ಬೆಂಗಳೂರು[ಮಾ.11]: ರಾಜ್ಯದಲ್ಲಿ ಕೊರೋನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ.20ರಷ್ಟುಕುಸಿತವಾಗಿದೆ.

ಕೆಎಸ್‌ಆರ್‌ಟಿಸಿಯು ರಾಜ್ಯ ಹಾಗೂ ಹೊರರಾಜ್ಯದ ಹಲವು ನಗರಗಳಿಗೆ ಐಷಾರಾಮಿ ಬಸ್‌ ಸೇವೆ ನೀಡುತ್ತಿದೆ. ಪ್ರಯಾಣದ 15 ದಿನಗಳ ಕಾಲ ಮುಂಚಿತವಾಗಿ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ಆದರೆ, ದಿನದಿಂದ ದಿನಕ್ಕೆ ದೇಶಾದ್ಯಂತ ಕೊರೋನಾ ವೈರಸ್‌ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಸ್‌ ಪ್ರಯಾಣಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಿಗಮದ ಐಷಾರಾಮಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಶೇ.20ರಷ್ಟುಕುಸಿತವಾಗಿದೆ. ಇದು ನಿಗಮದ ಆದಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳೆದೊಂದು ವಾರದಿಂದ ತಮಿಳುನಾಡಿನ ಚೆನ್ನೈ, ತೆಲಂಗಾಣದ ಹೈದರಾಬಾದ್‌, ಕೇರಳದ ಕೊಚ್ಚಿನ್‌, ತಿರುವನಂತಪುರ, ಕ್ಯಾಲಿಕಟ್‌, ಕೋಳಿಕ್ಕೋಡ್‌ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರದ ವಿವಿಧ ನಗರಗಳಿಗೆ ಸಂಚರಿಸುವ ನಿಗಮದ ಬಸ್‌ಗಳಿಗೆ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಮುಂಗಡ ಬುಕಿಂಗ್‌ ತೀವ್ರ ಕುಸಿದಿದೆ. ಈ ಕೊರೋನಾ ವೈರಸ್‌ ಭೀತಿ ಕಡಿಮೆಯಾಗುವ ವರೆಗೂ ಪ್ರಯಾಣಿಕರ ಸಂಖ್ಯೆ ವೃದ್ಧಿಸುವ ಸಾಧ್ಯತೆ ಕಡಿಮೆ ಎಂದರು.

ಫ್ಲೈ ಬಸ್‌ಗಳಲ್ಲಿ ಶೇ.15ರಷ್ಟು ಕುಸಿತ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ನಗರಗಳಿಗೆ ಸಂಚರಿಸುವ ಫ್ಲೈ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಶೇ.15ರಷ್ಟುಕುಸಿದಿದೆ. ಇದಕ್ಕೂ ಕಾರಣ ಕೊರೋನಾ ವೈರಸ್‌ ಭೀತಿ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿಗೆ ಉತ್ತಮ ಆದಾಯದ ಮೂಲಗಳಲ್ಲಿ ಒಂದಾಗಿರುವ ಈ ಫ್ಲೈ ಬಸ್‌ಗಳಿಗೆ ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಕೊರೋನಾ ವೈರಸ್‌ ಭಯದಿಂದ ಸಾರ್ವಜನಿಕರು ವಿಮಾನ ಪ್ರಯಾಣವನ್ನು ಮೊಟಕುಗೊಳಿಸುತ್ತಿದ್ದಾರೆ. ಹೀಗಾಗಿ ಫ್ಲೈ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಕುಸಿದಿದೆ.