ಬೆಂಗಳೂರು(ಮೇ.17): ಪಾದರಾಯನಪುರ, ಹೊಂಗಸಂದ್ರದ ಬಳಿಕ ಇದೀಗ ಶಿವಾಜಿನಗರ ಅತ್ಯಂತ ಹೆಚ್ಚು ಸೋಂಕಿರು ಕಾಣಿಸಿಕೊಂಡ ಪ್ರದೇಶವಾಗಿದ್ದು, ಶನಿವಾರ ಹೊಸದಾಗಿ 14 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಶಿವಾಜಿನಗರದ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ಕ್ವಾರಂಟೈನ್‌ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೌಸ್‌ ಕೀಪಿಂಗ್‌ ಸಿಬ್ಬಂದಿಗೆ (653ನೇ ಸೋಂಕಿತ) ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಆತನಿಂದ ಇದೀಗ ಶಿವಾಜಿನಗರದ 29 ಮಂದಿಗೆ ಕೊರೋನಾ ಸೋಂಕು ಹರಡಿದೆ. ಹೌಸ್‌ ಕೀಪಿಂಗ್‌ ಸಿಬ್ಬಂದಿ ಜೊತೆಗೆ ಸಂಪರ್ಕದಲ್ಲಿದ್ದ ಒಟ್ಟು 105 ಮಂದಿ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅದರಲ್ಲಿ ಮೇ 8 ರಂದು 4 ಮಂದಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಶುಕ್ರವಾರ 11 ಮಂದಿಗೆ ಸೋಂಕು ಉಂಟಾಗಿದ್ದು, ಶನಿವಾರ ಮತ್ತೆ 14 ಮಂದಿಗೆ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ನಿನ್ನೆ 36 ಮಂದಿಗೆ ಕೊರೋನಾ, ಒಬ್ಬನಿಂದಲೇ 14 ಜನರಿಗೆ ಸೋಂಕು!

ನಿನ್ನೆ 20 ಮಂದಿ ಪರೀಕ್ಷೆ:

ಸೋಂಕಿತ ಹೌಸ್‌ ಕೀಪಿಂಗ್‌ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮತ್ತು ಪರೋಕ್ಷ ಸಂಪರ್ಕಿತ 91 ಜನರನ್ನು ಹಂತ ಹಂತವಾಗಿ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಶನಿವಾರ ಮತ್ತೆ 20 ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದೇ ಕಟ್ಟಡದಲ್ಲಿ ಇರುವವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ, ರಾರ‍ಯಂಡಮ್‌ ಪದ್ಧತಿಯಲ್ಲಿ ಇತರರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಶಿವಾಜಿನಗರ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿವಾಜಿನಗರದಲ್ಲಿ ಸೋಂಕಿತನೊಂದಿಗೆ ಸಂಪರ್ಕದಲ್ಲಿ ಇರುವ ಎಲ್ಲರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಶಿವಾಜಿನಗರದ ಜನ ಸೋಂಕು ಸಮುದಾಯ ಹರಡಿದೆ ಎಂದು ಆತಂಕಕ್ಕೆ ಒಳಗಾಗಬೇಕಾಗಿಲ್ಲ.

- ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಎಸಿ ರೂಂನಲ್ಲಿ ಕುಳಿತು ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸರಿಯಲ್ಲ: ಸೋನು ಸೂದ್!

ಸೋಂಕಿತರ ಸಂಖ್ಯೆ 216ಕ್ಕೆ ಏರಿಕೆ

ಶಿವಾಜಿನಗರದಲ್ಲಿ ಶನಿವಾರ ಹೊಸದಾಗಿ 14 ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ಬೆಂಗಳೂರಿನ ಸೋಂಕಿತ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.

ಶಿವಾಜಿನಗರ ಹೊರತು ಪಡಿಸಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ ಯಾವುದೇ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. 14 ಮಂದಿ ಕೊರೋನಾ ಸೋಂಕಿತರು ಶನಿವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ನಗರದಲ್ಲಿ ಗುಣಮುಖರಾದ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. 93 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಂಟೈನ್ಮೆಂಟ್‌ ವಾರ್ಡ್‌ 19ಕ್ಕೆ ಇಳಿಕೆ:

ಪಶ್ಚಿಮ ವಲಯದ ಜಗಜೀವನರಾಂ ನಗರ ವಾರ್ಡ್‌ನಲ್ಲಿ ಕಳೆದ 21 ದಿನಗಳಿಂದ ಯಾವುದೇ ಹೊಸ ಸೋಂಕಿತರು ಕಂಡುಬರದ ಕಾರಣ ಈ ವಾರ್ಡ್‌ನ್ನು ಕಂಟೈನ್ಮೆಂಟ್‌ ಪಟ್ಟಿಯಿಂದ ಕೈ ಬಿಡಲಾಗಿದೆ. ಇದರೊಂದಿಗೆ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ 19ಕ್ಕೆ ಇಳಿಕೆಯಾಗಿದೆ.