ಗೋವಾಕ್ಕೆ ಹೋಗಲು ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ
- ಕರ್ನಾಟಕದಿಂದ ಬರುವ ಪ್ರಯಾಣಿಕರು ಕೊರೋನಾ ನೆಗೆಟಿವ್ ವರದಿ ಕಡ್ಡಾಯ
- ಉತ್ತರ ಗೋವಾ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ
- ಜುಲೈ 6 ರಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್‌ಗಳ ಕಾರ್ಯಾಚರಣೆ
ಬೆಂಗಳೂರು (ಜು.06): ಕರ್ನಾಟಕದಿಂದ ಬರುವ ಪ್ರಯಾಣಿಕರು ಕೊರೋನಾ ನೆಗೆಟಿವ್ ವರದಿ ಹೊಂದಿರಬೇಕು ಎಂದು ಉತ್ತರ ಗೋವಾ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಗೋವಾಕ್ಕೆ ಹೋಗುವ ಪ್ರಯಾಣಿಕರು ಕಡ್ಡಾಯವಾಗಿ ಕೊರೋನಾ ನೆಗೆಟಿವ್ ವರದಿ ಹೊಂದಿರಬೇಕು ಎಂದು ಕೆಎಸ್‌ಆರ್‌ಟಿಸಿ ಸೂಚಿಸಿದೆ.
ಜುಲೈ 6 ರಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಪುನರಾರಂಭಿಸಲಿದೆ. ಈ ಹಿನ್ನೆಲೆಯಲ್ಲಿ ನಿಗಮದ ಬಸ್ಸುಗಳಲ್ಲಿ ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಪ್ರಯಾಣ ಬೆಳೆಸುವವರು 72 ಗಂಟೆಗಳ ಒಳಗೆ ಪರೀಕ್ಷೆ ಮಾಡಿಸಿರುವ ವರದಿ ಕಡ್ಡಾಯವಾಗಿ ಹೊಂದಿರಬೇಕು.
ಡೆಲ್ಟಾಪ್ಲಸ್ ಆತಂಕ: ಗೋವಾ ಗಡಿ ಬಂದ್
ಪ್ರಯಾಣಿಕರು ವರದಿಯ ಸಾಫ್ಟ್ ಕಾಪಿ ಹೊಂದಿರುವುದನ್ನು ಆಯಾ ಬಸ್ ನಿರ್ವಾಹಕರು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು. ಈ ಕುರಿತು ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಪ್ರಯಾಣಿಕರ ದಟ್ಟಣೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.