ಬೆಂಗಳೂರು(ಸೆ.23): ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರು, ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ನಡೆಸಿದ ಕೊರೋನಾ ಸೋಂಕು ಪರೀಕ್ಷೆಯಲ್ಲಿ ಸೋಮವಾರದ ವೇಳೆಗೆ ಬರೋಬ್ಬರಿ 110 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಮಂಗಳವಾರ ಸದನದಲ್ಲಿ ಮಾಹಿತಿ ಹಂಚಿಕೊಂಡ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊರೋನಾದಂತಹ ಸ್ಥಿತಿಯಲ್ಲಿ ಅಧಿವೇಶನ ನಡೆಸುತ್ತಿರುವುದರಿಂದ ಶಾಸಕರು, ಪರಿಷತ್‌ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಸೋಮವಾರದ ವೇಳೆಗೆ 2,145 ಮಂದಿ ಪರೀಕ್ಷೆಗೆ ಒಳಪಟ್ಟಿದ್ದು ಈ ಪೈಕಿ 110 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಕೊರೋನಾ ಭೀತಿ: 6 ದಿನಕ್ಕೆ ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಲು ತೀರ್ಮಾನ

‘ಇದೇ ವೇಳೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿಯೇ ಅಧಿವೇಶನದಲ್ಲಿ ಮಾತನಾಡಬೇಕು. ಮಾಸ್ಕ್‌, ಸ್ಯಾನಿಟೈಸರ್‌ನ್ನು ಬಳಕೆ ಮಾಡಬೇಕು. ಕೊರೋನಾದಿಂದ ಎಷ್ಟು ಅಪಾಯ ಎದುರಾಗಲಿದೆ ಎಂಬುದನ್ನು ಖುದ್ದು ಸಿದ್ದರಾಮಯ್ಯ ಅವರು ಬಿಡಿಸಿ ಹೇಳಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು’ ಎಂದು ಎಚ್ಚರಿಸಿದರು.

5.2 ರಷ್ಟು ಪಾಸಿಟಿವಿಟಿ ದರ:

ಸೋಮವಾರದವರೆಗೆ 2,145 ಮಂದಿಗೆ ಪರೀಕ್ಷೆ ನಡೆಸಿದ್ದು 110 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪ್ರತಿ 100 ಮಂದಿ ಪರೀಕ್ಷೆಗೆ ಒಳಪಟ್ಟವರಲ್ಲಿ 5.2 ಮಂದಿಗೆ ಸೋಂಕು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.