Anti Conversion Bill: ಮತಾಂತರ ನಿಷೇಧ ಕಾಯ್ದೆ ಬಸವ ತತ್ವಕ್ಕೆ ವಿರುದ್ಧ: ಡಿಕೆಶಿ
* ಸುಗ್ರೀವಾಜ್ಞೆಗೆ ಕಾಂಗ್ರೆಸ್ ತೀವ್ರ ವಿರೋಧ
* ಬಿಜೆಪಿ ಸರ್ಕಾರ ಅಭಿವೃದ್ಧಿ ಬಗ್ಗೆ ಗಮನಹರಿಸದೆ ಭಾವನಾತ್ಮಕ, ಕೋಮು ವಿಚಾರವನ್ನು ಮುಂದೆ ತರುತ್ತಿದೆ
* ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈಗ ಮತ್ತೆ ಮತಾಂತರ ನಿಷೇಧ ಕಾಯಿದೆಯನ್ನು ಎತ್ತಿದೆ
ಬೆಂಗಳೂರು(ಮೇ.13): ಬಿಜೆಪಿ ಸರ್ಕಾರ(BJP Government) ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ(Anti Conversion Law) ಸುಗ್ರೀವಾಜ್ಞೆ ಬಸವಣ್ಣನವರ ತತ್ವಕ್ಕೆ(Basavanna's Principle)ವಿರುದ್ಧ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ವಿಚಾರ ತರುತ್ತಿದ್ದಾರೆ. ಮತಾಂತರ ನಿಷೇಧ ಕಾಯಿದೆಯನ್ನು ಹೇಗೆ ವಿರೋಧಿಸಬೇಕೋ ಹಾಗೆ ವಿರೋಧಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಚನ್ನಪಟ್ಟಣದ ವಿವಿಧ ಪಕ್ಷಗಳ ನಾಯಕರನ್ನು ಕಾಂಗ್ರೆಸ್‌ಗೆ(Congress) ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ರಾಜ್ಯಾದ್ಯಂತ(Karnataka) ನಾವು ಸಮೀಕ್ಷೆ ಮಾಡಿದ್ದು, ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಬಗ್ಗೆ ಗಮನಹರಿಸದೆ ಭಾವನಾತ್ಮಕ, ಕೋಮು ವಿಚಾರವನ್ನು ಮುಂದೆ ತರುತ್ತಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈಗ ಮತ್ತೆ ಮತಾಂತರ ನಿಷೇಧ ಕಾಯಿದೆಯನ್ನು ಎತ್ತಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.
ಮತಾಂತರ ನಿಷೇಧ ಕಾಯ್ದೆಯಿಂದ ಆತಂಕ: ಕ್ರಿಶ್ಚಿಯನ್ ಸಮುದಾಯ!
ರಾಜ್ಯಾದ್ಯಂತ ಇರುವಂತೆಯೇ ಚನ್ನಪಟ್ಟಣದಲ್ಲೂ ಶೇ.40ರಷ್ಟುಕಮಿಷನ್ ನಡೆಯುತ್ತಿದೆ. ಬಿಜೆಪಿಯಲ್ಲಿರುವ ಅನೇಕರು ಪಕ್ಷಕ್ಕೆ ಬರಲು ಸಿದ್ಧರಿದ್ದು, ಈಗಲೇ ಏನೂ ಹೇಳಬೇಡಿ, ಸಮಯ ಬರಲಿ ಎಂದು ಹೇಳುತ್ತಿದ್ದಾರೆ. ನೀವೆಲ್ಲರೂ ಪ್ರತಿ ಬೂತ್ ಮಟ್ಟದಲ್ಲಿ ಹಾಗೂ ಹಳ್ಳಿ, ಹಳ್ಳಿಗೆ ಹೋಗಬೇಕು. ಇನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯ್ತಿ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ನೀವೆಲ್ಲರೂ ಅದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಪಕ್ಷಕ್ಕೆ ಸೇರ್ಪಡೆಯಾದವರಿಗೆ ಕರೆ ನೀಡಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿದರು. ಚನ್ನಪಟ್ಟಣದ ಪ್ರಸನ್ನ ಪಿ. ಗೌಡ, ಬುಕ್ಕಸಾಗರ ಕುಮಾರ್ ಸೇರಿದಂತೆ ಹಲವರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಮತಾಂತರ ನಿಷೇಧಕ್ಕೆ ಸುಗ್ರೀವಾಜ್ಞೆ
ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನು ಸುಗ್ರೀವಾಜ್ಞೆ(Ordinance) ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.
ಬೆಳಗಾವಿ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರಗೊಂಡಿದೆ. ಆದರೆ, ಕಾರಣಾಂತರಗಳಿಂದ ವಿಧಾನಪರಿಷತ್‌ನಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲ. ಸಂವಿಧಾನ ಸರ್ಕಾರಕ್ಕೆ ನೀಡಿರುವ ಅವಕಾಶವನ್ನು ಬಳಕೆ ಮಾಡಿಕೊಂಡು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ನಮ್ಮ ಧರ್ಮದವರು ಅನ್ಯಧರ್ಮಕ್ಕೆ ಹೋಗಲು ಬಿಡಬಾರದು: ನಿರ್ಮಲಾನಂದ ಶ್ರೀ
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಶೀಘ್ರದಲ್ಲಿಯೇ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗುವುದು. ರಾಜ್ಯಪಾಲರು ಅಂಕಿತ ಹಾಕಿದ ಬಳಿಕ ಮತಾಂತರ ನಿಷೇಧ ಕಾಯ್ದೆಯು ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ. ಮುಂದಿನ ಅಧಿವೇಶನದ ವೇಳೆ ವಿಧಾನಪರಿಷತ್‌ನಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುವುದು. ಈ ಹಿಂದೆ ವಿಧಾನಸಭೆಯಲ್ಲಿ ಮಂಡಿಸಿದ ವೇಳೆ ರೂಪಿಸಿದ ಅಂಶಗಳೇ ಯಥಾವತ್ತಾಗಿ ಸುಗ್ರೀವಾಜ್ಞೆಯಲ್ಲಿ ಇರಲಿವೆ ಎಂದರು.
ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಿ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು. ಆದರೆ, ಪರಿಷತ್‌ನಲ್ಲಿ ಸರ್ಕಾರಕ್ಕೆ ಸಂಖ್ಯಾಬಲ ಕೊರತೆ ಇತ್ತು. ಹೀಗಾಗಿ ಮೇಲ್ಮನೆಯಲ್ಲಿ ಉದ್ದೇಶಿತ ಮಸೂದೆಯನ್ನು ಮಂಡಿಸಿರಲಿಲ್ಲ. ಈಗ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತಿದೆ. ಪರಿಷತ್‌ನಲ್ಲಿ ಸರ್ಕಾರದ ಸಂಖ್ಯಾಬಲ ಹೆಚ್ಚಾಗಲಿರುವ ಕಾರಣ ಮುಂದಿನ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳುವ ಉದ್ದೇಶವನ್ನು ಹೊಂದಿದೆ.
ಕಾಯ್ದೆಯಲ್ಲಿ ಏನಿದೆ?
-ಬಲವಂತ, ವಂಚನೆ, ಒತ್ತಾಯ ಮತ್ತು ಆಮಿಷದ ಮೂಲಕ ನಡೆಸುವ ಮತಾಂತರ ನಿಷೇಧ
-ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹ್ಯೋದೋಗಿಗಳು ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್‌ಐಆರ್
- ಬಲವಂತದ ಮತಾಂತರಕ್ಕೆ 3-5 ವರ್ಷದವರೆಗೆ ಜೈಲು, 25 ಸಾವಿರ ರು. ದಂಡ
-ಅಪ್ರಾಪ್ತ ವ್ಯಕ್ತಿ, ಮಹಿಳೆ, ಎಸ್‌ಸಿ/ಎಸ್‌ಟಿ ವ್ಯಕ್ತಿಯ ಬಲವಂತದ ಮತಾಂತರಕ್ಕೆ 3-10 ವರ್ಷ ಜೈಲು, 50ಸಾವಿರ ರು. ದಂಡ
-ಮತಾಂತರ ಬಯಸುವ ವ್ಯಕ್ತಿ ಕನಿಷ್ಠ ಎರಡು ತಿಂಗಳು ಮೊದಲು ಜಿಲ್ಲಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು