* ಹಿಂದುಳಿದ ಆಯೋಗದ ವರದಿ ಅಂಗೀಕರಿಸಲು ಒತ್ತಡ* ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಚರ್ಚೆ * ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಾನೂನು ಹೋರಾಟ ನಡೆಸಲು ತೀರ್ಮಾನ 

ಬೆಂಗಳೂರು(ಜು.11): ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು (ಜಾತಿ ಗಣತಿ) ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯನ್ನು ಅಂಗೀಕರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಬೃಹತ್‌ ಹೋರಾಟ ರೂಪಿಸಲು ರಾಜ್ಯ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಈ ಬಗ್ಗೆ ಹಿಂದುಳಿದ ವರ್ಗಗಳ ಮುಖಂಡರನ್ನು ಕರೆಸಿಕೊಂಡು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಚರ್ಚೆ ನಡೆಸಿದ್ದು, ವರದಿ ಅಂಗೀಕಾರಕ್ಕೆ ಒತ್ತಾಯಿಸಿ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಾನೂನು ಹೋರಾಟ ನಡೆಸಲು ಸಹ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌. ದ್ವಾರಕಾನಾಥ್‌, ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌, ಮಾಜಿ ಸದಸ್ಯರಾದ ವೇಣುಗೋಪಾಲ, ಮುಖ್ಯಮಂತ್ರಿ ಚಂದ್ರು, ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ಅವರು ವರದಿಯನ್ನು ಅಂಗೀಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚಿಸಿದರು.

ಜಾತಿ ಗಣತಿ ವರದಿ ತಾರ್ಕಿಕ ಅಂತ್ಯಕ್ಕೆ: ಜಯಪ್ರಕಾಶ್‌ ಹೆಗ್ಡೆ

ರಾಜ್ಯ ಸರ್ಕಾರ ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನೀಡಿದ್ದ ವರದಿಯನ್ನು ಅಂಗೀಕರಿಸಿಲ್ಲ ಹಾಗೂ ತಿರಸ್ಕಾರವನ್ನೂ ಮಾಡಿಲ್ಲ. ಕೊರೋನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ವರದಿ ಅಂಗೀಕರಿಸುವಂತೆ ಮಾಡಬೇಕು. ಈ ಬಗ್ಗೆ ಕಾನೂನು ಹೋರಾಟವನ್ನೂ ನಡೆಸಬೇಕು ಎಂದು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಸಿದ್ದರಾಮಯ್ಯ ಭೇಟಿ ಬಳಿಕ ಹಿಂದುಳಿದ ವರ್ಗಗಳ ಮುಖಂಡರ ತಂಡವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನೂ ಭೇಟಿ ಮಾಡಿದೆ. ಈ ವೇಳೆ ಕಾಂಗ್ರೆಸ್‌ನಿಂದ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದು, ಡಿ.ಕೆ. ಶಿವಕುಮಾರ್‌ ಅವರೂ ಪೂರಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲೇ ಮತ್ತಷ್ಟುಸಮುದಾಯಗಳ ಸಂಘಟನೆಗಳ ಜತೆ ಚರ್ಚೆ ನಡೆಸಿ ಹೋರಾಟದ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.