ಬೆಂಗಳೂರು(ಮಾ.30): ಲಾಕ್‌ಡೌನ್‌ನಿಂದಾಗಿ ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್‌ ಆಗಿರುವುದರಿಂದ ಕೆಲ ಮದ್ಯವ್ಯಸನಿಗಳು ತೀವ್ರ ಹತಾಶೆಗೊಳಗಾಗಿದ್ದು, ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಸೇರಿ ಶನಿವಾರ ರಾತ್ರಿಯಿಂದೀಚೆಗೆ ರಾಜ್ಯದಲ್ಲಿ ಒಟ್ಟು ಏಳು ಮಂದಿ ಮದ್ಯಪಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೀದರ್‌ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಉಡುಪಿ ಜಿಲ್ಲೆ ಕುಂದಾಪುರ ಮೂಲದ ಹೋಟೆಲ್‌ ಕಾರ್ಮಿಕ ಭಾಸ್ಕರ್‌ (40) ಬಾವಿಗೆ ಹಾರಿದ್ದು, ಹಾಸನ ಜಿಲ್ಲೆಯ ಶಾಂತಿಗ್ರಾಮದ ಕೂಲಿ ಕಾರ್ಮಿಕ ಎಚ್‌.ವಿ.ಶಶಿಕುಮಾರ್‌ (32) ಊರಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಹೊಸೂರಿನಲ್ಲಿ ವಾಚ್‌ಮ್ಯಾನ್‌ ಕೆಲಸ ಮಾಡುತ್ತಿದ್ದ ಉಮೇಶ ಹಡಪದ(46) ಬಾರ್‌ಗಳು ಬಾಗಿಲು ತೆರೆಯುತ್ತಿಲ್ಲ, ಮದ್ಯಸಿಗುತ್ತಿಲ್ಲ ಎಂಬ ಹತಾಶೆಯಿಂದ ಖಿನ್ನತೆಗೊಳಗಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಡಬದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಡಿಂಬಾಳದ ಗಾಣದಕೆರೆ ನಿವಾಸಿ ಥಾಮಸ್‌ (70) ಮನೆ ಸಮೀಪ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಂಟ್ರದ ರಬ್ಬರ್‌ ತೋಟದಲ್ಲಿ ಕೆಲಸ ಮಾಡುತ್ತಿದ್ದ ಟೋನಿ ಥಾಮಸ್‌ ತಾವು ಉಳಿದುಕೊಂಡಿದ್ದ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಲ್ಲದೆ, ನೆರೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಟಯರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್‌(37) ಹಾಗೂ ಉಡುಪಿ ಜಿಲ್ಲೆಯ ಕಾಪುಪಡು ಗ್ರಾಮದ ಮೀನುಗಾರ ಶಶಿಧರ ಸುವರ್ಣ(46) ಕೂಡ ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕತ್ತು ಕುಯ್ದುಕೊಂಡ: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿಕ್ಕದಾಳವಟದಲ್ಲಿ ಹನುಮಂತಪ್ಪ(47) ಎಂಬ ವ್ಯಕ್ತಿ ನಾಲ್ಕು ದಿನಗಳಿಂದ ಮದ್ಯಕ್ಕಾಗಿ ಪರಿಚಿತರ ಬಳಿ ಅಂಗಲಾಚಿ ಕೊನೆಗೆ ಭಾನುವಾರ ತಮ್ಮ ಕತ್ತನ್ನು ತಾವೇ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಏ.15ರ ವರೆಗೆ ಮದ್ಯ ಸಿಗದಿದ್ದರೆ ಬದುಕುವುದು ಕಷ್ಟಎಂದು ಹೇಳಿಕೊಂಡು ತಿರುಗುತ್ತಿದ್ದ ಎನ್ನಲಾಗಿದೆ.

ಕೆಲವರಿಗೆ ಹಾಲಿನಷ್ಟೇ ಮುಖ್ಯ, ಮದ್ಯ ನೀಡಿ

ರಾಜ್ಯದಲ್ಲಿ ಮದ್ಯ ಸಿಗದ ಹತಾಶೆಯಿಂದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ನಡುವೆಯೇ ಕೊಡಗು ಜಿಲ್ಲೆಯ ನಾಪೋಕ್ಲು ನಿವಾಸಿ ಕಿರಣ್‌ ಕಾರ್ಯಪ್ಪ ಎಂಬವರು ಮದ್ಯದಂಗಡಿಗಳ ಬಾಗಿಲು ತೆಗೆಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೆಲವರಿಗೆ ಹಾಲಿನಷ್ಟೆಮದ್ಯವೂ ಮುಖ್ಯ. ಅಲ್ಲದೆ, ಮದ್ಯ ಸೇವಿಸುವ ಅಭ್ಯಾಸ ಇರುವ ಹಿರಿಯರಿಗೆ ಮದ್ಯ ಸಿಗದಿದ್ದರೆ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.