Asianet Suvarna News

ಕೊರೋನಾಗೆ ಬೇಕು ಮಾನವೀಯತೆಯ ಮದ್ದು!

ಕೊರೋನಾಗೆ ಬೇಕು ಮಾನವೀಯತೆಯ ಮದ್ದು| ಇದು ಸದ್ಯಕ್ಕೆ ಶಮನ ಆಗುವಂತೆ ಕಾಣುತ್ತಿಲ್ಲ| ಕೊರೋನಾ ವಿರುದ್ಧ ಹೋರಾಟದಲ್ಲಿ ಆದ ತಪ್ಪು ಸರಿಪಡಿಸಲು ಇದು ಸಕಾಲ| ಕೊರೋನಾ ಕುರಿತು ಸಿದ್ದರಾಮಯ್ಯ ಲೇಖನ

Coronavirus Needs The Medicine Of Humanity A Write up By Former CM Siddaramaiah
Author
Bangalore, First Published May 12, 2020, 8:10 AM IST
  • Facebook
  • Twitter
  • Whatsapp

ಸಿದ್ದರಾಮಯ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕರು.

ಆಧುನಿಕ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೋನ ಸದ್ಯಕ್ಕೆ ಶಮನವಾಗುವಂತೆ ಕಾಣುತ್ತಿಲ್ಲ. ಸಾಂಕ್ರಾಮಿಕ ಕಾಯಿಲೆಗಳ ವಿಚಾರದಲ್ಲಿ ಕಳೆದ ಮೂರು ಸಾವಿರ ವರ್ಷಗಳಿಂದ ಅಪಾರ ಹಾನಿಗೊಳಗಾಗಿರುವ ಮನುಷ್ಯ ಸಮುದಾಯಕ್ಕೆ ಕೊರೋನ ಹಲವು ರೀತಿಯ ಸಂದೇಶಗಳನ್ನು ಒಟ್ಟಿಗೆ ನೀಡುತ್ತಿದೆ.

ದೀರ್ಘ ಕಾಲದ ಸಂಕಟಗಳು ಮನುಷ್ಯನನ್ನು ಹೆಚ್ಚು ಮಾನವೀಯಗೊಳಿಸಬೇಕು. ಜಾತಿ, ಧರ್ಮ, ಭಾಷೆ, ದೇಶಗಳ ನಡುವೆ ಸಂಘರ್ಷಗಳನ್ನು ಇಲ್ಲವಾಗಿಸಿ, ಪರಸ್ಪರ ಕರುಣೆ, ಪ್ರೀತಿ ಮತ್ತು ಸಹಕಾರ ಮನೋಭಾವಗಳಿಂದ ಒಟ್ಟಿಗೆ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಆದರೆ ಕೆಲವು ಮನುಷ್ಯ ವಿರೋಧಿ ಶಕ್ತಿಗಳು ಉರಿವ ಬೆಂಕಿಗೆ ತುಪ್ಪ ಸುರಿಯಲು ನೋಡುತ್ತಿದ್ದಾರೆ.

ಆದರೆ ಬೆಂಕಿ ಹಚ್ಚಿದವನು, ಅದಕ್ಕೆ ತುಪ್ಪ ಸುರಿದವನು, ಉರಿವ ಮನೆಯಿಂದ ಗಳ ಹಿರಿದವನು ಯಾರೂ ಸಹ ಈ ಗಂಡಾಂತರದಿಂದ ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ. ಮನುಷ್ಯರೆಲ್ಲರಿಗೆ ಕೊರೋನಾ ಸೋಂಕು ಬರದೇ ಹೋಗಬಹುದು. ಆದರೆ ಈ ಸೋಂಕು ಉಂಟು ಮಾಡುವ ಪರಿಣಾಮಗಳಿಂದ ಮಾತ್ರ ಯಾರಿಗೂ ಬಿಡುಗಡೆಯಿಲ್ಲ.

ಕೊರೋನಾ ನಿರ್ವಹಣೆ, ದೇಶದಲ್ಲೇ ಯಡಿಯೂರಪ್ಪ ನಂ.2!

ಕಳೆದ ವರ್ಷದ ನವೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್‌-19 ಎಂಬ ವೈರಸ್ಸು ಕೇವಲ ನಾಲ್ಕು ತಿಂಗಳಲ್ಲಿ ವಿಶ್ವದ ಬಹುತೇಕ ಭಾಗವನ್ನು ಆವರಿಸಿದೆ. ರೋಗ ಕಾಣಿಸಿಕೊಂಡ ಕೇವಲ ಎರಡು ವಾರಗಳಲ್ಲಿ ಚೀನಾ ವೈರಸ್ಸಿನ ಮೂಲ, ಅದರ ತೀವ್ರತೆ ಮತ್ತು ಹಾನಿಕಾರಕ ಶಕ್ತಿಯನ್ನು ಪತ್ತೆ ಹಚ್ಚಿ ಲಾಕ್‌ ಡೌನ್‌ನಂತಹ ಸಾಮೂಹಿಕ ದಿಗ್ಬಂಧನದ ಸೂತ್ರಗಳನ್ನು ಅಳವಡಿಸಿಕೊಂಡು ಇದ್ದುದರಲ್ಲಿ ಪರಿಣಾಮಕಾರಿಯಾಗಿ ನಿಭಾಯಿಸಿತು.

ಜೊತೆಗೆ ಮನುಷ್ಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಜನರು ವೈದ್ಯರು, ವಿಜ್ಞಾನಿಗಳು ಹೇಳುವ ಮಾತುಗಳನ್ನು ಕೇಳಲಾರಂಭಿಸಿದ್ದಾರೆ. ಕ್ರಿ.ಪೂ. 4ನೇ ಶತಮಾನದಲ್ಲಿ ಗ್ರೀಕ್‌ನಲ್ಲಿ ಸಂಭವಿಸಿದ ಪ್ಲೇಗಿನಿಂದ ಹಿಡಿದು ಈವರೆಗೆ ಸುಮಾರು 50 ಕೋಟಿಗಳಿಗಿಂತ ಹೆಚ್ಚು ಜನ ಈ ರೀತಿಯ ಸೋಂಕುಗಳಿಂದಾಗಿ ಮೃತಪಟ್ಟಿದ್ದಾರೆ. ಆದರೆ ಹಿಂದೆಂದೂ ಇಲ್ಲದ ರೀತಿಯಲ್ಲಿ ಮೊದಲ ಬಾರಿಗೆ ಜನ ವೈಜ್ಞಾನಿಕ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ವೈಜ್ಞಾನಿಕ ತಿಳಿವಳಿಕೆ ಇಲ್ಲದ ಕಾರಣಕ್ಕೆ 14 ನೇ ಶತಮಾನದ ಬ್ಯುಬೋನಿಕ್‌ ಪ್ಲೇಗಿನಲ್ಲಿ ಸುಮಾರು 20 ಕೋಟಿ ಜನ ಸತ್ತ ಉದಾಹರಣೆ ಇದೆ. 1918 ರ ಇನ್‌ಫ್ಲುಯೆಂಜಾದಲ್ಲಿ ಸುಮಾರು ಐದು ಕೋಟಿ ಜನ ಸತ್ತಿದ್ದರು.

ಸಂಕಷ್ಟದ ನಡುವೆ ದೇಶಕ್ಕೇ ಮಾದರಿ ಆಗುವ ಕೆಲಸ: ಬಿಎಸ್‌ವೈ ಹೊಗಳಿದ ಸಿದ್ದು, ಡಿಕೆಶಿ!

ನಿರ್ಲಕ್ಷ್ಯ, ಮೌಢ್ಯ ಮನೋಭಾವನೆಯಿಂದ ಸಂಪೂರ್ಣ ಹೊರಬಂದು ಜಾತಿ, ಧರ್ಮ, ರಾಷ್ಟ್ರಗಳ ನಡುವೆ ಪರಸ್ಪರ ಪ್ರೀತಿ, ಸಹಕಾರ ಮನೋಭಾವನೆಯಿಂದ ಸೋಂಕಿನ ವಿರುದ್ಧ ಹೋರಾಡಿದರೆ ಕಷ್ಟದಿಂದ ಬಹಳ ಬೇಗ ಪಾರಾಗಬಹುದು. ಇದನ್ನು ಸಮರ್ಥವಾಗಿ ನಿಭಾಯಿಸಬೇಕಾದರೆ ಆಳುವ ಸರ್ಕಾರಗಳು ಮತ್ತು ಮಾಧ್ಯಮಗಳು ಕ್ರಿಯಾಶೀಲ ಪಾತ್ರವನ್ನು ವಹಿಸಬೇಕು. ಸರ್ಕಾರಗಳು ತಪ್ಪು ಹೆಜ್ಜೆಗಳನ್ನಿಟ್ಟಾಗಲೂ ತಪ್ಪು ಎಂದು ಹೇಳದೆ ಸರ್ಕಾರದ ನಡೆಯನ್ನು ಸಂಪೂರ್ಣ ಸಮರ್ಥಿಸತೊಡಗಿದರೆ ಸಂಕಷ್ಟಕ್ಕೆ ಸಿಲುಕಿಕೊಂಡ ಜನರನ್ನು ರಕ್ಷಿಸುವವರು ಯಾರು? ಬೇರೆಲ್ಲ ದೇಶಗಳಿಗಿಂತ ನಮ್ಮಲ್ಲಿ ಈ ಸಮಸ್ಯೆ ತೀವ್ರವಾಗಿದೆ.

ಜ.30ರಂದೇ ಸರ್ಕಾರ ಎಚ್ಚರ ಆಗಬೇಕಿತ್ತು:

ಚೀನಾ ಸಮರೋಪಾದಿಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿದ್ದುದನ್ನು ನಾವು ನೋಡುತ್ತಿದ್ದೆವು. ಜನವರಿ 30ರಂದು ಮೊದಲ ಸೋಂಕಿನ ಪ್ರಕರಣ ನಮ್ಮ ದೇಶದಲ್ಲಿ ದಾಖಲಾಯಿತು. ಕೂಡಲೆ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಜನರನ್ನು ಮೊದಲೇ ಮಾನಸಿಕವಾಗಿ ಸಜ್ಜಗೊಳಿಸಿದ್ದರೆ ದೇಶ ಸಂಪೂರ್ಣ ಸುರಕ್ಷಿತವಾಗಿರುತಿತ್ತು. ಜನವರಿ 30 ರಿಂದ ಮಾಚ್‌ರ್‍ 20 ರವರೆಗೆ ಸಿಕ್ಕಿದ್ದ ಅಮೂಲ್ಯ ಸಮಯವನ್ನು ಬಳಸಿಕೊಳ್ಳದೆ ಕೇಂದ್ರ ಸರ್ಕಾರವು ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿತು. ಈ ಒಂದೂವರೆ ತಿಂಗಳ ಅವಧಿಯಲ್ಲಿ ಹಲವು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಯಿತು. ಟ್ರಂಪ್‌ ಸ್ವಾಗತ ಸಮಾವೇಶಗಳು, ತಬ್ಲೀಘಿ ಕಾರ್ಯಕ್ರಮ, ಹಲವು ಹಾಡುಗಾರಿಕೆ ಕಾರ್ಯಕ್ರಮಗಳು ಮುಂತಾದವು ನಡೆದವು. ಈ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದಿತ್ತು. ಅಂತಾರಾಷ್ಟ್ರೀಯ ವಿಮಾನಗಳೂ ಎಗ್ಗಿಲ್ಲದೆ ಸೋಂಕಿದ್ದ ದೇಶಗಳಿಂದ ಓಡಾಡಿದವು.

ಸಿಎಂ ಮುಂದೆ ಹತ್ತಾರು ಬೇಡಿಕೆಗಳನ್ನಿಟ್ಟ ವಿರೋಧ ಪಕ್ಷಗಳ ನಿಯೋಗ

ಇದರಿಂದಾಗಿ ಕೊರೋನ ಸೋಂಕು ಎಲ್ಲೆಡೆ ವ್ಯಾಪಿಸಿಕೊಂಡಿತು. ಬದಲಾಗಿ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಿರದಿದ್ದರೆ, ಸಿಕ್ಕ ಅಮೂಲ್ಯ ಸಮಯದಲ್ಲಿ ಟೆಸ್ಟ್‌ ಕಿಟ್‌, ಪಿಪಿಇ ಕಿಟ್‌ ಮುಂತಾದ ಸಲಕರಣೆಗಳನ್ನು ಸಂಗ್ರಹಿಸಿಕೊಂಡಿದ್ದರೆ, ಹೆಚ್ಚು ಲ್ಯಾಬ್‌ಗಳು, ಸುರಕ್ಷಿತ ಆಸ್ಪತ್ರೆಗಳು, ಮಾನಸಿಕವಾಗಿ ಸದೃಢರಾದ ನುರಿತ ವೈದ್ಯರು, ದಾದಿಯರನ್ನು ಸಜ್ಜುಗೊಳಿಸಿಕೊಂಡಿದ್ದರೆ ಈ ಪ್ರಮಾಣದ ಹಾನಿಯಾಗುತ್ತಿತ್ತೆ?

ಇದನ್ನು ಪ್ರಾಮಾಣಿಕವಾಗಿ ವರದಿ ಮಾಡಬೇಕಾಗಿದ್ದ ಕೆಲವು ಮಾಧ್ಯಮಗಳು ಭೀತಿ-ದ್ವೇಷ ಉಂಟು ಮಾಡುವ ವರದಿಗಳನ್ನು ಮಾಡಿದವು. ಹೌದು ತಪ್ಪಾಗಿದೆ, ಇನ್ನು ಮುಂದೆ ಎಲ್ಲರೂ ಕೂಡಿ ಗಂಡಾಂತರವನ್ನು ಎದುರಿಸೋಣ ಎಂದು ಹೇಳಿ ಸರ್ವರೊಡಗೂಡಿ ಮುನ್ನಡೆಯಬೇಕಾಗಿದ್ದ ಕೇಂದ್ರ ರಾಜ್ಯ ಸರ್ಕಾರಗಳ ಅನೇಕ ಪ್ರತಿನಿಧಿಗಳೂ ಒಡಕು ಹುಟ್ಟಿಸಿ, ದ್ವೇಷ ಬಿತ್ತುವ ಕೆಲಸ ಮಾಡಿದರು. ತಪ್ಪಾಗಿದ್ದೆಲ್ಲಿ ಎಂಬುದನ್ನು ಅರಿತುಕೊಳ್ಳಲಿಲ್ಲ.

ಎಲ್ಲ ನಾಶವಾಯಿತು:

ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವು ಎಷ್ಟೆಲ್ಲ ಅನಾಹುತಗಳಿಗೆ ಕಾರಣವಾಗಿದೆ ಎಂಬುದು ಈಗ ಅರಿವಿಗೆ ಬರುತ್ತಿದೆ. ಸರ್ಕಾರಗಳಿಗೂ ತಾನು ಮಾಡಿದ ತಪ್ಪಿನ ಅರಿವಾಗುತ್ತಿದೆ. ರೈತರು ಬೆಳೆದದ್ದೆಲ್ಲ ನಾಶವಾಯಿತು. ಕುಶಲಕರ್ಮಿ ಜಾತಿಗಳು, ಅಲೆಮಾರಿ ಸಮುದಾಯಗಳು, ಚಾಲಕರು, ಸಂಘಟಿತ/ಅಸಂಘಟಿತ ವಲಯಗಳ ಕಾರ್ಮಿಕರು, ಸಣ್ಣ ಪುಟ್ಟವ್ಯಾಪಾರಿಗಳು ಮುಂತಾದವರು ದುಡಿಮೆ ಇಲ್ಲದೆ ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಾರ್ಮಿಕರುಗಳು ನೂರಾರು ಕಿ.ಮೀ ನಡೆದೇ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾರ್ಗ ಮಧ್ಯದಲ್ಲಿ ಅಪಘಾತ, ಹಸಿವುಗಳಿಂದ ಮಡಿದ ಕಾರ್ಮಿಕರ ಸಂಖ್ಯೆಯೇನು ಕಡಿಮೆಯಿದೆಯೇ? ಇದು ನಾಗರಿಕ ಹಕ್ಕುಗಳ, ಮಾನವ ಹಕ್ಕುಗಳ ಸ್ಪಷ್ಟಉಲ್ಲಂಘನೆಯಲ್ಲವೆ? ಬೆವರು, ರಕ್ತ ಸುರಿಸಿ ಈ ದೇಶವನ್ನು ಕಟ್ಟಿದ ಕಾರ್ಮಿಕರನ್ನು ನಡೆಸಿಕೊಳ್ಳುತ್ತಿರುವ ಕ್ರಮ ಮಾನವೀಯವಾಗಿದೆಯೆ? ಸರ್ಕಾರಗಳಿಗೆ ಇರಬೇಕಾದ ತಾಯ್ತನದ ಹೃದಯದ ಬದಲಾಗಿ ಯಾಕಿಷ್ಟೊಂದು ಕ್ರೌರ್ಯವಿದೆ?

ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್‌ನಿಂದ 1 ಕೋಟಿ ರೂ.!

ಲಾಕ್‌ ಡೌನ್‌ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳಿಗೆ ನಾವು ಸ್ಪಂದಿಸಿದೆವು. ಸರ್ಕಾರದ ಕ್ರಮಗಳಿಗೆ ಬೆಂಬಲ ನೀಡಿದೆವು. ಆದರೆ ಜನ ಅನಾಥರಾದಾಗ ಅನಿವಾರ್ಯವಾಗಿ ಆ ಜನರ ಜೊತೆ ನಿಲ್ಲಲೇಬೇಕಾಯಿತು. ಹಲವಾರು ದುಡಿಯುವ ಸಂಘಟನೆಗಳ ಜೊತೆ ದೀರ್ಘ ಸಭೆಗಳನ್ನು ನಡೆಸಿದೆವು. ಇದರ ಪರಿಣಾಮವಾಗಿ ಸರ್ಕಾರ ಕೆಲವು ಸಮುದಾಯಗಳಿಗೆ ಮಾತ್ರ ಸಣ್ಣ ಮಟ್ಟದ ಪ್ಯಾಕೇಜನ್ನು ಘೋಷಿಸಿದೆ. ಸವಿತಾ ಸಮಾಜ, ಮಡಿವಾಳ ವೃತ್ತಿ ಮಾಡುವ ಸಮುದಾಯಗಳಲ್ಲಿ ಲೈಸೆನ್ಸು ಪಡೆದು ವೃತ್ತಿ ಮಾಡುವವರಿಗೆ ಮಾತ್ರ ಪರಿಹಾರ ನೀಡಲು ಕ್ರಮ ವಹಿಸುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ.

ಕ್ಷಾೌರದಂತಹ ಶ್ರೇಷ್ಠ ಕೆಲಸ ಮಾಡುವ ಮಾಲೀಕನಿಗೆ ಪರಿಹಾರ ಕೊಟ್ಟು, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡದಿದ್ದರೆ ಬಹುದೊಡ್ಡ ಅನ್ಯಾಯ ಉಂಟಾಗುತ್ತದೆ. ಹಾಗೆಯೇ ಧೋಬಿ, ಆಟೋ, ಟ್ಯಾಕ್ಸಿ ಡ್ರೈವರು, ಸಹಾಯಕರಿಗೂ ಇದೇ ರೀತಿ ಅನ್ಯಾಯವಾಗುತ್ತಿದೆ. ರೈತರಿಗೆ, ಉಳಿದ ದುಡಿವ ಸಮುದಾಯಗಳಿಗೆ, ಅಲೆಮಾರಿ ಸಮುದಾಯಗಳಿಗೆ ಇನ್ನೂ ಸಹ ಬಿಡಿಗಾಸಿನ ಪರಿಹಾರವನ್ನೂ ಘೋಷಿಸಿಲ್ಲ. ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವಲ್ಲಿಯೂ ಸರ್ಕಾರ ಅತ್ಯಂತ ಅರಾಜಕವಾಗಿ ಮತ್ತು ಅಮಾನವೀಯವಾಗಿ ವರ್ತಿಸಿತು. ಸರ್ಕಾರದ ಸಚಿವರು, ಅಧಿಕಾರಿಗಳ ಮಟ್ಟದಲ್ಲಿ ಹೊಂದಾಣಿಕೆ ಇಲ್ಲ. ಅದಕ್ಕಾಗಿಯೇ ಕಾರ್ಮಿಕರಿಂದ ಮೂರು ಪಟ್ಟು ಬಸ್‌ ದರ ವಸೂಲಿಯಂತಹ ಕೆಟ್ಟನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.

ಕೊರೋನಾ ಸಂಕಷ್ಟಶುರುವಾಗುವ ಮೊದಲೆ ಭಾರತದ ಆರ್ಥಿಕತೆ ನೆಲಕಚ್ಚಿಹೋಗಿತ್ತು. ಜಿ.ಡಿ.ಪಿ. ಬೆಳವಣಿಗೆ ದರ ಸುಮಾರು ಶೇ 3.5 ರ ಆಸುಪಾಸಿಗೆ ಕುಸಿದಿತ್ತು. ಇದರ ಮೇಲೆ ಕೊರೋನಾ ಅಪ್ಪಳಿಸಿದೆ. ಹಾಗಾಗಿ ಆರ್ಥಿಕತೆ ಇನ್ನಷ್ಟುಛಿದ್ರವಾಗುತ್ತಿದೆ. ಈಗ ದೇಶದ ಮುಂದೆ ಇರುವ ದಾರಿ ಒಂದೆ, ಜನರಲ್ಲಿ ಹಣ ಇರುವಂತೆ ನೋಡಿಕೊಂಡು ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿ ಆರ್ಥಿಕತೆಯನ್ನು ಜೀವಂತಗೊಳಿಸಬೇಕು. ದೇಶದ ಶೇ. 60ರಷ್ಟುಜನ ಈಗ ಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಅವರ ಕೈಗೆ ಹಣ ಬಂದಾಗ ಕೊಳ್ಳುವ ಶಕ್ತಿ ತಾನಾಗಿಯೇ ಅವರಿಗೆ ಬರುತ್ತದೆ. ಇದಕ್ಕೆ ಪೂರಕವಾದ ಆರ್ಥಿಕ ಚಟುವಟಿಕೆಗಳು ನಡೆಯಬೇಕು.

ಇದಕ್ಕಾಗಿ ನರೇಗಾ ಮುಂತಾದ ಯೋಜನೆಗಳಿಗೆ ಕನಿಷ್ಠ ಹತ್ತು ಪಟ್ಟು ಅನುದಾನವನ್ನು ಹೆಚ್ಚಿಸಿ ಗ್ರಾಮೀಣ ಆರ್ಥಿಕತೆಯನ್ನು ಜೀವಂತಗೊಳಿಸಬೇಕು. ಜೊತೆಗೆ ಎಲ್ಲ ದುಡಿಯುವ ವರ್ಗಗಳಿಗೆ ಉತ್ತಮ ರೀತಿಯ ಪರಿಹಾರ ನೀಡಿ ಜನರನ್ನೂ ದೇಶವನ್ನೂ ರಕ್ಷಿಸಬೇಕಾಗಿದೆ. ವಿರೋಧ ಪಕ್ಷವಾಗಿ ನಾವು ಬರಿ ಟೀಕೆಗಳನ್ನು ಮಾಡಿಲ್ಲ. ಆರ್ಥಿಕ ಮೂಲಗಳ ಬಗೆಗೆ ಸಹ ಸಲಹೆಗಳನ್ನು ನೀಡಿದ್ದೇವೆ.

ಮಾಸ್ಕ್‌ ಧರಿಸದೇ ಮಾಜಿ ಸಿಎಂ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ ನಟಿ ಟ್ರೋಲ್!

ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟುಹೆಚ್ಚಬಹುದು. ಹಾಗಾಗಿ ಸರ್ಕಾರ, ಮಾಧ್ಯಮಗಳು ಹೆಚ್ಚು ಮಾನವೀಯವಾಗಿ, ವೈಜ್ಞಾನಿಕವಾಗಿ ವರ್ತಿಸಬೇಕು. ಜನರು ಜೀವಿಸಲು ಬೇಕಾದ ಅನ್ನ, ಆಹಾರದ ಕಿಟ್‌ಗಳು, ಔಷಧ ಮುಂತಾದವುಗಳಿಗೆ ಕೊರತೆ ಇಲ್ಲದಂತೆ ಸರ್ಕಾರಗಳು ನೋಡಿಕೊಳ್ಳಬೇಕು. ರೈತರು ಬೆಳೆದ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಿಸುವ ವ್ಯವಸ್ಥೆ ಮಾಡಬೇಕು. ರೈತರಿಗೆ, ದುಡಿಯುವ ವರ್ಗಕ್ಕೆ, ಕುಶಲ ಕರ್ಮಿ,ಅಲೆಮಾರಿ ಸಮುದಾಯಗಳಿಗೆ ಸಮಂಜಸವಾದ, ವೈಜ್ಞಾನಿಕವಾದ ಪ್ಯಾಕೇಜುಗಳನ್ನು ನೀಡಿ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ ರಾಜ್ಯವನ್ನು ಕಾಪಾಡಬೇಕು. ಕೊರೋನಾ ಎಂಬ ಮಹಾಮಾರಿ ಬಗ್ಗೆ ಜನರೂ ಉದಾಸೀನ ಮಾಡುವಂತಿಲ್ಲ. ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಕಾಪಾಡುವ ಮೂಲಕ ಸೋಂಕಿನಿಂದ ದೂರ ಉಳಿಯವ ಕೆಲಸ ಮಾಡಬೇಕು. ಜನರು ಸಹ ಹೆಚ್ಚು ವೈಜ್ಞಾನಿಕವಾಗಿ ವರ್ತಿಸುವ ಮೂಲಕ ಸೋಂಕನ್ನು ನಿಯಂತ್ರಣಕ್ಕೆ ತರಲು ಶ್ರಮಿಸಬೇಕು.

"

Close

Follow Us:
Download App:
  • android
  • ios