ವಿಜಯಪುರ(ಡಿ.05): ಪೊಲೀಸ್ ವಾಹನವನ್ನೇ ಪೊಲೀಸರು ಬಾರ್ ಅಂಡ್ ರೆಸ್ಟೋರೆಂಟ್ ಗೆ ತೆಗೆದುಕೊಂಡು ಬಂದ ಘಟನೆ ವಿಜಯಪುರದಲ್ಲಿ ನಡೆದಿದೆ. 

ಇಲ್ಲಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಪೊಲೀಸ್ ಡಿಎಆರ್ ವ್ಯಾನ್ ಸಮೇತ ಬಾರ್‌ಗೆ ಆಗಮಿಸಿ ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

KA 28 G 272 ನಂಬರ್‌ನ ಪೊಲೀಸ್ ವಾಹನದಲ್ಲೇ NTPCಯ ತೆಲಗಿ ಗ್ರಾಮದ ಬಳಿ ಇರುವ ಸದಾಶಿವ ಬಾರ್ ಗೆ ಬಂದು, ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದ್ದು, ಈ ಕೂಡಲೇ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.