ಬೆಂಗಳೂರು(ಆ.15): ಕೊರೋನಾ ಸೋಂಕು ರಾಜ್ಯದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಪ್ರಮುಖ ರಾಜಕೀಯ ಪಕ್ಷಗಳು ಕಳಕಳಿಯ ಒಮ್ಮತಾಭಿಪ್ರಾಯ ವ್ಯಕ್ತಪಡಿಸಿವೆ.

ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್‌ಗೆ ತನ್ನ ನಿಲುವನ್ನು ಸರ್ಕಾರ ತಿಳಿಸಬೇಕು ಎಂದು ಚುನಾವಣಾ ಆಯೋಗವು ಮಂಗಳವಾರ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು. ಮುಂದಿನ 2021ನೇ ಸಾಲಿನಲ್ಲಿ ಇತರ ಹಲವು ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ ಗ್ರಾ.ಪಂ. ಸಾರ್ವತ್ರಿಕ ಚುನಾವಣೆಯನ್ನು ಇದೇ ವರ್ಷದ ಅಂತ್ಯದೊಳಗಾಗಿ (ಡಿಸೆಂಬರ್‌ ಒಳಗಾಗಿ) ನಡೆಸುವುದು ಅನಿವಾರ್ಯ ಎಂದು ಆ ಪತ್ರದಲ್ಲಿ ತಿಳಿಸಿತ್ತು.

ಇದರ ಬೆನ್ನಲ್ಲೇ ಸದ್ಯಕ್ಕೆ ಚುನಾವಣೆ ನಡೆಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ರಾಜಕೀಯ ಪಕ್ಷಗಳ ನಾಯಕರು ಹೊಂದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರು ಸದ್ಯಕ್ಕೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂಬ ನಿಲುವಿಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣೆಯನ್ನು ಸದ್ಯಕ್ಕೆ ನಡೆಸುವುದು ಬೇಡ ಎಂಬ ಅಭಿಪ್ರಾಯದೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಮುಖಂಡರು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಕೋವಿಡ್‌ ಸಂಕಷ್ಟದ ಸಮಯದಲ್ಲಿ ವಿಧಾನಸಭೆ, ವಿಧಾನಪರಿಷತ್‌ ಅಥವಾ ಲೋಕಸಭೆಯ ಉಪಚುನಾವಣೆ ನಡೆಸುವುದು ಬೇರೆ. ಕೇವಲ ಗ್ರಾಮೀಣ ಪ್ರದೇಶಗಳೇ ಕೇಂದ್ರೀಕೃತವಾಗಿರುವ ಗ್ರಾಮ ಪಂಚಾಯತಿ ಚುನಾವಣೆ ನಡೆಸುವುದು ಅಷ್ಟುಸುಲಭವಲ್ಲ. ಈ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಗ್ರಾಮೀಣ ಪ್ರದೇಶದ ಜನರು ಗಂಭೀರವಾಗಿ ಸ್ವೀಕರಿಸಲಿದ್ದು, ಇಡೀ ಹಳ್ಳಿಗೆ ಹಳ್ಳಿಗಳೇ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿವೆ. ಅಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡುವುದು ಕಷ್ಟಸಾಧ್ಯ. ಅದನ್ನು ನಿಯಂತ್ರಿಸುವುದಕ್ಕೂ ಸಾಧ್ಯವಿಲ್ಲ. ಹೀಗಾದಲ್ಲಿ ಕೋವಿಡ್‌ ಪ್ರಮಾಣ ಭೀಕರ ಪರಿಸ್ಥಿತಿಗೆ ತಲುಪಬಹುದು. ಅದರ ಬದಲು ಚುನಾವಣೆಯನ್ನು ಸದ್ಯಕ್ಕೆ ನಡೆಸದೆ ಇರುವುದೇ ಸೂಕ್ತ. ಈ ಚುನಾವಣೆ ಮುಂದೂಡುವುದರಿಂದ ಆಡಳಿತದಲ್ಲಿ ಅಂಥ ಪ್ರಮುಖ ವ್ಯತ್ಯಾಸಗಳಾಗಲಿ ಅಥವಾ ಸಮಸ್ಯೆಯಾಗಲಿ ಉಂಟಾಗುವುದಿಲ್ಲ ಎಂದು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ.