ಬೆಂಗಳೂರು(ಏ.01): ರಾಜ್ಯದ 14 ಸಹಕಾರಿ ಹಾಲು ಒಕ್ಕೂಟಗಳು ರೈತರಿಂದ ದಿನಕ್ಕೆ ಎರಡು ಬಾರಿ ತಪ್ಪದೇ ಗುಣಮಟ್ಟದ ಹಾಲು ಖರೀದಿ ಮಾಡಬೇಕೆಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌) ಸೂಚನೆ ನೀಡಿದೆ.

ಸೋಮವಾರ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಕೋವಿಡ್‌-19ರ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಸಭೆಯ ನಂತರ ಮಾತನಾಡಿದ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಪಶು ಆಹಾರಕ್ಕೆ ಫೆಬ್ರವರಿ ಮತ್ತು ಮಾಚ್‌ರ್‍ ತಿಂಗಳಲ್ಲಿ ಪ್ರತಿ ಟನ್‌ ಪಶು ಆಹಾರಕ್ಕೆ 500 ರು.ನಂತೆ ನೀಡಿದ ರಿಯಾಯಿತಿಯನ್ನು ಏಪ್ರಿಲ್‌ ತಿಂಗಳ ಅಂತ್ಯದವರೆಗೂ ವಿಸ್ತರಿಸಲು ನಿರ್ಧರಿಸಲಾಯಿತು. ಹಾಗೆಯೇ ಲಾಕ್‌ಡೌನ್‌ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವರು ಕರ್ತವ್ಯ ನಿರ್ವಹಿಸುವ ಪ್ರತಿ ದಿನ ಒಂದು ದಿನದ ಹೆಚ್ಚುವರಿ ವೇತನ ನೀಡಲು ಅಥವಾ ಪರಿಹಾರ ರಜೆಯನ್ನು ಈ ವರ್ಷದ ಅಂತ್ಯದೊಳಗೆ ಪಡೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರು. ದೇಣಿಗೆ ನೀಡುವುದಾಗಿ ಅವರು ತಿಳಿಸಿದರು.

ನಿತ್ಯ 8 ಲಕ್ಷ ಲೀಟರ್‌ ಹಾಲು ಮಾರಾಟವಾಗ್ತಿಲ್ಲ!

ಗುತ್ತಿಗೆ ನೌಕರರು, ಚಾಲಕರಿಗೆ ಪ್ರತಿದಿನ ಹೆಚ್ಚುವರಿ 500 ರು.

ಕೊರೋನಾ ಸೋಂಕು ಭೀತಿಯ ನಡುವೆಯೂ ಕೆಲಸ ಮಾಡುತ್ತಿರುವ ಕೆಎಂಎಫ್‌ ಗುತ್ತಿಗೆ ನೌಕರರು ಹಾಗೂ ಚಾಲಕರಿಗೆ ಪ್ರತಿ ದಿನ ಪ್ರೋತ್ಸಾಹಧನವಾಗಿ 500 ನೀಡಲಾಗುವುದು ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಿಸಿದ್ದಾರೆ.