ಬೆಂಗಳೂರು(ಜ.23): ಎರಡನೇ ಹಂತದಲ್ಲಿ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡುವ ದೊಡ್ಡ ಸವಾಲು ರಾಜ್ಯದ ಮುಂದಿದೆ. ಈ ಸವಾಲನ್ನು ನಿಭಾಯಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ.

ಎರಡನೇ ಹಂತದಲ್ಲಿ ಕೊರೋನಾ ವಾರಿಯರ್‌ಗಳಾಗಿ ಶ್ರಮಿಸಿದ ಪೊಲೀಸರು, ಶಿಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಾರಿಗೆ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಜನವರಿ 24ರ ಹೊತ್ತಿಗೆ ಈ ಲಸಿಕೆ ಪಡೆಯಲಿರುವ ಕೊರೋನಾ ವಾರಿಯ​ರ್ಸ್‌ಗಳ ಅಂತಿಮ ಅಂಕಿ-ಅಂಶಗಳು ಲಭ್ಯವಾಗುವ ನಿರೀಕ್ಷೆಯಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌ ಗುರುವಾರದ ಅಂತ್ಯಕ್ಕೆ ಒಟ್ಟು 1,38,882 ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕೆಲವೇ ಮಂದಿಗೆ ಸಣ್ಣ ಮಟ್ಟದ ಅಡ್ಡ ಪರಿಣಾಮಗಳಾಗಿವೆ. ಲಸಿಕೆಯ ಅಡ್ಡ ಪರಿಣಾಮದಿಂದಾಗಿ ಯಾರೂ ಮೃತರಾಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಕೊರೋನಾ ಲಸಿಕೆ ಸಂಪೂರ್ಣ ಸುರಕ್ಷಿತ: ಸಚಿವ ಸುಧಾಕರ್‌

ಕೋವಿಶೀಲ್ಡ್‌ ಲಸಿಕೆಯನ್ನು 1,36,882 ಮಂದಿಗೆ ನೀಡಲಾಗಿದೆ. ಉಳಿದ 1,774 ಮಂದಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ.2ರಿಂದ ಶೇ.3.5 ಜನರಿಗೆ ಸ್ವಲ್ಪ ಅಡ್ಡ ಪರಿಣಾಮ ಉಂಟಾಗಿದೆ. ಲಸಿಕೆ ಪಡೆದರೆ ಕೋವಿಡ್‌ನಿಂದ ದೂರವಿರಬಹುದು. ಕೆಲ ತಪ್ಪು ಮಾಹಿತಿಗಳಿಂದ ಜನರಲ್ಲಿ ಅಂಜಿಕೆ ಉಂಟಾಗಿದೆ ಎಂದು ಸುಧಾಕರ್‌ ಹೇಳಿದರು.

ಈವರೆಗೆ 8,47,908 ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 3,27,201 ಸರ್ಕಾರಿ ಆರೋಗ್ಯ ಸಿಬ್ಬಂದಿ, 4,45,389 ಖಾಸಗಿ ಆರೋಗ್ಯ ಸಿಬ್ಬಂದಿಗಳಿದ್ದು ಒಟ್ಟು 7,72,591 ಆರೋಗ್ಯ ಸಿಬ್ಬಂದಿ ಇದ್ದಾರೆ. ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿದ್ದ 75,318 ಮಂದಿ ಇದ್ದಾರೆ. ಕೋವ್ಯಾಕ್ಸಿನ್‌ ನ 1,46,240 ಡೋಸ್‌ ಶುಕ್ರವಾರ ರಾಜ್ಯಕ್ಕೆ ಬರಲಿದೆ ಎಂದು ಸುಧಾಕರ್‌ ಹೇಳಿದ್ದಾರೆ.