ಆರು ಮಂದಿ ಬಲಿಕೊಟ್ಟರೂ ಎಚ್ಚೆತ್ತುಕೊಳ್ಳದ ಸರ್ಕಾರ: ಮತ್ತೆ ಕಲುಷಿತ ನೀರು ಸೇವನೆಯಿಂದ 54 ಮಂದಿಗೆ ವಾಂತಿ, ಬೇಧಿ

ರಾಯಚೂರು ಮತ್ತು ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ 6 ಮಂದಿ ಸಾವಿನ ಬೆನ್ನಲ್ಲೇ ಯಾದಗಿರಿಯಲ್ಲಿ ಕಲುಷಿತ ನೀರು ಸೇವನೆಯಿಂದ 54 ಮಂದಿಯಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ. 

contaminated drinking water consuming 54 people vomit in Yadgiri sat

ಯಾದಗಿರಿ (ಜೂ.27): ರಾಜ್ಯದಲ್ಲಿ ಈಗಾಗಲೇ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಬೇಧಿ ಕಾಣಿಸಿಕೊಂಡು 6 ಜನರು ಬಲಿಯಾಗಿದ್ದಾರೆ. ಆದರೆ, ಇಷ್ಟಾದರೂ ಎಚ್ಚೆತಯ್ತುಕೊಳ್ಳದ ರಾಜ್ಯ ಸರ್ಕಾರ ಈಗ ಯಾದಗಿರಿಯಲ್ಲೂ ಕಲುಷಿತ ನೀರು ಪೂರೈಕೆ ಮಾಡುವ ಮೂಲಕ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿ 54 ಮಂದಿ ಕಲುಷಿತ ನೀರು ಸೇವನೆಯಿಂದ ವಾಂತಿ, ಬೇಧಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆಯುತ್ತಿದ್ದಾರೆ. 

ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕಲುಷಿತ ನೀರು ಪೂರೈಕೆ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ 6 ಮಂದಿಗೂ ಅಧಿಕ ಜನರು ವಾಂತಿ ಬೇಧಿಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಸರ್ಕಾರದಿಂದ ಪೂರೈಕೆ ಮಾಡುತ್ತಿರುವ ಕಲುಷಿತ ನೀರಿನ ಸೇವನೆಯೇ ಕಾರಣ ಎಂಬುದು ತನಿಖೆಯಿಂದಲೂ ಬಯಲಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಸರ್ಕಾರವು ಕಠಿಣ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದೆ. ಹೀಗಾಗಿ, ಯಾದಗಿರಿಯ ಗುರುಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿಯೂ ಕೂಡ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಕಲುಷಿತ ನೀರು ಪೂರೈಸಿದ್ದು, ಇದನ್ನು ಸೇವಿಸಿದ ಗ್ರಾಮದ 50ಕ್ಕೂ ಅಧಿಕ ಜನರು ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆ. ವಾಂತಿ, ಬೇಧಿ ಕಾಣಿಸಿಕೊಂಡವರನ್ನು ಗುರುಮಠಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು: ಇಬ್ಬರು ಪಿಡಿಒಗಳನ್ನು ಅಮಾನತು ಮಾಡಿದ ಸರ್ಕಾರ

