಸಲ್ಲಿ ವೈದ್ಯರ ಬೇಜವಾಬ್ದಾರಿ: ಕೋರ್ಟ್‌ ಕಳವಳ ಡಾಕ್ಟರ್‌ ಮೇಲೆ ಕ್ರಮ* ಕರ್ತವ್ಯ, ಜವಾಬ್ದಾರಿ ಗೊತ್ತುಪಡಿಸಿ ಸುತ್ತೋಲೆ ಹೊರಡಿಸಲು ಸರ್ಕಾರಕ್ಕೆ ಆದೇಶ

ವೆಂಕಟೇಶ್‌ ಕಲಿಪಿ

ಬೆಂಗಳೂರು(ಮಾ.28): ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಮಾಣಪತ್ರ ವಿತರಿಸುವ ವೇಳೆ ವೈದ್ಯರು ‘ಲೈಂಗಿಕ ಕ್ರಿಯೆ ನಡೆದಿದೆಯೇ ಅಥವಾ ಇಲ್ಲವೇ’ ಎಂಬ ಸಂಗತಿಯನ್ನು ನಿರ್ದಿಷ್ಟವಾಗಿ ತಿಳಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಲೈಂಗಿಕ ದೌರ್ಜನ್ಯದ ಪ್ರಮಾಣ ಪತ್ರ ನೀಡಲು ವೈದ್ಯಕೀಯ ಪರೀಕ್ಷೆಗಾಗಿ ಅಪ್ರಾಪ್ತ ಸಂತ್ರಸ್ತೆಯನ್ನು ಹಾಜರುಪಡಿಸಿದ ಸಂದರ್ಭದಲ್ಲಿ ವೈದ್ಯರು ನಿರ್ವಹಿಸಬೇಕಾದ ಜವಾಬ್ದಾರಿ ಮತ್ತು ಕರ್ತವ್ಯ ಗೊತ್ತುಪಡಿಸಿ ರಾಜ್ಯದ ಎಲ್ಲಾ ವೈದ್ಯಾಧಿಕಾರಿಗಳಿಗೆ ಅನ್ವಯವಾಗುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣವೊಂದರಲ್ಲಿ ನಿರ್ಲಕ್ಷ್ಯತನದಿಂದ ಲೈಂಗಿಕ ದೌರ್ಜನ್ಯ ಪ್ರಮಾಣ ಪತ್ರ ವಿತರಿಸಿದ ಜಗಳೂರು ತಾಲೂಕು ಆಸ್ಪತ್ರೆ ವೈದ್ಯನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದೆ.

ಅಪ್ರಾಪ್ತೆಯನ್ನು ಮನೆಯಿಂದ ಕರೆದೊಯ್ದು ಒಂದು ತಿಂಗಳಿಗೂ ಅಧಿಕ ಸಮಯ ಜೊತೆಗಿರಿಸಿಕೊಂಡು ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ ಜಗಳೂರು ತಾಲೂಕಿನ ತಿಪ್ಪೇಸ್ವಾಮಿ ಎಂಬಾತನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹಾಗೆಯೇ, ಲೈಂಗಿಕ ದೌರ್ಜನ್ಯ ಪ್ರಮಾಣ ಪತ್ರದಲ್ಲಿ ‘ಸಂತ್ರಸ್ತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಯೇ ಅಥವಾ ಇಲ್ಲವೇ ಎಂದು ವೈದ್ಯ ನಿರ್ದಿಷ್ಟವಾಗಿ ಉಲ್ಲೇಖ ಮಾಡಿಲ್ಲ. ಆದರೂ ಸಂತ್ರಸ್ತೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಮುಂದೆ ದಾಖಲಿಸಿದ ಸ್ವಯಂಕೃತ ಹೇಳಿಕೆಯಲ್ಲಿ 2021ರ ಜೂ.27ರಿಂದ ಜು.18ರವರೆಗೆ ಬಲವಂತವಾಗಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಸ್ಪಷ್ಟಪಡಿಸಿರುವುದನ್ನೇ ಪರಿಗಣಿಸಿದ ಹೈಕೋರ್ಟ್‌, ಆರೋಪಿಗೆ ಜಾಮೀನು ನಿರಾಕರಿಸಿದೆ.

ಪ್ರಕರಣದ ವಿವರ:

ಪ್ರಕರಣದ ಸಂತ್ರಸ್ತೆಯ ತಂದೆ 2021ರ ಜೂ.14ರಂದು ಜಗಳೂರು ಪೊಲೀಸ್‌ ಠಾಣೆಗೆ ದೂರು ನೀಡಿ, ತನ್ನ 16 ವರ್ಷದ ಮಗಳು ನಾಪತ್ತೆಯಾಗಿದ್ದಾಳೆ. ಮಗಳನ್ನು ತಿಪ್ಪೇಸ್ವಾಮಿ ಕರೆದೊಯ್ದಿರಬಹುದು ಎಂದು ಗುಮಾನಿ ವ್ಯಕ್ತಪಡಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, 2021ರ ಜುಲೈ 18ರಂದು ಆಂಧ್ರಪ್ರದೇಶದ ಗುಂತಕಲ್‌ನ ಮನೆಯೊಂದರಲ್ಲಿ ಆರೋಪಿ ಮತ್ತು ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದರು.

ಆರೋಪಿ ವಿರುದ್ಧ ಅಪಹರಣ, ಐಪಿಸಿ ಸೆಕ್ಷನ್‌ 376(2)(ಎನ್‌) ಮತ್ತು ಪೋಕ್ಸೋ ಕಾಯ್ದೆ ಸೆಕ್ಷನ್‌ 9 ಮತ್ತು 11ರಡಿಯಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅಧೀನ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಹೀಗಾಗಿ, ಜಾಮೀನು ಕೋರಿ ಆತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ವೈದ್ಯರ ಕರ್ತವ್ಯ ಲೋಪ:

ಪ್ರಕರಣ ಕುರಿತು ‘ಲೈಂಗಿಕ ದೌರ್ಜನ್ಯ ಪ್ರಮಾಣ ಪತ್ರ’ ವಿತರಿಸಿದ್ದ ವೈದ್ಯರು, ಸಂತ್ರಸ್ತೆಯ ಜನನಾಂಗದ ಮೇಲೆ ಯಾವುದೇ ರೀತಿಯ ಗಾಯಗಳಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ವರದಿ ಬರುವುದು ಬಾಕಿಯಿದೆ ಎಂದಷ್ಟೇ ಉಲ್ಲೇಖಿಸಿದ್ದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಕನ್ಯಾಪೊರೆ ಹರಿದಿದೆಯೇ ಅಥವಾ ಇಲ್ಲವೇ? ಸಂತ್ರಸ್ತೆ ಲೈಂಗಿಕ ಕ್ರಿಯೆಗೆ ಒಳಗಾಗಿದ್ದಾಳೆಯೇ ಅಥವಾ ಇಲ್ಲವೇ? ಎಂಬ ಬಗ್ಗೆ ಪ್ರಮಾಣ ಪತ್ರದಲ್ಲಿ ವೈದ್ಯರು ಮಾಹಿತಿ ನೀಡಿಲ್ಲ. ಇದರಿಂದ ಪ್ರಮಾಣ ಪತ್ರ ವಿತರಿಸಿದ ವೈದ್ಯರನ್ನು ಕೋರ್ಟ್‌ಗೆ ಕರೆಯಿಸಿ ವಿಚಾರಣೆ ಮಾಡಿದರೂ ಅವರು ಯಾವುದೇ ಉತ್ತರ ನೀಡಿಲ್ಲ. ಎಫ್‌ಎಸ್‌ಎಲ್‌ ವರದಿ ಬರುವುದು ಬಾಕಿಯಿದೆ ಎಂದಷ್ಟೇ ಹೇಳಿದ್ದಾರೆ. ಆದರೆ, ಎಫ್‌ಎಸ್‌ಎಲ್‌ಎಲ್‌ ವರದಿಯು ಜನನಾಂಗದ ರೋಮ, ಬಟ್ಟೆಮತ್ತದರ ಮೇಲಿನ ವೀರ್ಯದ ಕಲೆಗೆ ಸಂಬಂಧಿಸಿರುತ್ತದೆ. ಇನ್ನು ದೈಹಿಕ ಮತ್ತು ಸಂತ್ರಸ್ತೆಯ ಜನನಾಂಗದ ಪರೀಕ್ಷೆ ಬಗ್ಗೆ ಯಾವುದೇ ವರದಿ ನೀಡಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದೆ.