Asianet Suvarna News Asianet Suvarna News

ದೇಗುಲಗಳ ಆದಾಯ ಶೇ.85 ಖೋತಾ: ಕೊರೋನಾ ಹೊಡೆತ, ಕಾಣಿಕೆ ಇಳಿಕೆ!

ದೇಗುಲಗಳ ಆದಾಯ ಶೇ.85 ಖೋತಾ!| ಕೊರೋನಾ ಹೊಡೆತದಿಂದಾಗಿ ಕಾಣಿಕೆ ಪ್ರಮಾಣ ತೀವ್ರವಾಗಿ ಇಳಿಮುಖ| ಕಳೆದ ವರ್ಷ 317 ಕೋಟಿ, ಈ ವರ್ಷ 4 ತಿಂಗಳಲ್ಲಿ ಬರೀ 18 ಕೋಟಿ ಸಂಗ್ರಹ

Corona Effect The Income Of Temples Slips 85 percent In Karnataka
Author
Bangalore, First Published Aug 26, 2020, 7:54 AM IST

 

ಬೆಂಗಳೂರು

ಕೋವಿಡ್‌ ಹೊಡೆತಕ್ಕೆ ಜನರ ದುಡಿಮೆ, ವ್ಯಾಪಾರವಷ್ಟೇ ಕಡಿಮೆಯಾಗಿರುವುದಲ್ಲ, ದೇವರ ಕಾಣಿಕೆ ಸಹ ಸಾಕಷ್ಟುಇಳಿಕೆಯಾಗಿದೆ. ಲಾಕ್‌ಡೌನ್‌, ಕೊರೋನಾ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ, ಬಸ್‌, ರೈಲ್ವೆ ಸಂಚಾರ ನಿರ್ಬಂಧ ಮುಂತಾದ ಕಾರಣಗಳಿಂದ ರಾಜ್ಯದ ಪ್ರಮುಖ ದೇವಸ್ಥಾನಗಳ ಆದಾಯ ಪ್ರಸಕ್ತ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ.

ಜಾತ್ರೆ, ಉತ್ಸವ, ಮಕ್ಕಳಿಗೆ ರಜೆ, ಮದುವೆ ಮುಂತಾದ ಕಾರಣಗಳಿಂದ ಅತಿ ಹೆಚ್ಚು ಭಕ್ತರು ದೇವಾಲಯಗಳಿಗೆ ಭೇಟಿ ನೀಡುವ ಏಪ್ರಿಲ್‌, ಮೇ ಮತ್ತು ಜೂನ್‌ನಲ್ಲಿ ಸಾಮಾನ್ಯವಾಗಿ ದೇವಾಲಯಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಬರುತ್ತದೆ. ಆದರೆ ಕೊರೋನಾ ಪರಿಣಾಮ ಈ ದೇಗುಲಗಳಿಗೆ ಕಳೆದ ವರ್ಷದ ಈ ಅವಧಿಯಲ್ಲಿನ ಆದಾಯದ ಶೇ.15ರಷ್ಟನ್ನು ಕೂಡ ತಲುಪಲು ಸಾಧ್ಯವಾಗಿಲ್ಲ. ಅಂದಾಜು ಶೇ.85ರಷ್ಟುಆದಾಯ ಖೋತಾ ಆಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯದ ಬೊಕ್ಕಸಕ್ಕೆ ದೇವಾಲಯಗಳಿಂದ 317 ಕೋಟಿ ರು. ಆದಾಯ ಹರಿದು ಬಂದಿತ್ತು. ಈ ವರ್ಷದ ಏಪ್ರಿಲ್‌ 1ರಿಂದ ಜುಲೈ 31ರವರೆಗೆ ಕೇವಲ 18 ಕೋಟಿ ರು. ಮಾತ್ರ ಆದಾಯ ಸಂಗ್ರಹವಾಗಿದೆ.

ಲಾಕ್‌ಡೌನ್‌ ಜಾರಿಯಾದ ಮಾಚ್‌ರ್‍ 24ರಿಂದ ಜೂನ್‌ 8 ರವರೆಗೆ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿಷೇಧವಿತ್ತು. ಜೂನ್‌ 8ರಿಂದ ದೇವಸ್ಥಾನ ತೆರೆಯಲು ಷರತ್ತುಬದ್ಧ ಅನುಮತಿ ನೀಡಿದ್ದರೂ ದೇವಾಲಯಗಳತ್ತ ಭಕ್ತರು ದೊಡ್ಡ ಪ್ರಮಾಣದಲ್ಲಿ ಸುಳಿಯದಿರುವುದು ಸಹ ಆದಾಯ ಕಡಿಮೆಯಾಗಲು ಕಾರಣವಾಗಿದೆ.

ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಈ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಗಳಿಸಿದ್ದು ಕೇವಲ 4.28 ಕೋಟಿ ರು. (ಕಳೆದ ವರ್ಷ (98.92 ಕೋಟಿ ರು.), ಕೊಲ್ಲೂರು ಮೂಕಾಂಬಿಕಾ ದೇವಾಲಯ 4.51 ಕೋಟಿ ರು. (ಕಳೆದ ವರ್ಷ 45.65 ಕೋಟಿ ರು.), ಮೈಸೂರಿನ ಚಾಮುಂಡೇಶ್ವರಿ ದೇಗುಲ 7.4 ಕೋಟಿ ರು. (ಕಳೆದ ವರ್ಷ 35.23 ಕೋಟಿ ರು.) ಕಟೀಲು ದುರ್ಗಾಪರಮೇಶ್ವರಿ ದೇಗುಲ 1.05 ಕೋಟಿ ರು. (ಕಳೆದ ವರ್ಷ 25.42 ಕೋಟಿ ರು.) ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ 1.25 ಕೋಟಿ ರು.(ಕಳೆದ ವರ್ಷ 20.80 ಕೋಟಿ ರು.) ಆದಾಯ ಗಳಿಸಿದೆ.