ಇಮ್ಲಾಪುರ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ: ಇನ್ನು ಇಮ್ಲಾಪುರ ಗ್ರಾಮದಲ್ಲಿ ನಿನ್ನೆಯಿಂದ ವಾಂತಿ ಭೇದಿ ಉಲ್ಬಣವಾಗಿದೆ. ಇಂದು ಬೆಳಗ್ಗೆ ವೇಳೆಗೆ ಗುರುಮಠಕಲ್‌ ಆಸ್ಪತ್ರೆಗೆ ಒಂದೇ ಗ್ರಾಮದ ಹಲವು ಜನರು ಆಗಮಿಸಿದ ಹಿನ್ನೆಲೆಯಲ್ಲಿ ಕೂಡಲೇ ತಾಲೂಕು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಗ್ರಾಮಕ್ಕೆ ತೆರಳಿದೆ. ಇನ್ನು ಗ್ರಾಮದಲ್ಲಿ ಒಟ್ಟು 54 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಈ ಪೈಕಿ 22 ಜನರಿಗೆ ತೀವ್ರ ವಾಂತಿ ಭೇದಿ ಉಂಟಾಗಿದ್ದು, ಅವರನ್ನು ಗುರುಮಠಕಲ್‌ ತಾಲೂಕು ಮಟ್ಟದ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಉಳಿದಂತೆ 32 ಜನರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಫೆಬ್ರವರಿಯಲ್ಲಿ ಮಹಿಳೆ ಸಾವು: ಇನ್ನು ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂನಿನ ಆನಪುರ ಗ್ರಾಮದಲ್ಲಿ ಫೆಬ್ರವರಿ ತಿಂಗಳು ಕಲುಷಿತ ನೀರು ಸೇವನೆಯಿಂದ 30 ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಈ ವೇಳೆ ವಾಂತಿ, ಬೇಧಿಯಿಂದ ಬಳಲಿ ಒಬ್ಬ ಮಹಿಳೆ ಕೂಡ ಸಾವನ್ನಪ್ಪಿದ್ದಳು. ಇಷ್ಟಾದರೂ ಎಚ್ಚೆತ್ತುಕೊಳ್ಲದ ತಾಲೂಕು ಆಡಳಿತ ಮಂಡಳಿಯು ನೀರು ಪೂರೈಕೆಯಲ್ಲಿ ಎಚ್ಚರವಹಿಸದೇ ಕಲುಷಿತ ನೀರನ್ನು ಗ್ರಾಮೀಣ ಜನರಿಗೆ ಪೂರೈಕೆ ಮಾಡುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಜೀವನ ಮಾಡಲೂ ಪರದಾಡುವ ಜನರಿಗೆ, ಸರ್ಕಾರವೂ ಕೂಡ ಕಲುಷಿತ ನೀರು ಪೂರೈಕೆ ಮಾಡಿ ಸಾವಿನ ದವಡೆಗೆ ನೂಕುತ್ತಿದೆ.

ಟ್ಯಾಂಕರ್‌ ಮೂಲಕ ನೀರು ಪೂರೈಕೆ: ಇಮ್ಲಾಪುರ ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದ್ದು, ಈ ತಾತ್ಕಾಲಿಕ ಕೇಂದ್ರದಲ್ಲಿ  8 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಮ್ಲಾಪುರ ಗ್ರಾಮಕ್ಕೆ ಓವರ್ ಹೆಡ್ ಟ್ಯಾಂಕರ್  ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ನೀರು ಪೂರೈಕೆ ವೇಳೆ ಎರಡು ಲಿಕೇಜ್ ಪತ್ತೆಯಾಗಿದೆ. ಈ ಲಿಕೇಜ್ ನಿಂದ ಕುಡಿಯುವ ನೀರಿಗೆ ಕಲುಷಿತ ನೀರು ಸೇರ್ಪಡೆ ಸಾಧ್ಯತೆಯಿದೆ. ವಾಂತಿ, ಬೇಧಿ ಘಟನೆ ನಂತರ ಗ್ರಾಮಕ್ಕೆ ಪೂರೈಕೆಯಾಗುವ ನೀರು ಸ್ಥಗಿತಗೊಳಿಸಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆ, ಜಿ.ಪಂ ಅಧಿಕಾರಿಗಳ ಭೇಟಿ, ಪರಿಶೀಲನೆ ಮಾಡಿದ್ದಾರೆ.

ಸರ್ಕಾರದ ತಪ್ಪಿನಿಂದ ಸಾವಾದರೆ 2 ಲಕ್ಷ ರೂ. ಪರಿಹಾರ, ಆನೆ ತುಳಿದರೆ 15 ಲಕ್ಷ ರೂ. ಪರಿಹಾರ: ಇದೆಂಥಾ ತಾರತಮ್ಯ

ಕುಡಿಯುವ ನೀರಿನ ಮಾದರಿ ಸಂಗ್ರಹ:  ಇನ್ನು ಗ್ರಾಮಕ್ಕೆ ಪೂರೈಕೆ ಮಾಡುತ್ತಿದ್ದ ನೀರಿನ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ನೀರಿನ ರಿಪೋರ್ಟ್ ಬಂದ ನಂತರ ವಾಂತಿ, ಬೇಧಿಗೆ ಕಾರಣವೇನು ಎಂಬುದು ಗೊತ್ತಾಗಲಿದೆ. ಜೊತೆಗೆ, ಲಿಕೇಜ್ ಇದ್ದಲ್ಲಿ ದುರಸ್ತಿ ಮಾಡಲಾಗುತ್ತದೆ ಎಂದು ಜಿ.ಪಂ ಉಪ ಕಾರ್ಯದರ್ಶಿ ಅಮರೇಶ್ವರ ನಾಯಕ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios