ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹೆಸರುಗಳು ಕಾಣಿಸಿಕೊಂಡು ಭಾರೀ ವಿವಾದ ಸೃಷ್ಟಿಯಾಗಿದೆ. ಬಿಜೆಪಿಯಿಂದ ಉಚ್ಛಾಟಿತರಾದ ಇವರ ನೇಮಕಾತಿಗೆ ಪಕ್ಷದೊಳಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಜಿಲ್ಲಾಧ್ಯಕ್ಷರು ಈ ನೇಮಕಾತಿಗೆ ತಡೆ ನೀಡಿದ್ದಾರೆ.

ಕಾರವಾರ (ಏ.15) ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಲ್ಲಿ ಆರ್‌ಎಸ್ಎಸ್ ಕಾರ್ಯಕರ್ತರ ಹೆಸರು ಪ್ರತ್ಯಕ್ಷವಾಗಿ ಭಾರೀ ಗದ್ದಲ ಸೃಷ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಆರೆಎಸ್ಸೆಸ್‌ ಕಾರ್ಯಕರ್ತರ ಹೆಸರು ಸೇರ್ಪಡೆ ಆಗಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೇಮಕಾತಿಗೆ ತಡೆ ನೀಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆರ್‌ಎಸ್ಎಸ್ ಕಾರ್ಯಕರ್ತ ಸಿದ್ಧವೀರೇಶ್ ಮೇಘರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿ ರವಿಭಟ್ ಬರಗದ್ದೆ ಅವರನ್ನು ನೇಮಿಸಲಾಗಿತ್ತು. ಇವರಿಬ್ಬರೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂದು ಹೇಳಲಾಗಿದೆ.

ಇದು ಕಾಂಗ್ರೆಸ್ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ನೇಮಕಾತಿಯನ್ನು ತಡೆಹಿಡಿಯಲಾಗಿದೆ. ಇವರು ಬಿಜೆಪಿಯಿಂದ ಉಚ್ಛಾಟಿತ ಶಾಸಕ ಶಿವರಾಮ ಹೆಬ್ಬಾರ್ ಆಪ್ತರಾಗಿರುವ ಹಿನ್ನೆಲೆಯಲ್ಲಿ ಈ ನೇಮಕಾತಿ ಆಗಿದೆ ಎಂದು ಮೂಲಗಳು ತಿಳಿಸಿವೆ. ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ಹತ್ತಿರವಾಗಿದ್ದು, ಅವರ ಸೂಚನೆಯ ಮೇರೆಗೆ ನೇಮಕಾತಿ ಆಗಿರಬಹುದು. ಆದರೆ ಹೆಬ್ಬಾರ್ ಇನ್ನೂ ಕಾಂಗ್ರೆಸ್‌ ಸೇರ್ಪಡೆ ಆಗಿಲ್ಲ. ಹಾಗಾಗಿ ಆಕ್ಷೇಪ ವ್ಯಕ್ತವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರಿಂದ ಪದಾಧಿಕಾರಿಯನ್ನಾಗಿ ಮಾಡಲಾಗಿತ್ತು.‌ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ನೇಮಕಾತಿಯನ್ನು ತಡೆಹಿಡಿಯಲಾಗಿದೆ.

-ಸಾಯಿ ಗಾಂವಕರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