ಬೆಳಗಾವಿಯ ಸವದತ್ತಿ ರೇಣುಕಾ ಎಲ್ಲಮ್ಮ ದೇಗುಲ 1.67 ಕೋಟಿ ರು. (ಕಳೆದ ವರ್ಷ 16.49 ಕೋಟಿ ರು.) ಉಡುಪಿಯ ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯ 1.2 ಕೋಟಿ ರು. (ಕಳೆದ ವರ್ಷ 11.43 ಕೋಟಿ ರು.), ಬೆಂಗಳೂರಿನ ಬನಶಂಕರಿ ದೇಗುಲ 1.03 ಕೋಟಿ ರು. (ಕಳೆದ ವರ್ಷ 9.04 ಕೋಟಿ ರು.), ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯಕ್ಕೆ ಕೇವಲ 46 ಲಕ್ಷ ರು. (ಕಳೆದ ವರ್ಷ 6.39 ಕೋಟಿ ರು.) ಮಾತ್ರ ಆದಾಯ ಬಂದಿದೆ.

ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯ 83.41 ಲಕ್ಷ ರು. (ಕಳೆದ ವರ್ಷ 8.20 ಕೋಟಿ ರು.) ದಕ್ಷಿಣ ಕನ್ನಡದ ಕದ್ರಿ ಮಂಜುನಾಥ ದೇವಾಲಯ 29.02 ಲಕ್ಷ ರು. (ಕಳೆದ ವರ್ಷ 5.78 ಕೋಟಿ ರು.), ದಕ್ಷಿಣ ಕನ್ನಡದ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 29 ಲಕ್ಷ ರು. (ಕಳೆದ ವರ್ಷ 5.46 ಕೋಟಿ ರು), ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಾಲಯ ಕೇವಲ 88 ಸಾವಿರ ರು. (ಕಳೆದ ವರ್ಷ 5.9 ಕೋಟಿ ರು.), ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಾಲಯ 21 ಲಕ್ಷ ರು.(ಕಳೆದ ವರ್ಷ 5.80 ಕೋಟಿ ರು.) ಹಾಗೂ ಉಡುಪಿಯ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಾಲಯ 65 ಲಕ್ಷ ರು. (ಕಳೆದ ವರ್ಷ 3.93 ಕೋಟಿ ರು.) ಆದಾಯ ಗಳಿಸಿವೆ.

ಹೂವಿನ ಹಡಗಲಿಯ ಮೈಲಾರಲಿಂಗೇಶ್ವರ ದೇವಾಲಯ ಕೇವಲ 59 ಸಾವಿರ ರು. (ಕಳೆದ ವರ್ಷ 2.51 ಕೋಟಿ ರು.), ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಾಲಯ 89 ಸಾ.ರು. (ಕಳೆದ ವರ್ಷ 3.27 ಕೋಟಿ ರು.), ಬಸವನಗುಡಿಯ ದೊಡ್ಡಗಣಪತಿ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯ 25 ಲಕ್ಷ ರು. (ಕಳೆದ ವರ್ಷ 2.39 ಕೋಟಿ ರು.), ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ 2.71 ಲಕ್ಷ ರು. (ಕಳೆದ ವರ್ಷ 1.86 ಕೋಟಿ ರು.) ಹಾಗೂ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಕಳೆದ ನಾಲ್ಕು ತಿಂಗಳಲ್ಲಿ 2.52 ಲಕ್ಷ ರು. (ಕಳೆದ ವರ್ಷ 2.5 ಕೋಟಿ ರು.) ಮಾತ್ರ ಆದಾಯ ಹರಿದುಬಂದಿದೆ.

ಏನಾಯ್ತು?

- ಕೊರೋನಾ ಸೋಂಕು ಹೆಚ್ಚಳ, ಲಾಕ್‌ಡೌನ್‌, ಬಸ್‌-ರೈಲು ಸಂಚಾರ ಸ್ಥಗಿತ ಹಿನ್ನೆಲೆ

- ರಾಜ್ಯದ ದೇವಸ್ಥಾನಗಳಿಗೆ ಭಕ್ತರ ಭೇಟಿ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ

- ಭಕ್ತರು ಅತಿ ಹೆಚ್ಚು ಭೇಟಿ ನೀಡುವ ಏಪ್ರಿಲ್‌, ಮೇ, ಜೂನ್‌ ಆದಾಯವೇ ನಷ್ಟ

- ಕಳೆದ ವರ್ಷ ರಾಜ್ಯದ ದೇವಸ್ಥಾನಗಳಲ್ಲಿ ಒಟ್ಟಾರೆ .317 ಕೋಟಿ ಕಾಣಿಕೆ ಸಂಗ್ರಹ

- ಈ ವರ್ಷ ಏ.1ರಿಂದ ಜು.31ರವರೆಗೆ ಸಂಗ್ರಹವಾಗಿರುವುದು ಕೇವಲ 18 ಕೋಟಿ

Follow Us:
Download App:
  • android
  • ios