Asianet Suvarna News Asianet Suvarna News

ಪರಭಾಷಿಕರಿಗೆ ಕನ್ನಡ ಕಲಿಸಲಿದ್ದಾರೆ ಟಾಪ್‌ ಕಾಪ್‌ ಭಾಸ್ಕರ್‌

ಬೆಂಗಳೂರಲ್ಲಿ ಅನ್ಯ ಭಾಷಿಕರ ಹಾವಳಿಯಲ್ಲಿ ಕನ್ನಡದ ಕಂಪು ಮರೆಯಾಗುತ್ತಿದೆ ಎಂದು ಹಳಹಳಿಸದೆ, ಪರಭಾಷಿಕರ ಮನಸ್ಸುಗಳಲ್ಲಿ ಕನ್ನಡದ ಕಂಪು ಬೀರುವ ಕಾರ್ಯಕ್ರಮವೊಂದನ್ನು ರಾಜ್ಯ ಸಶಸ್ತ್ರ ಮೀಸಲು ಪಡೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭಾಸ್ಕರ್‌ ರಾವ್‌ ರೂಪಿಸಿದ್ದಾರೆ.

Cops Teach To Kannada For Non Kannadigas
Author
Bengaluru, First Published Nov 4, 2018, 9:26 AM IST

ಬೆಂಗಳೂರು :  ರಾಜಧಾನಿಯಲ್ಲಿ ಅನ್ಯ ಭಾಷಿಕರ ಹಾವಳಿಯಲ್ಲಿ ಕನ್ನಡದ ಕಂಪು ಮರೆಯಾಗುತ್ತಿದೆ ಎಂದು ಹಳಹಳಿಸದೆ, ಪರಭಾಷಿಕರ ಮನಸ್ಸುಗಳಲ್ಲಿ ಕನ್ನಡದ ಕಂಪು ಬೀರುವ ಕಾರ್ಯಕ್ರಮವೊಂದನ್ನು ರಾಜ್ಯ ಸಶಸ್ತ್ರ ಮೀಸಲು ಪಡೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭಾಸ್ಕರ್‌ ರಾವ್‌ ರೂಪಿಸಿದ್ದಾರೆ.

ನಾಡಹಬ್ಬದ ನಿಮಿತ್ತವಾಗಿ ಕನ್ನಡ ಕಟ್ಟುವ ಕೆಲಸವೊಂದಕ್ಕೆ ಕೈಹಾಕಲು ಯೋಜಿಸಿದ ಎಡಿಜಿಪಿ ಅವರಿಗೆ ಹೊಳೆದಿದ್ದೇ ಪರ ಭಾಷಿಕರಿಂದ ಕನ್ನಡದ ನುಡಿಗಳನ್ನಾಡಿಸುವ ಆಲೋಚನೆ. ಇದಕ್ಕೆ ‘ನಾನೊಬ್ಬ ಕನ್ನಡಿಗ’ ಹೆಸರಿನಲ್ಲಿ ರೂಪರೇಷೆ ಸಿದ್ಧಪಡಿಸಿದ ಅವರು, ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಅನ್ಯ ಭಾಷಿಕರಿಗೆ ಕನ್ನಡ ಕಲಿಕೆ ತರಗತಿ ಪ್ರಾರಂಭಿಸಲು ನಿಧÜರ್‍ರಿಸಿದ್ದಾರೆ.

ಈ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಸಿಕ್ಕಿದೆ. ಅಲ್ಲದೆ ಪರ ಭಾಷಿಕ ಸಮುದಾಯದ ಸಂಘಟನೆಗಳು ಸಹ ಕೈಜೋಡಿಸಿವೆ. ಯೋಜನೆಯಂತೆ ಬೆಂಗಳೂರಿನ ಪರಭಾಷಿಕರ ಬಾಹುಳ್ಯ ಪ್ರದೇಶಗಳನ್ನು ಗುರುತಿಸಿ, ಅವರ ಮನೆಮನೆಗೆ ತೆರಳಿ ಎಡಿಜಿಪಿ ತಂಡವು ಭಾಷೆ ಕಲಿಸಲಿದೆ. ಈ ಕನ್ನಡ ಸೇವೆಯನ್ನು ತಮ್ಮ ದೈನಂದಿನ ಪೊಲೀಸ್‌ ಕಾರ್ಯಗಳಲ್ಲಿ ಸಿಗುವ ಬಿಡುವಿನ ವೇಳೆಯಲ್ಲಿ ಅವರು ನಡೆಸಲಿದ್ದಾರೆ. ಕನ್ನಡ ಭಾಷೆಯ ಉಳಿವಿನ ಬಗ್ಗೆ ಆತಂಕ ವ್ಯಕ್ತಪಡಿಸಿದರೆ ಸಾಲದು, ಅದನ್ನು ಉಳಿಸಲು ನಾವೇ ಸನ್ನದ್ಧರಾಗಬೇಕು ಎಂಬುದು ಎಡಿಜಿಪಿ ಧ್ಯೇಯವಾಗಿದೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಎಡಿಜಿಪಿ ಭಾಸ್ಕರ್‌ ರಾವ್‌, ‘ನಮ್ಮ ಭಾಷೆಯನ್ನು ನಾವು ಉಳಿಸದೆ ಹೋದರೆ ಮತ್ಯಾರು ಉಳಿಸಲು ಸಾಧ್ಯ? ನನ್ನ ಭಾಷೆ ಉಳಿಸುವ ನಿಟ್ಟಿನಲ್ಲಿ ಇದೊಂದು ನನ್ನ ಪುಟ್ಟಕೆಲಸವಾಗಿದೆ’ ಎಂದರು.

