ಬೆಂಗಳೂರು (ಅ.12):  ರಾಜ್ಯದಲ್ಲಿ ಭಾನುವಾರ 75 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ತನ್ಮೂಲಕ ಈ ಮಹಾಮಾರಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 10,000ದ ಗಡಿ ಸಮೀಪಿಸಿದೆ. ಇದೇ ವೇಳೆ ರಾಜ್ಯದಲ್ಲಿ 9,523 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ. 10,107 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾಕ್ಕೆ ಈವರೆಗೆ 9,966 ಮಂದಿ ಬಲಿಯಾಗಿದ್ದು, ಸೋಮವಾರ ಈ ಸಂಖ್ಯೆ 10,000 ಗಡಿ ದಾಟುವ ಸಾಧ್ಯತೆಯಿದೆ. ಸೋಮವಾರ ರಾಜ್ಯದಲ್ಲಿ ಕೊರೋನಾದಿಂದಾಗಿ 34 ಮಂದಿ ಮರಣವನ್ನಪ್ಪಿದ್ದರೂ ರಾಜ್ಯ 10 ಸಾವಿರ ಗಡಿ ದಾಟಲಿದೆ. ಮಹಾರಾಷ್ಟ್ರ, ತಮಿಳುನಾಡಿನ ಬಳಿಕ 10,000ಕ್ಕಿಂತ ಹೆಚ್ಚಿನ ಮರಣ ಪ್ರಮಾಣವನ್ನು ದಾಖಲಿಸಿದ ಕಳಂಕಕ್ಕೆ ರಾಜ್ಯ ಪಾತ್ರವಾಗಲಿದೆ.

ಇನ್ನು 9,523 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ಪತ್ತೆ ಹಾಗೂ 10,107 ಮಂದಿ ಗುಣಮುಖರಾಗುವ ಮೂಲಕ ಅಕ್ಟೋಬರ್‌ 6ರ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಹೊಸ ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಸದ್ಯ ರಾಜ್ಯದಲ್ಲಿ 1.20 ಲಕ್ಷ ಸಕ್ರಿಯ ಕೊರೋನಾ ಪ್ರಕರಣಗಳಿವೆ. ಇವರಲ್ಲಿ 904 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರದ ಪಾಸಿಟಿವಿಟಿ ದರ ಶೇ.9.53 ರಷ್ಟಿತ್ತು. ಈವರೆಗೆ 7.10 ಲಕ್ಷ ಮಂದಿ ಕೊರೋನಾ ಸೋಂಕಿನಿಂದ ಬಾಧಿತರಾಗಿದ್ದು, ಇವರಲ್ಲಿ 5.80 ಲಕ್ಷ ಮಂದಿ ಯಶಸ್ವಿಯಾಗಿ ಸೋಂಕನ್ನು ಹಿಮ್ಮೆಟ್ಟಿಸಿದ್ದಾರೆ.

"

200 ಕೊರೋನಾ ಮೃತದೇಹ ಸಾಗಿಸಿದ ಆಂಬುಲೆನ್ಸ್ ಚಾಲಕ ಕೋವಿಡ್‌ಗೆ ಬಲಿ

ಕಳೆದ ಕೆಲ ದಿನಗಳಿಂದ ಸತತವಾಗಿ ಒಂದು ಲಕ್ಷಕ್ಕೂ ಅಧಿಕವಿರುತ್ತಿದ್ದ ಸೋಂಕು ಪತ್ತೆ ಪರೀಕ್ಷೆ ಭಾನುವಾರ ತುಸು ಕಡಿಮೆಯಾಗಿದೆ. ಭಾನುವಾರ 99,923 ಮಂದಿಯ ಕೊರೋನಾ ಪರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಈ ವರೆಗೆ 59.52 ಲಕ್ಷ ಕೊರೋನಾ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೋನಾದಿಂದಾಗಿ 24 ಮಂದಿ ಭಾನುವಾರ ಜೀವ ಕಳೆದುಕೊಂಡಿದ್ದಾರೆ. ಉಳಿದಂತೆ ಮೈಸೂರು 11, ಕೋಲಾರ 7, ದಕ್ಷಿಣ ಕನ್ನಡ 5, ಚಿಕ್ಕಮಗಳೂರು, ಧಾರವಾಡ, ತುಮಕೂರು ತಲಾ 3, ಉತ್ತರ ಕನ್ನಡ, ಶಿವಮೊಗ್ಗ, ಕೊಪ್ಪಳ, ಹಾಸನ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ ತಲಾ 2, ಕಲಬುರಗಿ, ಮಂಡ್ಯ, ಉಡುಪಿ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೊರೋನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ಸೋಂಕಿನ ಅಬ್ಬರ ಮುಂದುವರಿದಿದ್ದು, 4,623 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಬಾಗಲಕೋಟೆ 129, ಬಳ್ಳಾರಿ 226, ಬೆಳಗಾವಿ 331, ಬೆಂಗಳೂರು ಗ್ರಾಮಾಂತರ 155, ಬೀದರ್‌ 19, ಚಾಮರಾಜನಗರ 65, ಚಿಕ್ಕಬಳ್ಳಾಪುರ 55, ಚಿಕ್ಕಮಗಳೂರು 186, ಚಿತ್ರದುರ್ಗ 378, ದಕ್ಷಿಣ ಕನ್ನಡ 265, ದಾವಣಗೆರೆ 122, ಧಾರವಾಡ 188, ಗದಗ 60, ಹಾಸನ 463, ಹಾವೇರಿ 57, ಕಲಬುರಗಿ 81, ಕೊಡಗು 40, ಕೋಲಾರ 172, ಕೊಪ್ಪಳ 48, ಮಂಡ್ಯ 267, ಮೈಸೂರು 541, ರಾಯಚೂರು 62, ರಾಮನಗರ 24, ಶಿವಮೊಗ್ಗ 130, ತುಮಕೂರು 285, ಉಡುಪಿ 171, ಉತ್ತರ ಕನ್ನಡ 115, ವಿಜಯಪುರ 165 ಮತ್ತು ಯಾದಗಿರಿ ಜಿಲ್ಲೆಯಲ್ಲಿ 100 ಮಂದಿಯಲ್ಲಿ ಕೊರೋನಾ ಸೋಂಕು ದೃಢವಾಗಿದೆ.