ನಾನು ಬೆಂಗಳೂರಿನಲ್ಲಿ ಹುಟ್ಟಿಬೆಳೆದವನು. ಬಾಲ್ಯದ ದಿನಗಳಲ್ಲಿ ನನ್ನೂರಿನ ಕನ್ನಡಕ್ಕೂ, ಈಗಿನ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಬೆಂಗಳೂರು ಅಭಿವೃದ್ಧಿಯಾದಂತೆಲ್ಲ ನನ್ನ ಭಾಷೆಯ ಮೇಲೂ ಅದು ಪ್ರಭಾವ ಬೀರಿತು. ಮೊದಮೊದಲು ಅನ್ಯ ಭಾಷೆ ಮಾತನಾಡಲು ಹಿಂಜರಿಯುತ್ತಿದ್ದ ಜನರು, ಇಂದು ಮಾತೃಭಾಷೆ ನುಡಿಯಲು ಮುಜುಗರ ಅನುಭವಿಸುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನನ್ನ ಪೊಲೀಸ್‌ ಕೆಲಸದ ಹೊರತಾಗಿ ಕನ್ನಡ ಸೇವೆಗೆ ಯೋಜನೆ ರೂಪಿಸಿದ್ದೇನೆ ಎಂದು ಭಾಸ್ಕರ್‌ ರಾವ್‌ ಹೇಳಿದರು.

ತಮ್ಮ ಸಮಸ್ಯೆಗಳನ್ನು ಹೊತ್ತು ಅನ್ಯ ಭಾಷಿಕ ಜನರು ನನ್ನ ಭೇಟಿಗೆ ಬರುತ್ತಾರೆ. ಅವರಿಗೂ ಕನ್ನಡದ ಮೇಲೆ ಅಭಿಮಾನವಿರುತ್ತದೆ. ಆದರೆ, ಅವರಿಗೆ ಕನ್ನಡ ಕಲಿಸುವವರು ಯಾರೂ ಇರುವುದಿಲ್ಲ. ಹೀಗಾಗಿ ಅನ್ಯ ಭಾಷಿಕರು ನೆಲೆಸಿರುವ ಕೋರಮಂಗಲ, ಎಲೆಕ್ಟ್ರಾನಿಕ್‌ ಸಿಟಿ, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಇತರೆ ಅಪಾರ್ಟ್‌ಮೆಂಟ್‌ಗಳು, ವಸತಿ ಪ್ರದೇಶಗಳಲ್ಲಿ ಕನ್ನಡ ಕಲಿಸಲು ಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಭಾಷೆ ಕಲಿಕೆಗೆ ಶಿಕ್ಷಕರನ್ನು ನೇಮಿಸಲು ಆರ್ಥಿಕ ನೆರವು ಸಿಗುತ್ತದೆ. ಇದನ್ನೇ ಬಳಸಿಕೊಂಡು ‘ನಾನೊಬ್ಬ ಕನ್ನಡಿಗ’ ಹೆಸರಿನಲ್ಲಿ ಭಾಷೆ ಕಲಿಕೆಗೆ ನಿರ್ಧರಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌ ಸಹಕಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.

ನವೆಂಬರ್‌ ಮತ್ತು ಡಿಸೆಂಬರ್‌ ಎರಡು ತಿಂಗಳಲ್ಲಿ ಸಾಧ್ಯವಾದಷ್ಟುಜನರಿಗೆ ಭಾಷೆ ಕಲಿಸಲಾಗುತ್ತದೆ. ಈಗಾಗಲೇ ಬಿಹಾರಿ, ಬಂಗಾಳಿ ಸಮುದಾಯದ ಸಂಘಟನೆಗಳ ಜತೆ ಮಾತುಕತೆ ಸಹ ನಡೆಸಲಾಗಿದ್ದು, ಅವರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ ಎಂದು ಹೇಳಿದರು.

ನಮ್ಮ ಭಾಷೆ ನಾವು ಉಳಿಸದೆ ಹೋದರೆ ಮತ್ಯಾರು ಉಳಿಸಲು ಸಾಧ್ಯ. ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿದೆ ಎಂಬ ಕಾರಣಕ್ಕಾಗಿ ನನ್ನ ಭಾಷೆ ಉಳಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವಿದು.

- ಭಾಸ್ಕರ್‌ ರಾವ್‌, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ, ರಾಜ್ಯ ಸಶಸ್ತ್ರ ಮೀಸಲು ಪಡೆ

ವರದಿ : ಗಿರೀಶ್‌ ಮಾದೇನಹಳ್ಳಿ

Follow Us:
Download App:
  • android
  • ios